WTC Final 2023: ಫೈನಲ್​ಗೂ ಮುನ್ನ ಕ್ರಿಕೆಟ್ ದೇವರು ನೀಡಿದ ಸಲಹೆಯನ್ನು ಕಡೆಗಣಿಸಿದ ಭಾರತಕ್ಕೆ ಸೋಲಿನ ಶಾಕ್..!

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಟಾಸ್ ಆಗಿ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಪ್ರಕಟವಾದ ಬಳಿಕ ಆರಂಭವಾದ ಅದೊಂದು ಚರ್ಚೆ, ಈ ಫೈನಲ್ ಪಂದ್ಯ ಮುಗಿದ ಬಳಿಕವೂ ಮುನ್ನೆಲೆಗೆ ಬಂದಿದೆ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿ ಟೀಂ ಇಂಡಿಯಾ ಸೋತ ನಂತರ, ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಕೂಡ ಟೀಂ ಇಂಡಿಯಾದ ಈ ನಿರ್ಧಾರದ ಬಗ್ಗೆ ಮತ್ತೊಮ್ಮೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಲಂಡನ್‌ನ ಓವಲ್‌ನಲ್ಲಿ ಭಾರತವನ್ನು 209 ರನ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು. ಪಂದ್ಯದ ಕೊನೆಯ ದಿನವಾದ ಭಾನುವಾರ, ಜೂನ್ 11 ರಂದು, ಆಸ್ಟ್ರೇಲಿಯಾ ಕೊನೆಯ ಇನ್ನಿಂಗ್ಸ್‌ನಲ್ಲಿ ಭಾರತವನ್ನು ಕೇವಲ 234 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಟೀಂ ಇಂಡಿಯಾವನ್ನು ಇಷ್ಟು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಆಸ್ಟ್ರೇಲಿಯಾದ ಆಫ್-ಸ್ಪಿನ್ನರ್ ನಾಥನ್ ಲಿಯಾನ್ ಪ್ರಮುಖ ಪಾತ್ರವಹಿಸಿದರು. ಈ ಬಲಗೈ ಸ್ಪಿನ್ನರ್ ಪ್ರಮುಖ 4 ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರು.ಈ ಆಸೀಸ್ ಆಫ್-ಸ್ಪಿನ್ನರ್​ ನೀಡಿದ ಅದ್ಭುತ ಪ್ರದರ್ಶನದ ಬಳಿಕ ಟೀಂ ಇಂಡಿಯಾ ಆರ್. ಅಶ್ವಿನ್ ಅವರನ್ನು ತಂಡದಿಂದ ಕೈಬಿಟ್ಟು ದೊಡ್ಡ ತಪ್ಪು ಮಾಡಿತೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಏಕೆಂದರೆ ಟೆಸ್ಟ್ ಕ್ರಿಕೆಟ್​ನ ನಂ.1 ಬೌಲರ್ ಎನಿಸಿಕೊಂಡಿರುವ ಅಶ್ವಿನ್​ರನ್ನು ಕೈಬಿಟ್ಟಿದ್ದು ಟೀಂ ಇಂಡಿಯಾ ಸೋಲಿಗೆ ಕಾರಣ ಎಂಬುದು ಹಲವು ಕ್ರಿಕೆಟ್​ ಪಂಡಿತರ ವಾದ. ಇದೀಗ ಅದೇ ವಾದವನ್ನು ಕ್ರಿಕೆಟ್​ ದೇವರು ಸಚಿನ್ ಕೂಡ ಮುಂದಿಟ್ಟಿದ್ದಾರೆ.ಸಾಮಾನ್ಯವಾಗಿ ಭಾರತ ತಂಡ ಯಾವುದೇ ಟೂರ್ನಿಯಲ್ಲಿ ಸೋತರೂ, ತಂಡದ ನಿರ್ಧಾರಗಳನ್ನು ಟೀಕಿಸುವುದು ಅಥವಾ ಪ್ರಶ್ನಿಸುವ ಕೆಲಸವನ್ನು ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ ಮಾಡುವುದಿಲ್ಲ. ಆದರೆ ಓವಲ್‌ನಲ್ಲಿನ ಅವಮಾನಕರ ಸೋಲಿನ ಬಳಿಕ ಅಸಮಾಧಾನಗೊಂಡಿರುವ ಸಚಿನ್, ಟ್ವೀಟ್‌ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ಟೀಂ ಇಂಡಿಯಾದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.ತಮ್ಮ ಪೋಸ್ಟ್‌ನಲ್ಲಿ, ವಿಶ್ವದ ನಂಬರ್ ಒನ್ ಟೆಸ್ಟ್ ಬೌಲರ್ ಅನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಏಕೆ ಹೊರಗಿಡಲಾಯಿತು ಎಂದು ಸಚಿನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಪಂದ್ಯಕ್ಕೂ ಮುಂಚೆಯೇ, ಓವಲ್ ಪಿಚ್‌ನಲ್ಲಿ ಸ್ಪಿನ್ನರ್‌ಗಳ ಪರಿಣಾಮವನ್ನು ಉಲ್ಲೇಖಿಸಿ ಸಚಿನ್ ವೀಡಿಯೊದಲ್ಲಿ ಅಶ್ವಿನ್‌ಗೆ ಅವಕಾಶ ನೀಡಬೇಕು ಎಂಬ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಆದರೆ ಟೀಂ ಇಂಡಿಯಾ ಅನುಭವಿಗಳ ಮಾತಿಗೆ ಸೊಪ್ಪು ಹಾಕದೆ ಸೋಲಿನ ದಂಡ ತೆತ್ತಿದೆ.ಸಚಿನ್ ಮಾತ್ರವಲ್ಲದೆ, ಪಂದ್ಯದ ಮೊದಲ ದಿನದಂದು ತಂಡದ ಆಡುವ ಹನ್ನೊಂದರ ಬಳಗದ ಪಟ್ಟಿ ಹೊರಬಿದ್ದ ಬಳಿಕ, ಸುನಿಲ್ ಗವಾಸ್ಕರ್, ಸೌರವ್ ಗಂಗೂಲಿ, ರಿಕಿ ಪಾಂಟಿಂಗ್ ಸೇರಿದಂತೆ ಭಾರತ ಮತ್ತು ಆಸ್ಟ್ರೇಲಿಯಾದ ಅನೇಕ ಅನುಭವಿ ಆಟಗಾರರು ಸಹ ಈ ನಿರ್ಧಾರವನ್ನು ಪ್ರಶ್ನಿಸಿದ್ದರು.

source https://tv9kannada.com/photo-gallery/cricket-photos/wtc-final-2023-i-fail-to-understand-exclusion-of-r-ashwin-says-sachin-tendulkar-psr-599307.html

Leave a Reply

Your email address will not be published. Required fields are marked *