WTC Final 2023: ಎರಡೂ ಇನಿಂಗ್ಸ್‌ಗಳಲ್ಲಿ ಕೊಹ್ಲಿ ಶತಕ ಸಿಡಿಸಲಿದ್ದಾರೆ ಎಂದ ಪಾಕ್ ದಂತಕಥೆ..!

WTC Final 2023: ಎರಡೂ ಇನಿಂಗ್ಸ್‌ಗಳಲ್ಲಿ ಕೊಹ್ಲಿ ಶತಕ ಸಿಡಿಸಲಿದ್ದಾರೆ ಎಂದ ಪಾಕ್ ದಂತಕಥೆ..!

ಐಪಿಎಲ್ 2023 (IPL 2023) ರಲ್ಲಿ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ (Virat Kohli) ಅಂತಿಮ ಹಂತದಲ್ಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ಈ ಸೀಸನ್​ನಲ್ಲಿ ಸತತ ಎರಡು ಶತಕಗಳನ್ನು ಬಾರಿಸಿದರು. ಆದರೆ, ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲೀಗ್ ಹಂತದಲ್ಲೇ ಹೊರಬಿದ್ದಿತು. ಹೀಗಾಗಿ ಬೆಂಗಳೂರು ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಆದರೆ, ಇದೀಗ ವಿರಾಟ್ ಕೊಹ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ (World Test Championship final) ಆಡಲು ಇಂಗ್ಲೆಂಡ್ ತಲುಪಿದ್ದು, ಐಸಿಸಿ ಟ್ರೋಫಿಗಾಗಿ ವರ್ಷಗಳಿಂದಲೇ ಕಾಯುತ್ತಿರುವ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಗೆಲುವಿನ ಉಡುಗೊರೆ ನೀಡುವ ತವಕದಲ್ಲಿ ಕಿಂಗ್ ಕೊಹ್ಲಿ ಇದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ ಜೂನ್ 7 ರಿಂದ ಆರಂಭವಾಗಲಿದೆ. ಭಾರತ ಮತ್ತು ಆಸ್ಟ್ರೇಲಿಯಾ (India and Australia) ನಡುವೆ ನಡೆಯಲಿರುವ ಅಂತಿಮ ಪಂದ್ಯಕ್ಕಾಗಿ ಭಾರತ ತಂಡದ ಕೆಲವು ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಈಗಾಗಲೇ ಲಂಡನ್ ತಲುಪಿದ್ದಾರೆ. ಅಲ್ಲದೆ ಫೈನಲ್ ಪಂದ್ಯಕ್ಕೆ ಆಟಗಾರರು ತಯಾರಿ ಕೂಡ ಆರಂಭಿಸಿದ್ದಾರೆ. ಈ ನಡುವೆ ಪಾಕ್ ತಂಡದ ಮಾಜಿ ದಂತಕಥೆಯೊಬ್ಬರು ಕಿಂಗ್ ಕೊಹ್ಲಿಗೆ ವಿಶೇಷವಾಗಿ ಶುಭಹಾರೈಸಿದ್ದಾರೆ.

ಎರಡೂ ಇನಿಂಗ್ಸ್‌ಗಳಲ್ಲಿ ಕೊಹ್ಲಿ ಶತಕ ಸಿಡಿಸಲಿದ್ದಾರೆ

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗಾಗಿ ಇಂಗ್ಲೆಂಡ್​ಗೆ ಹಾರಿರುವ ಕೊಹ್ಲಿ ಅಭ್ಯಾಸದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಗಾಗ್ಗೆ ಹರಿಬಿಡುತ್ತಿದ್ದಾರೆ. ಇದೀಗ ಕಿಂಗ್ ಕೊಹ್ಲಿಯ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಯೀದ್ ಅನ್ವರ್, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ ವಿರಾಟ್ ಕೊಹ್ಲಿಗೆ ಶುಭ ಹಾರೈಸಿದ್ದಾರೆ. ಅಲ್ಲದೆ ಈ ಮಹತ್ವದ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಕೊಹ್ಲಿ ಶತಕ ಸಿಡಿಸಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಶತಕದ ಬರ ನೀಗಿಸಿಕೊಂಡಿದ್ದ ವಿರಾಟ್

ವಾಸ್ತವವಾಗಿ ಟೆಸ್ಟ್ ಕ್ರಿಕೆಟ್​ನಲ್ಲಿ ಸತತ ಮೂರು ವರ್ಷಗಳಿಂದ ಶತಕದ ಬರ ಎದುರಿಸುತ್ತಿದ್ದ ಕೊಹ್ಲಿ ಆಸೀಸ್ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಪಿ ಸರಣಿಯಲ್ಲಿ ಭರ್ಜರಿ ಶತಕ ಸಿಡಿಸಿ ತಮ್ಮ ಶತಕದ ಬರ ನೀಗಿಸಿಕೊಂಡಿದ್ದರು. ಆಸ್ಟ್ರೇಲಿಯ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಎರಡು ಶತಕ ಸಿಡಿಸಿದ್ದರಲ್ಲಿ ಕೊಹ್ಲಿ ಶತಕವೂ ಸೇರಿತ್ತು.

ಆಸ್ಟ್ರೇಲಿಯಾದ 480 ರನ್‌ಗಳ ಪ್ರತಿಕ್ರಿಯೆಯಾಗಿ ಇನ್ನಿಂಗ್ಸ್ ಆರಂಭಿಸಿದ ಭಾರತದ ಪರವಾಗಿ ಶುಭ್​ಮನ್ ಗಿಲ್ (128) ಮತ್ತು ಕೊಹ್ಲಿ (186) ಭರ್ಜರಿ ಶತಕ ಸಿಡಿಸಿದರು. ಈ ಇಬ್ಬರ ಶತಕಗಳ ಆಧಾರದ ಮೇಲೆ ಟೀಂ ಇಂಡಿಯಾ 571 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಅಂತಿಮವಾಗಿ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಇದರೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 2-1 ರಿಂದ ಗೆದ್ದುಕೊಂಡ ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೆ ಟಿಕೆಟ್ ಖಚಿತಪಡಿಸಿಕೊಂಡಿತ್ತು.

ಶೀಘ್ರದಲ್ಲೇ ಇಂಗ್ಲೆಂಡ್‌ಗೆ ತೆರಳಲಿದ್ದಾರೆ ರೋಹಿತ್

ನಾಯಕ ರೋಹಿತ್ ಶರ್ಮಾ ಸೇರಿದಂತೆ ಭಾರತದ ಕೆಲವು ಆಟಗಾರರು ಶೀಘ್ರದಲ್ಲೇ ಇಂಗ್ಲೆಂಡ್‌ಗೆ ಬಂದಿಳಿಯಲಿದ್ದಾರೆ. ಶುಕ್ರವಾರ (ಮೇ 26) ನಡೆದ IPL 2023 ರ ಎರಡನೇ ಕ್ವಾಲಿಫೈಯರ್‌ನಲ್ಲಿ ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಫೈನಲ್ ತಲುಪಲು ವಿಫಲವಾದ ಕಾರಣ, ರೋಹಿತ್ ಮತ್ತು ಟೆಸ್ಟ್ ತಂಡದ ಭಾಗವಾಗಿರುವ ಇತರ ಆಟಗಾರರು ಶೀಘ್ರದಲ್ಲೇ ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಗುಜರಾತ್ ಟೈಟಾನ್ಸ್ ಫೈನಲ್‌ಗೆ ಅರ್ಹತೆ ಪಡೆದಿರುವ ಕಾರಣ ಶುಭ್​ಮನ್ ಗಿಲ್ ಮೇ 29 ರ ಮೊದಲು ಇಂಗ್ಲೆಂಡ್‌ಗೆ ವಿಮಾನ ಹತ್ತಲು ಸಾಧ್ಯವಾಗುವುದಿಲ್ಲ. ಗಿಲ್, ಅಜಿಂಕ್ಯ ರಹಾನೆ, ಕೆಎಸ್ ಭರತ್ ಮತ್ತು ಸ್ಟ್ಯಾಂಡ್‌ಬೈ ಆಟಗಾರರಲ್ಲಿ ಒಬ್ಬರಾಗಿರುವ ರುತುರಾಜ್ ಗಾಯಕ್ವಾಡ್ ಐಪಿಎಲ್ 2023 ರ ಫೈನಲ್ ನಂತರ ಇಂಗ್ಲೆಂಡ್‌ಗೆ ತೆರಳಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/wtc-final-2023-pakistan-legend-reacts-to-virat-kohlis-tweet-sends-his-wishes-before-wtc-final-psr-588474.html

Leave a Reply

Your email address will not be published. Required fields are marked *