WPL 2025: ಅಬ್ಬರಿಸಿದ ಶೆಫಾಲಿ, ಮಿಂಚಿದ ಕನ್ನಡತಿ ನಿಕಿ ಪ್ರಸಾದ್! ಮುಂಬೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ಗೆ 2 ವಿಕೆಟ್​ ರೋಚಕ ಜಯ

ಶೆಫಾಲಿ ವರ್ಮಾ ಹಾಗೂ ಕನ್ನಡತಿ ನಿಕಿ ಪ್ರಸಾದ್​ ಅವರ ತಾಳ್ಮೆಯ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 2 ವಿಕೆಟ್​ಗಳ ರೋಚಕ ಜಯ ಸಾಧಿಸಿ 3ನೇ ಆವೃತ್ತಿಯ ಐಪಿಎಲ್​ನಲ್ಲಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ, ಮುಂಬೈ ಮೊದಲು ಬ್ಯಾಟಿಂಗ್ ಮಾಡಿ 164 ರನ್ ಗಳಿಸಿತು, ಉತ್ತರವಾಗಿ, ದೆಹಲಿ ಕೊನೆಯ ಎಸೆತದಲ್ಲಿ ಎರಡು ರನ್ ಗಳಿಸಿ  165 ರನ್​ಗಳಿಸುವ ಮೂಲಕ 2 ವಿಕೆಟ್‌ಗಳ ಗೆಲುವು ಖಚಿತಪಡಿಸಿತು.

ಈ ಪಂದ್ಯವು ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದಿದ್ದು, ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟ್ ಮಾಡಿತು. ಮುಂಬೈ ಪರ ನ್ಯಾಟ್ ಸಿವರ್ ಬ್ರಂಟ್ 59 ಎಸೆತಗಳಲ್ಲಿ 13 ಬೌಂಡರಿಗಳ ಸಹಿತ ಅಜೇಯ 80 ರನ್ ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ನಾಯಕಿ ಹರ್ಮನ್‌ಪ್ರೀತ್ ಕೌರ್ 22 ಎಸೆತಗಳಲ್ಲಿ 42 ರನ್ ಗಳಿಸಿ ಮುಂಬೈ ತಂಡ 164 ರನ್‌ಗಳ ಗುರಿ ತಲುಪಲು ನೆರವಾದರು. ಇವರಿಬ್ಬರನ್ನ ಹೊರೆತುಪಡಿಸಿದರೆ ಯಸ್ತಿಕಾ ಭಾಟಿಯಾ (11) ಮಾತ್ರ ಎರಡಂಕಿ ಮೊತ್ತ ದಾಟಿದರು. ಉಳಿದೆಲ್ಲಾ ಬ್ಯಾಟರ್​ಗಳು ಎರಡಂಕಿಯ ಗಡಿಯನ್ನು ಮುಟ್ಟಲು ಸಹ ಸಾಧ್ಯವಾಗಲಿಲ್ಲ.

ದೆಹಲಿ ಕ್ಯಾಪಿಟಲ್ಸ್ ಪರ ಅನ್ನಾ ಸದರ್ಲ್ಯಾಂಡ್ 34ಕ್ಕೆ 3 ವಿಕೆಟ್ ಪಡೆದರೆ, ಶಿಖಾ ಪಾಂಡೆ 14ಕ್ಕೆ2 ವಿಕೆಟ್ ಪಡೆದರು. ಅಲಿಸ್​ ಕ್ಯಾಪ್ಸೆ 25ಕ್ಕೆ 1, ಮಿನ್ನು ಮಣಿ 23ಕ್ಕೆ1 ವಿಕೆಟ್ ಪಡೆದರು.

165 ರನ್​ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪವರ್​ ಪ್ಲೇನಲ್ಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತು. ಶೆಫಾಲಿ ವರ್ಮಾ 18 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್​ ಸಹಿತ 43 ರನ್​ಗಳಿಸಿ ಔಟ್ ಆದರು. ಇವರ ವಿಕೆಟ್ ಬೆನ್ನಲ್ಲೇ ನಾಯಕಿ ಮೆಗ್ ಲ್ಯಾನಿಂಗ್ 19 ಎಸೆತಗಳಲ್ಲಿ 15 ರನ್​ಗಳಿಸಿ ಔಟ್ ಆದರು. ನಂತರ ಡೆಲ್ಲಿ ತಂಡ ದಿಢೀರ್ ಕುಸಿತ ಕಂಡಿತು. ಜೆಮಿಮಾ ರೋಡ್ರಿಗಸ್ 2, ಅನ್ನಾಬೆಲ್ ಸದರ್ಲೆಂಡ್ 10 ಎಸೆತಗಳಲ್ಲಿ 12 ರನ್​ಗಳಿಸಿ ಔಟ್ ಆದರು.

ಅಲಿಸ್ ಕ್ಯಾಪ್ಸೆ ಹಾಗೂ ಕನ್ನಡತಿ ನಿಕಿ ಪ್ರಸಾದ್​ 36 ಎಸೆತಗಳಲ್ಲಿ 33 ರನ್​ಗಳಿಸಿ ಪಂದ್ಯದಲ್ಲಿ ಡೆಲ್ಲಿಯನ್ನ ಕಮ್​ಬ್ಯಾಕ್ ಮಾಡುವಂತೆ ಮಾಡಿತು. ಕ್ಯಾಪ್ಸೆ ನಂತರ ಬಂದ ಐರ್ಲೆಂಡ್ ತಂಡದಲ್ಲಿ ಆಡುವ ವಿಕೆಟ್ ಕೀಪರ್ ಸಾರಾ ಜೆನ್ನಿಫರ್ ಬ್ರೈಸ್ 10 ಎಸೆತಗಳಲ್ಲಿ 20 ರನ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಾಯಿಸಿತು. ನಿಕಿ ಪ್ರಸಾದ್ ಜೊತೆಗೂಡಿ ಕೇವಲ 16 ಎಸೆತಗಳಲ್ಲಿ 31 ರನ್​ಗಳ ಜೊತೆಯಾಟ ನೀಡಿದರು.

ಕೊನೆ 2 ಓವರ್​ಗಳಲ್ಲಿ ಡೆಲ್ಲಿಗೆ ಗೆಲ್ಲಲು 21 ರನ್​ಗಳ ಅಗತ್ಯವಿತ್ತು. 19ನೇ ಓವರ್​ನಲ್ಲಿ ಮೊದಲ 3 ಎಸೆತಗಳಲ್ಲಿ ಕೇವಲ 3 ರನ್​ ಬಂದಿತು. ಆದರೆ ಶಿಖಾ ಪಾಂಡೆ ರನ್​ಔಟ್ ಆದರು. ನಂತರದ 3 ಎಸೆತಗಳಲ್ಲಿ ರಾಧ ಯಾದವ್​ ಒಂದು ಸಿಕ್ಸರ್ ಸಹಿತ 8 ರನ್​ ಸಿಡಿಸಿದರು. ಹಾಗಾಗಿ ಕೊನೆ ಓವರ್​ನಲ್ಲಿ ಗೆಲ್ಲಲು ಡೆಲ್ಲಿ ತಂಡಕ್ಕೆ 10 ರನ್​ಗಳ ಅವಶ್ಯಕತೆ ಇತ್ತು. ಮೊದಲ ಎಸೆತದಲ್ಲಿ ನಿಕಿ ಪ್ರಸಾದ್​ ಬೌಂಡರಿ ಬಾರಿಸಿದರೆ, 2ನೇ ಎಸೆತದಲ್ಲಿ 2 ರನ್​ ತೆಗೆದುಕೊಂಡರು. ಕೊನೆ 4 ಎಸೆತಗಳಲ್ಲಿ 4 ರನ್​ ಅಗತ್ಯವಿತ್ತು. ನಂತರ 2 ಎಸೆತಗಳಲ್ಲಿ ತಲಾ 1 ರನ್ ಬಂದಿತು. 2 ಎಸೆತಗಳಲ್ಲಿ 2ರನ್​ ಅಗತ್ಯವಿದ್ದಾಗ ನಿಕ್​ ಕ್ಯಾಚ್​ ಔಟ್ ಆದರು. ಕೊನೆ ಎಸೆತದಲ್ಲಿ ಗೆಲ್ಲಲು 2 ರನ್​ ಅಗತ್ಯವಿತ್ತು. ಅರುಂದತಿ ರೆಡ್ಡಿ ಲಾಂಗ್​ ಆಫ್​ ಕಡೆ ಚೆಂಡನ್ನು ಬಾರಿಸಿ 2 ರನ್​ ಕದಿಯುವಲ್ಲಿ ಯಶಸ್ವಿಯಾದರು.

ಮುಂಬೈ ಪರ ಹೇಲಿ ಮ್ಯಾಥ್ಯೂಸ್ 32ಕ್ಕೆ2, ಅಮೆಲಿಯಾ ಕೆರ್​ 21ಕ್ಕೆ2, ಸಜೀವನ್ ಸಜನಾ 10ಕ್ಕೆ1, ನ್ಯಾಟ್​ ಸೀವರ್​ ಬ್ರಂಟ್ 38ಕ್ಕೆ1, ಶಬ್ನಿಮ್ ಇಸ್ಮಾಯಿಲ್ 18ಕ್ಕೆ1 ವಿಕೆಟ್ ಪಡೆದರು.

Source : https://kannada.news18.com/news/sports/delhi-capitals-snatch-victory-from-jaws-of-defeat-beat-mumbai-indians-in-last-ball-thriller-mbr-1997529.html

Views: 0

Leave a Reply

Your email address will not be published. Required fields are marked *