RCB W Vs MI W – ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನಗೆ ಆದ ಮುಖಭಂಗಕ್ಕೆ ಸ್ಮೃತಿ ಮಂದಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡ ಮುಂಬೈನ ಇಂಡಿಯನ್ಸ್ ಗೆ ತಕ್ಕ ತಿರುಗೇಟು ನೀಡಿದೆ. ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ಗೆಲ್ಲುವ ಮೂಲಕ ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ ಅಭಿಯಾನ ವನ್ನು ಅಂತ್ಯಗೊಳಿಸಿದ ಆರ್ ಸಿಬಿಯು ನೇರವಾಗಿ ಫೈನಲ್ ಪ್ರವೇಶಿಸಬೇಕು ಎಂದಿದ್ದ ಹರ್ಮನ್ ಪ್ರೀತ್ ಕೌರ್ ಬಳಗದ ಆಸೆಗೆ ತಣ್ಣೀರೆರಚಿತು.

ಸತತ ಐದು ಪಂದ್ಯಗಳಲ್ಲಿ ಪರಾಭವ ಅನುಭವಿಸುವ ಮೂಲಕ ಅಭಿಮಾನಿಗಳನ್ನು ತೀವ್ರ ನಿರಾಸೆಗೊಳಿಸಿದ್ದ ಸ್ಮೃತಿ ಮಂದಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡ ಕೊನೆಗೂ ಗೆಲುವಿನೊಂದಿಗೆ ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ ಅಭಿಯಾನವನ್ನು ಕೊನೆಗೊಳಿಸಿದೆ. ಮುಂಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 11 ರನ್ ಗಳಿಂದ ಸೋಲಿಸಿದೆ.
ಹೀಗಾಗಿ ಪ್ರಥಮ ಸ್ಥಾನಿಯಾಗಿ ನೇರವಾಗಿ ಪೈನಲ್ ಪ್ರವೇಶಿಸಬೇಕು ಎಂಬ ಮುಂಬೈ ಇಂಡಿಯನ್ಸ್ ತಂಡದ ಕನಸು ಭಗ್ನಗೊಂಡಿದೆ. ಹೀಗಾಗಿ ಮುಂಬೈ ತಂಡ ಫೈನಲ್ ತಲುಪಲು ಗುರುವಾರ ಗುಜರಾತ್ ಜೈಂಟ್ಸ್ ವಿರುದ್ಧ ನಡೆಯಲಿರುವ ಎಲಿಮಿನೇಟರ್ ಪಂದ್ಯವನ್ನು ಗೆಲ್ಲಲೇ ಬೇಕಿದೆ. ದಿಲ್ಲಿ ಕ್ಯಾಪಿಟಲ್ಸ್ ತಂಡ ಪ್ರಥಮ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದೆ.
ಬ್ರಂಟ್ ಮಿಂಚಿನ ಬ್ಯಾಟಿಂಗ್
ಗೆಲ್ಲಲು 200 ರನ್ ಗಳ ಕಠಿಣ ಗುರಿ ಪಡೆದ ಮುಂಬೈ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಗಳನ್ನು ಕಳೆದುಕೊಂಡು ಕೇವಲ 188 ರನ್ ಗಳನ್ನಷ್ಟೇ ಗಳಿಸಲು ಸಹಾಯಕವಾಯಿತು. ನಾಟ್ ಸಿವಿರ್ ಬ್ರಂಟ್ ಅವರು 35 ಎಸೆತಗಳಿಂದ 8 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 69 ರನ್ ಗಳಿಸಿ ಪೆರ್ರಿ ಅವರ ಬೌಲಿಂಗ್ ನಲ್ಲಿ ರಿಟರ್ನ್ ಕ್ಯಾಚ್ ನೀಡಿ ಪೆವಿಲಿಯನ್ ಗೆ ಮರಳಿದರು. ಆ ಬಳಿಕ ರಾಯಲ್ ಚಾಲೆಂಜರ್ಸ್ ನಿರಂತರ ವಿಕೆಟ್ ಉರುಳಿಸುತ್ತಾ ಹೋದ ಕಾರಣ ಮುಂಬೈ ಇಂಡಿಯನ್ಸ್ ತಂಡ ಗುರಿಯ ಸಮೀಪ ತಲುಪಲು ಸಾಧ್ಯವಾಗಲಿಲ್ಲ. ಅಂತಿಮ ಹಂತದಲ್ಲಿ ಸಜೀವನ್ ಸಜನಾ(23) ಮತ್ತು ಸಂಸ್ಕೃತಿ ಗುಪ್ತಾ ಅಂತಿಮ ಹಂತದಲ್ಲಿ ಗುಡುಗಿದರೂ ಅವರಿಂದ ಆರ್ ಸಿಬಿ ಗೆಲುವನ್ನು ತಡೆಯಲು ಸಾಧ್ಯವಾಗಲಿಲ್ಲ. ಆರ್ ಸಿಬಿ ಪರ ಸ್ನೇಹಾ ರಾಣಾ 26 ರನ್ ಗೆ 3 ವಿಕೆಟ್ ಕಬಳಿಸಿದರು. ಕಿಮ್ ಗರ್ತ್ ಮತ್ತು ಎಲ್ಸಿ ಪೆರ್ರಿ ತಲಾ 2 ವಿಕೆಟ್ ಕಬಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆರ್ ಸಿಬಿ ತಂಡ ನಾಯಕಿ ಸ್ಮೃತಿ ಮಂದಾನ(53) ಅವರ ಅರ್ಧಶತಕ ಎಲಿಸ್ ಪೆರ್ರಿ (49) ಮತ್ತು ರಿಚಾ ಘೋಷ್(36) ಮತ್ತು ಜಾರ್ಜಿಯಾ ವಾರೆಹಮ್(31) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 199 ರನ್ ಪೇರಿಸಿತು. ಸ್ಮೃತಿ ಮಂದಾನ ಅವರು 37 ಎಸೆತಗಳಿಂದ 53 ಮತ್ತು ಎಲಿಸ್ ಪೆರ್ರಿ 38 ಎಸೆತಗಳಿಂದ 49 ರನ್ ಗಳಿಸಿದರು. ಹೀಲಿ ಮ್ಯಾಥ್ಯೂಸ್ 37 ರನ್ ಗೆ 2 ವಿಕೆಟ್ ಕಬಳಿಸಿದರು.
ಮುಂಬೈ ಇಂಡಿಯನ್ಸ್ ನ ಪ್ರಮುಖ ವಿಕೆಟ್ ಗಳನ್ನು ನಿರ್ಣಾಯಕ ಹಂತದಲ್ಲಿ ಕೀಳುವಲ್ಲಿ ಯಶಸ್ವಿಯಾದ ಆಫ್ ಸ್ಪಿನ್ನರ್ ಸ್ನೇಹಾ ರಾಣಾ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
- ಆರ್ ಸಿಬಿ- 20 ಓವರ್ ಗಳಲ್ಲಿ 199/3, ಸ್ಮೃತಿ ಮಂದಾನ 43, ಎಲ್ಲಿಸ್ ಪೆರ್ರಿ 49, ರಿಚಾ ಘೋಷ್ 36, ಹೀಲಿ ಮ್ಯಾಥ್ಯೂಸ್ 37ಕ್ಕೆ 3
- ಮುಂಬೈ ಇಂಡಿಯನ್ಸ್- 20 ಓವರ್ ಗಳಲ್ಲಿ 188/9, ನಾಟ್ ಸಿವಿರ್ ಬ್ರಂಟ್ 69, ಸಜನಾ 23, ಹರ್ಮನ್ ಪ್ರೀತ್ ಕೌರ್ 20, ಸ್ವೇಹ್ ರಾಣಾ 26ಕ್ಕೆ 3, ಕಿಮ್ ಗರ್ತ್ 33ಕ್ಕೆ 2
Views: 0