WPL 2025 – ಗುಜರಾತ್ ಜೈಂಟ್ಸ್ ವಿರುದ್ಧ ರಿಚಾ ಘೋಷ್ ಘರ್ಜನೆ: ಭರ್ಜರಿ ಗೆಲುವಿನೊಂದಿಗೆ RCB ಶುಭಾರಂಭ!

ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್, ಎಲ್ಲೀಸ್ ಪೆರ್ರಿ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ತಂಡ ಮಹಿಳಾ ಪ್ರೀಮಿಯರ್ ಲೀಗ್ ನ ಉದ್ಘಾಟನಾ ಪಂದ್ಯದಲ್ಲಿ 6 ವಿಕೆಟ್ ಗಳ ಭರ್ಜರಿಯಾಗಿ ಜಯಿಸಿದೆ.

ವಡೋದರಾದಲ್ಲಿ ಶುಕ್ರವಾರ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸ್ಮೃತಿ ಮಂದಾನ ನೇತೃತ್ವದ ಆರ್ ಸಿಬಿಯು ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಗುಜರಾತ್ ಜೈಂಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಗಳನ್ನು ಪೇರಿಸಿತು. ಗೆಲ್ಲಲು ಬೃಹತ್ ಗುರಿ ಪಡೆದ ಆರ್ ಸಿಬಿ ವನಿತೆಯರ ಬಳಗ ಇನ್ನೂ 9 ಎಸೆತಗಳು ಬಾರಿ ಇರುವಾಗಲೇ ಗೆದ್ದು ಬೀಗಿತು.

ಆರ್ ಸಿಬಿಗೆ ಆರಂಭದಲ್ಲೇ ಆಘಾತ

ಗುಜರಾತ್ ಜೈಂಟ್ಸ್ ತಂಡದ ಆಫ್ ಸ್ಪಿನ್ನರ್ ಗಾರ್ಡ್ನರ್ ಅವರು ಆರಂಭದಲ್ಲೇ ಸ್ಮೃತಿ ಮಂದಾನ(9) ಮತ್ತು ಡ್ಯಾನಿ ವ್ಯಾಟ್ ಹಾಡ್ಜ್(4) ಅವರ ವಿಕೆಟ್ ಉರುಳಿಸುವ ಮೂಲಕ ಆರ್ ಸಿಬಿಗೆ ಆರಂಭದಲ್ಲೇ ಆಘಾತ ನೀಡಿದರು. ಆದರೆ 3ನೇ ಕ್ರಮಾಂಕದ ಬ್ಯಾಟರ್ ಎಲ್ಲೀಸ್ ಪೆರ್ರಿ(57) ಮತ್ತು 4ನೇ ಕ್ರಮಾಂಕಿತೆ ರಾಘ್ವಿ ಬಿಸ್ಟ್ ಅವರು 3ನೇ ವಿಕೆಟ್ ಗೆ 86 ರನ್ ಗಳ ಮಹತ್ವದ ಜತೆಯಾಟವಾಡಿದರು. ಇವರಿಬ್ಬರು ಕೇವಲ 11 ಓವರ್ ಗಳಲ್ಲಿ 100 ರನ್ ಗಳ ಗಡಿ ದಾಟಿಸಿದರು.

ತಂಡದ ಮೊತ್ತ 100 ಇರಬೇಕಾದರೆ 25 ರನ್ ಗಳಿಸಿದ್ದ ರಾಘ್ವಿ ಬಿಸ್ಟ್ ಅವರು ಡಾಟಿನ್ ಬೌಲಿಂಗ್ ನಲ್ಲಿ ಸಯಾಲಿ ಸತ್ಘರೆಗೆ ಕ್ಯಾಚಿತ್ತು ಔಟಾದರು. ಆ ಮೊತ್ತಕ್ಕೆ ಮತ್ತೆ 9 ರನ್ ಸೇರಿಸುವಷ್ಟರಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಎಲ್ಲಿಸ್ ಪೆರ್ರಿ ಅವರ ವಿಕೆಟ್ ಅನ್ನು ಸತ್ಘರೆ ಪಡೆದರು. ಅವರು ಕೇವಲ 34 ಎಸೆತಗಳನ್ನು ಎದುರಿಸಿ 6 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 57 ರನ್ ಗಳಿಸಿದರು. ಆರ್ ಸಿಬಿಗ ಬೆನ್ನು ಬೆನ್ನಿಗೆ ಎರಡು ವಿಕೆಟ್ ಕಳೆದುಕೊಂಡು ಮತ್ತೆ ಸಂಕಷ್ಟಕ್ಕೆ ಸಿಲುಕಿತು.

ರಿಚಾ- ಕನಿಕಾ ಹೊಡಿಬಡಿ ಆಟ

ಇವರಿಬ್ಬರ ವಿಕೆಟ್ ಪತನದ ಬಳಿಕ ಒಟ್ಟಾದ ರಿಚಾ ಘೋಷ್ ಮತ್ತು ಕನಿಕಾ ಅಹುಜಾ ಮತ್ತೆ ವಿಕೆಟ್ ಬೀಳಲು ಅವಕಾಶ ಕೊಡಲೇ ಇಲ್ಲ. ಗುಜರಾತ್ ಬೌಲರ್ ಗಳನ್ನು ಚೆಂಡಾಡಿದ ಇಬ್ಬರು ಬ್ಯಾಟರ್ ಗಳು ತಂಡವನ್ನು ವಿಜಯದ ದಡ ದಾಟಿಸಿದರು. ರಿಚಾ ಘೋಷ್ ಅವರು ಕವಲ 27 ಎಸೆತಗಳಿಂದ 64 ರನ್ ಚಚ್ಚಿದರು. ಅದರಲ್ಲಿ 7 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಗಳಿದ್ದವು. ಇನ್ನು ಕನಿಕಾ ಅಹುಜಾ ಅವರು ಕೇವಲ 13 ಎಸೆತಗಳಿಂದ 30 ರನ್ ಗಳಿಸಿದರು. ಅದರಲ್ಲಿ 4 ಬೌಂಡರಿಗಳಿದ್ದವು.

ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ತಂಡದ ಪರ ಆಶ್ಲೆ ಗಾರ್ಡ್ನರ್(79) ಮತ್ತು ಬೆಥ್ ಮೂನಿ(56) ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರಿಂದ ತಂಡ 200 ರನ್ ಗಡಿ ದಾಟುವಂತಾಯಿತು. ಆರ್ ಸಿಬಿ ಪರ ರೇಣುಕಾ ಸಿಂಗ್ 2 ವಿಕೆಟ್ ಕಬಳಿಸಿದರು. ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿಗೆ ಕಾರಣಕರ್ತೆಯಾದ ರಿಚಾ ಘೋಷ್ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Source : https://vijaykarnataka.com/sports/cricket/news/womens-premier-league-royal-challengers-bengaluru-beat-gujarat-giants-in-inaugural-match/articleshow/118256460.cms

Leave a Reply

Your email address will not be published. Required fields are marked *