WPL Inaugural Match – ಸ್ಮೃತಿ ಮಂದಾನ ನೇತೃತ್ವದ ಆರ್ ಸಿಬಿಗೆ ಕಠಿಣ ಸವಾಲು: ಯಾವುದರಲ್ಲಿ ನೇರಪ್ರಸಾರ?

ಹೈಲೈಟ್ಸ್‌:

  • ವಡೋಧರಾ, ಬೆಂಗಳೂರು, ಲಖನೌ ಮತ್ತು ಮುಂಬಯಿ ಹೀಗೆ ನಾಲ್ಕು ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ
  • ಆರ್ ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌, ಯುಪಿ. ವಾರಿಯರ್ಸ್‌, ಮುಂಬಯಿ ಇಂಡಿಯನ್ಸ್‌, ಗುಜರಾತ್‌ ಜೈಂಟ್ಸ್ ಸೆಣಸಲಿರುವ ತಂಡಗಳು
  • ಫೆಬ್ರವರಿ 14ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚಾಂಪಿಯನ್ ಆರ್ ಸಿಬಿಗೆ ಗುಜರಾತ್ ಜೈಂಟ್ಸ್ ಸವಾಲು

ವಡೋದರಾ: ಕಳೆದ ಬಾರಿಯ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಗುಜರಾತ್‌ ಜಯಂಟ್ಸ್‌ ಮಹಿಳಾ ಪ್ರೀಮಿಯರ್‌ ಲೀಗ್‌ 3ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಶುಕ್ರವಾರ ಮುಖಾಮುಖಿಯಾಗಲಿವೆ. ಇದರೊಂದಿಗೆ ಭಾರತದ ಉದಯೋನ್ಮುಖ ಕ್ರಿಕೆಟ್‌ ಪ್ರತಿಭೆಗಳನ್ನು ಪೋಷಣೆಗೆ ವೇದಿಗೆ ಸಜ್ಜುಗೊಂಡಿದೆ.

ಜಾಗತಿಕ ಸೂಪರ್‌ ಸ್ಟಾರ್‌ಗಳು ಸ್ಪರ್ಧೆಗೆ ಅಪಾರ ಮೌಲ್ಯವನ್ನು ತಂದಿದ್ದರೂ ಲೀಗ್‌ನ ನಿಜವಾದ ಯಶಸ್ಸು ದೇಶೀಯ ಆಟಗಾರ್ತಿಯರ ಏಳಿಗೆಯಲ್ಲಿಡಗಿದೆ. ಮೊದಲ ಎರಡು ಋುತುಗಳಲ್ಲಿ ಶ್ರೇಯಂಕಾ ಪಾಟೀಲ್‌ ಮತ್ತು ಸೈಕಾ ಇಶಾಕ್‌ ಅವರಂತಹ ಹಲವಾರು ದೇಶೀಯ ಪ್ರತಿಭೆಗಳು ಹೊರಹೊಮ್ಮಿದ್ದು, ರಾಷ್ಟ್ರೀಯ ತಂಡದಿಂದಲೂ ಕರೆ ಸ್ವೀಕರಿಸಿದ್ದಾರೆ.

ಪ್ರಮುಖ ಆಟಗಾರ್ತಿಯರ ಅನುಪಸ್ಥಿತಿ

ಪ್ರತಿ ಡಬ್ಲ್ಯೂಪಿಎಲ್‌ ಋುತುವಿನಲ್ಲಿ, ಉದಯೋನ್ಮುಖ ಭಾರತೀಯ ಆಟಗಾರ್ತಿಯರ ಪಟ್ಟಿ ಬೆಳೆಯುತ್ತಲೇ ಇದೆ. ಅಲಿಸ್ಸಾ ಹೀಲಿ, ಸೋಫಿ ಮೊಲಿನೆಕ್ಸ್‌ ಮತ್ತು ಕೇಟ್‌ ಕ್ರಾಸ್‌ ಅವರಂತಹ ವಿದೇಶಿ ತಾರೆಯರು ಗಾಯಗಳಿಂದಾಗಿ ಈ ಆವೃತ್ತಿಯಿಂದ ಹೊರಗುಳಿದಿರುವುದರಿಂದ, ಮುಂಬರುವ ಋುತುವು ಅನುಭವಿ ದೇಶೀಯ ಆಟಗಾರ್ತಿಯರಿಗೆ ಮತ್ತು ಹೊಸ ಪ್ರತಿಭೆಗಳಿಗೆ ಮಿಂಚಲು ಸುವರ್ಣಾವಕಾಶವನ್ನು ಕಲ್ಪಿಸುತ್ತದೆ.

“ಭಾರತ ತಂಡದ ನಾಯಕಿಯಾಗಿ ನಾನು ಈ ಋುತುವಿಗಾಗಿ ತುಂಬಾ ಉತ್ಸುಕನಾಗಿದ್ದೇನೆ. ಏಕೆಂದರೆ ಬಹಳಷ್ಟು ದೇಶೀಯ ಆಟಗಾರ್ತಿಯರು ಈ ಪಂದ್ಯಾವಳಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಂಡಿದ್ದಾರೆ,’’ ಎಂದು ಹರ್ಮನ್‌ ಪ್ರೀತ್‌ ಕೌರ್‌ ಹೇಳಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್ ನಲ್ಲಿರುವ ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಜುಲೈನಲ್ಲಿ ಇಂಗ್ಲೆಂಡ್‌ ಪ್ರವಾಸ ಮತ್ತು ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನೊಂದಿಗೆ ರಾಷ್ಟ್ರೀಯ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಉತ್ತಮ ಪ್ರದರ್ಶನ ನೀಡಲು ಅವರು ಉತ್ಸುಕರಾಗಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ ವೇಗದ ಬೌಲಿಂಗ್‌ ಆಲ್‌ರೌಂಡರ್‌ ಕಾಶ್ವೀ ಗೌತಮ್‌ ಸಹ ಅತ್ಯುತ್ತಮ ಆಟಗಾರ್ತಿಯರ ವಿರುದ್ಧ ತಮ್ಮನ್ನು ಸಾಬೀತುಪಡಿಸುವ ಅವಕಾಶವನ್ನು ಹೊಂದಿದ್ದಾರೆ. ಟೂರ್ನಿಯಲ್ಲಿ ಮೊದಲ ಬಾರಿಗೆ ವಡೋದರಾ ಮತ್ತು ಲಖನೌ ತಾಣಗಳನ್ನು ಹೊಸದಾಗಿ ಪರಿಚಯಿಸಲಾಗಿದೆ.

ಬೆಂಗಳೂರು ಚರಣದ ವೇಳಾಪಟ್ಟಿ

ದಿನಾಂಕಪಂದ್ಯಸಮಯ
ಫೆ.21ಬೆಂಗಳೂರು – ಮುಂಬಯಿರಾತ್ರಿ 7.30
ಫೆ.22ಡೆಲ್ಲಿ-ಯುಪಿರಾತ್ರಿ 7.30
ಫೆ.24ಬೆಂಗಳೂರು – ಯುಪಿರಾತ್ರಿ 7.30
ಫೆ.25ಡೆಲ್ಲಿ- ಗುಜರಾತ್‌ರಾತ್ರಿ 7.30
ಫೆ.27ಬೆಂಗಳೂರು -ಗುಜರಾತ್‌ರಾತ್ರಿ 7.30
ಫೆ.28ಡೆಲ್ಲಿ- ಮುಂಬಯಿರಾತ್ರಿ 7.30
ಮಾ.1ಬೆಂಗಳೂರು – ಡೆಲ್ಲಿರಾತ್ರಿ 7.30

ಆರ್‌ಸಿಬಿಗೆ ಕಠಿಣ ಸವಾಲು

ಕಳೆದ ಬಾರಿಯ ಚಾಂಪಿಯನ್‌ ಆರ್‌ಸಿಬಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಕಠಿಣ ಸವಾಲನ್ನು ಎದುರಿಸುತ್ತಿದೆ. ಕಳೆದ ಋುತುವಿನ ಪ್ರಮುಖ ಆಟಗಾರ್ತಿಯರಾದ ಸೋಫಿ ಡಿವೈನ್‌, ಆರೋಗ್ಯಕ್ಕೆ ಆದ್ಯತೆ ನೀಡಲು ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಿದ್ದಾರೆ, ಗಾಯಗೊಂಡಿರುವ ಮೊಲಿನೆಕ್ಸ್‌ ಮತ್ತು ಕೇಟ್‌ ಕ್ರಾಸ್‌ ಈ ಆವೃತ್ತಿಯಿಂದ ಹೊರಗುಳಿದಿದ್ದಾರೆ. ಸ್ಟಾರ್‌ ಆಲ್‌ರೌಂಡರ್‌ ಎಲಿಸ್‌ ಪೆರ್ರಿ, ಶ್ರೇಯಂಕಾ ಪಾಟೀಲ್‌ ಮತ್ತು ಆಶಾ ಶೋಭನಾ ಕೂಡ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇದು ಸಹಜವಾಗಿ ಆರ್‌ಸಿಬಿ ತಂಡದ ಹಿನ್ನಡೆಗೆಗೆ ಕಾರಣವಾಗಿದ್ದು, ಪ್ರಶಸ್ತಿ ಉಳಿಸಿಕೊಳ್ಳಲು ಯಶಸ್ವಿಯಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.‘‘ಕಳೆದ ವರ್ಷ 11ರ ಬಳಗದಲ್ಲಿದ್ದ ನಮ್ಮ ಹೆಚ್ಚಿನ ಆಟಗಾರ್ತಿಯರು ಗಾಯಗಳಿಂದಾಗಿ ಈ ಋುತುವಿನಲ್ಲಿ ಅಲಭ್ಯರಾಗಿದ್ದಾರೆ. ಅದರಲ್ಲೂಸೋಫಿ ಅಲಭ್ಯತೆ ಖಂಡಿತವಾಗಿಯೂ ತಂಡವನ್ನು ಕಾಡಲಿದೆ,’’ ಎಂದು ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ ಹೇಳಿದ್ದಾರೆ.

ಈ ಮಧ್ಯೆ, ಎರಡು ಬಾರಿ ರನ್ನರ್‌ ಅಪ್‌ ಡೆಲ್ಲಿಕ್ಯಾಪಿಟಲ್ಸ್‌ ಟೂರ್ನಿಯಲ್ಲಿ ಅತ್ಯಂತ ಸ್ಥಿರ ತಂಡವಾಗಿದ್ದು, ಫೈನಲ್‌ನಲ್ಲಿಸೋತ ದಾಖಲೆಯನ್ನು ಮುರಿಯಲು ಉತ್ಸುಕವಾಗಿದೆ. ಟೂರ್ನಿಯು ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿದೆ.

ಯಾವುದರಲ್ಲಿ ನೇರಪ್ರಸಾರ?

ಎಲ್ಲಾ ಪಂದ್ಯಗಳು ರಾತ್ರಿ 7.30ಕ್ಕೆ ಸರಿಯಾಗಿ ಪ್ರಾರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ಚಾನಲ್ ನಲ್ಲಿ ನೇರ ಪ್ರಸಾರ ಇರಲಿದೆ. ಇನ್ನು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಆ್ಯಪ್ ಮತ್ತು ವೆಬ್ ಸೈಟ್ ಗಳಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.

Source : https://vijaykarnataka.com/sports/cricket/iplt20/womens-premier-league-starting-from-feb-14th-champion-rcb-will-face-gujarat-giants-in-inaugural-match/articleshow/118223024.cms

Leave a Reply

Your email address will not be published. Required fields are marked *