WPL 2025: ರಣರೋಚಕ ಪಂದ್ಯದಲ್ಲಿ ಆರ್​ಸಿಬಿಗೆ ವೀರೋಚಿತ ಸೋಲು

ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಸೋಲನ್ನು ಅನುಭವಿಸಿದೆ. ಟೂರ್ನಿಯನ್ನು ಉತ್ತಮವಾಗಿ ಆರಂಭಿಸಿದ್ದ ಬೆಂಗಳೂರು ತಂಡ, ತನ್ನ ಮೂರನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಅನುಭವಿಸಿತು. ಬೆಂಗಳೂರಿನ ತವರು ಮೈದಾನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ತಂಡವು ಬೆಂಗಳೂರನ್ನು 4 ವಿಕೆಟ್‌ಗಳಿಂದ ಸೋಲಿಸಿತು. ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಸ್ಫೋಟಕ ಅರ್ಧಶತಕ ಮತ್ತು ನ್ಯಾಟ್ ಸಿವರ್-ಬ್ರಂಟ್ ಅವರ ಸುಂಟರಗಾಳಿ ಇನ್ನಿಂಗ್ಸ್ ಮುಂಬೈ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಇದರ ಜೊತೆಗೆ 16 ವರ್ಷದ ಜಿ ಕಮಲಿನಿ ಕೊನೆಯ ಓವರ್‌ನ ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿ ಕಠಿಣ ಪರಿಸ್ಥಿತಿಯಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯದರು.

ಆರ್​ಸಿಬಿಗೆ ಆರಂಭಿಕ ಆಘಾತ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿಗೆ ಉತ್ತಮ ಆರಂಭ ಸಿಕ್ಕಿತು. ನಾಯಕಿ ಸ್ಮೃತಿ ಮಂಧಾನ ಹಾಗೂ ಡೇನಿಯಲ್ ವ್ಯಾಟ್-ಹಾಡ್ಜ್ ಮೊದಲ ವಿಕೆಟ್​ಗೆ 29 ರನ್​ಗಳ ಜೊತೆಯಾಟವನ್ನಾಡಿದರು. ಅದರಲ್ಲೂ ನಾಯಕಿ ಸ್ಮೃತಿ ಮಂಧಾನ ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾಗಿ 4 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಾರಿಸಿದರು. ಆದರೆ ಬೇಡದ ಶಾಟ್ ಆಡಿ ಮೂರನೇ ಓವರ್​ನಲ್ಲೇ 26 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಡೇನಿಯಲ್ ವ್ಯಾಟ್ ಕೂಡ 9 ರನ್​ಗಳಿಗೆ ಸುಸ್ತಾದರು.

ರಿಚಾ- ಪೆರ್ರಿ ಅರ್ಧಶತಕದ ಜೊತೆಯಾಟ

ಆದರೆ ಮೂರನೇ ಕ್ರಮಾಂಕದಲ್ಲಿ ಬಂದ ಎಲ್ಲಿಸ್ ಪೆರ್ರಿ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿ ಸ್ಕೋರ್ ಬೋರ್ಡ್​ ಏರಿಸಲಾರಂಭಿಸಿದರು. ಆದರೆ ಪೆರ್ರಿಗೆ ನಾಲ್ಕನೇ ಮತ್ತು ಐದನೇ ಕ್ರಮಾಂಕದಲ್ಲಿ ಬಂದ ಬ್ಯಾಟರ್​ಗಳಿಂದ ಸಾಥ್ ಸಿಗಲಿಲ್ಲ. ಈ ವೇಳೆ 6ನೇ ಕ್ರಮಾಂಕದಲ್ಲಿ ಬಂದ ರಿಚಾ ಘೋಷ್, ಪೆರ್ರಿ ಜೊತೆ ಅರ್ಧಶತಕದ ಜೊತೆಯಾಟವನ್ನಾಡಿದರು. ಆದರೆ 28 ರನ್​ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.

ಪೆರ್ರಿ ಸ್ಫೋಟಕ ಅರ್ಧಶತಕ

ತಂಡದಲ್ಲಿ ಸತತ ವಿಕೆಟ್ ಪತನದ ನಡುವೆಯೂ ಎಂದಿನಂತೆ ತನ್ನ ಹೊಡಿಬಡಿ ಆಟವನ್ನು ಮುಂದುವರೆಸಿದ ಪೆರ್ರಿ ಕೇವಲ 30 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕ ಇನ್ನಷ್ಟು ಉಗ್ರರೂಪ ತಾಳಿದ ಪೆರ್ರಿ ಮುಂಬೈ ಬೌಲರ್​ಗಳ ಬೆವರಿಳಿಸಿದರು. ಪೆರ್ರಿ ಆರ್ಭಟ ಹೇಗಿತ್ತೆಂದರೆ, ಕೊನೆಯ 5 ಓವರ್​ಗಳಲ್ಲಿ ಆರ್​ಸಿಬಿ ಬರೋಬ್ಬರಿ 54 ರನ್ ಕಲೆಹಾಕಿತು. ಇಷ್ಟು ರನ್​ಗಳಲ್ಲಿ ಪೆರ್ರಿ ಅವರ ಪಾಲೇ ಹೆಚ್ಚಿತ್ತು. ಅಂತಿಮವಾಗಿ 20ನೇ ಓವರ್​ನ 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಪೆರ್ರಿ ವಿಕೆಟ್ ಒಪ್ಪಿಸಿದರು. ಆದರೆ ಔಟಾಗುವುದಕ್ಕೂ ಮುನ್ನ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವ ಕೆಲಸ ಮಾಡಿದ್ದ ಪೆರ್ರಿ ಅಂತಿಮವಾಗಿ 43 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಹಿತ 81 ರನ್ ಕಲೆಹಾಕಿದರು.

ಮುಂಬೈ ಕೈಹಿಡಿದ ಮಧ್ಯಮ ಕ್ರಮಾಂಕ

ಆರ್​ಸಿಬಿ ನೀಡಿದ ಗುರಿ ಬೆನ್ನಟ್ಟಿದ ಮುಂಬೈ ತಂಡ ಎರಡನೇ ಓವರ್‌ನಲ್ಲಿಯೇ ಯಸ್ತಿಕಾ ಭಾಟಿಯಾ ಅವರ ವಿಕೆಟ್ ಕಳೆದುಕೊಂಡಿತು. ಆದರೆ ಆರ್‌ಸಿಬಿಯಂತೆ ಮೂರನೇ ಕ್ರಮಾಂಕದಲ್ಲಿ ಬಂದ ಇಂಗ್ಲೆಂಡ್‌ನ ಅನುಭವಿ ಆಲ್‌ರೌಂಡರ್ ನ್ಯಾಟ್ ಸಿವರ್-ಬ್ರಂಟ್ ಬೆಂಗಳೂರು ಬೌಲರ್‌ಗಳ ಮೇಲೆ ಬೌಂಡರಿಗಳ ಮಳೆ ಸುರಿಸಿದರು ಮತ್ತು ಪವರ್‌ಪ್ಲೇನಲ್ಲಿಯೇ ತಂಡವನ್ನು 66 ರನ್‌ಗಳಿಗೆ ಕೊಂಡೊಯ್ದರು. ಇಲ್ಲಿ, ಬೆಂಗಳೂರು ತಂಡವು ಮುಂದಿನ 20 ಎಸೆತಗಳಲ್ಲಿ ಸಿವರ್-ಬ್ರಂಟ್ ಸೇರಿದಂತೆ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಮತ್ತೆ ಮಿಂಚಿತು. ಇಲ್ಲಿಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ಜವಾಬ್ದಾರಿ ವಹಿಸಿಕೊಂಡು ಆರ್‌ಸಿಬಿಗೆ ಸೂಕ್ತ ಉತ್ತರ ನೀಡಿದರು ಮತ್ತು ಅಮನ್‌ಜೋತ್ ಕೌರ್ ಅವರೊಂದಿಗೆ 62 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ಮಾಡಿದರು.

ಅಮನ್‌ಜೋತ್- ಕಮಲಿನಿ ಜೊತೆಯಾಟ

ಇದೇ ಹಂತದಲ್ಲಿ ಹರ್ಮನ್ ಅರ್ಧಶತಕ ಗಳಿಸಿದರು. ಆದರೆ ಲೆಗ್-ಸ್ಪಿನ್ನರ್ ಜಾರ್ಜಿಯಾ ವೇರ್‌ಹ್ಯಾಮ್ ಸತತ ಎರಡು ಎಸೆತಗಳಲ್ಲಿ ಹರ್ಮನ್‌ಪ್ರೀತ್ ಮತ್ತು ಸಜೀವನ್ ಸಜ್ನಾ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಆದರೆ ಅಮನ್‌ಜೋತ್, 16 ವರ್ಷದ ಜಿ ಕಮಲಿನಿ ಜೊತೆಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಕೊನೆಯ 2 ಎಸೆತಗಳಲ್ಲಿ ಮುಂಬೈ ತಂಡಕ್ಕೆ 2 ರನ್‌ಗಳು ಬೇಕಾಗಿದ್ದವು. ಎಂಟನೇ ಸ್ಥಾನದಲ್ಲಿ ಬಂದ ಕಮಲಿನಿ ಕೆಲಸವನ್ನು ಪೂರ್ಣಗೊಳಿಸಿದರು. ಕಳೆದ ತಿಂಗಳು ಭಾರತದ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಮಲಿನಿ, ಒತ್ತಡದಲ್ಲಿಯೂ ಅದ್ಭುತ ಬೌಂಡರಿ ಬಾರಿಸಿ ತಂಡವನ್ನು 4 ವಿಕೆಟ್‌ಗಳ ಗೆಲುವಿನತ್ತ ಮುನ್ನಡೆಸಿದರು.

Source : https://tv9kannada.com/sports/cricket-news/rcb-suffers-first-defeat-mumbai-indians-triumphs-in-wpl-2025-psr-981630.html

Leave a Reply

Your email address will not be published. Required fields are marked *