
ಐಸಿಸಿ ಟೂರ್ನಿ ಗೆಲ್ಲುವ ಟೀಂ ಇಂಡಿಯಾದ (Team India) 10 ವರ್ಷಗಳ ಕನಸು ಮತ್ತೊಮ್ಮೆ ನನಸಾಗಿಲ್ಲ. ಭಾನುವಾರ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (World Test Championship final) ಫೈನಲ್‌ನಲ್ಲಿ ಭಾರತವನ್ನು ಆಸ್ಟ್ರೇಲಿಯಾ (India vs Australia) ತಂಡ ಸೋಲಿಸಿತು. ಈ ಪಂದ್ಯದಲ್ಲಿ ಮೊದಲ ದಿನದಿಂದಲೇ ಪ್ರಾಬಲ್ಯ ಮೆರೆದ ಕಾಂಗರೂಗಳು ಟೀಂ ಇಂಡಿಯಾಗೆ ಪುನರಾಗಮನಕ್ಕೆ ಒಂದೇ ಒಂದು ಅವಕಾಶವನ್ನು ನೀಡಲಿಲ್ಲ. ಐದನೇ ದಿನ ವಿರಾಟ್ ಕೊಹ್ಲಿ (Virat Kohli) ಮತ್ತು ಅಜಿಂಕ್ಯ ರಹಾನೆ ಜೊತೆಯಾಗಿ ಪಂದ್ಯವನ್ನು ಎಳೆಯುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ರಹಾನೆ ಅವರ ಅದ್ಭುತ ಇನ್ನಿಂಗ್ಸ್ ಬಿಟ್ಟರೆ ಬೇರೆ ಯಾವ ಆಟಗಾರನೂ ಗೆಲುವಿನ ಹಸಿವನ್ನು ತೋರಲಿಲ್ಲ. ಹೀಗಾಗಿ ಟೀಂ ಇಂಡಿಯಾ ಸತತ ಎರಡನೇ ಬಾರಿಗೂ ಚಾಂಪಿಯನ್ ಆಗುವ ಅವಕಾಶವನ್ನು ಕಳೆದುಕೊಂಡಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಸೋಲಿಗೆ ಹಲವಾರು ಕಾರಣಗಳಿದ್ದು, ಅವುಗಳಲ್ಲಿ ಪ್ರಮುಖ 5 ಕಾರಣಗಳ ಬಗ್ಗೆ ಒಂದಿಷ್ಟು ವಿವರ ಇಲ್ಲಿದೆ.
ಈ ಪಂದ್ಯದಲ್ಲಿ ಭಾರತ ಕೇವಲ ಟಾಸ್ ಗೆದ್ದಿದ್ದನ್ನು ಬಿಟ್ಟರೇ, ಉಳಿದಂತೆ ಆಸ್ಟ್ರೇಲಿಯ ತಂಡ ಇಡೀ ಪಂದ್ಯದಲ್ಲಿ ಮೇಲುಗೈ ಸಾಧಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ 469 ರನ್ ಬಾರಿಸಿದರೆ, ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 296 ರನ್‌ಗಳಿಗೆ ಆಲೌಟ್ ಆಯಿತು. ನಂತರ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು ಎಂಟು ವಿಕೆಟ್‌ಗಳಿಗೆ 270 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು ಮತ್ತು ಭಾರತಕ್ಕೆ 444 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಈ ಬೃಹತ್ ಗುರಿಯ ಮುಂದೆ ಟೀಂ ಇಂಡಿಯಾ ಕೇವಲ 234 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ ಹೀನಾಯ ಸೋಲು ಕಂಡಿತು.
WTC Final 2023: ಕಳಪೆ ಬೌಲಿಂಗ್, ಕೆಟ್ಟ ಬ್ಯಾಟಿಂಗ್! ಹೀನಾಯ ಸೋಲಿಗೆ ದ್ರಾವಿಡ್ ನೀಡಿದ ಕಾರಣಗಳಿವು
ಈ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಡಿದ ತಪ್ಪುಗಳು
ಜೊತೆಯಾಟ ಮುರಿಯಲಿಲ್ಲ
ಮೊದಲನೇಯದ್ದಾಗಿ ಈ ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್ ಪರಿಣಾಮಕಾರಿಯಾಗಲಿಲ್ಲ. ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್ರನ್ನು ನಿಯಂತ್ರಿಸಲು ಟೀಂ ಇಂಡಿಯಾದ ಯಾವುದೇ ಬೌಲರ್‌ಗೆ ಸಾಧ್ಯವಾಗಲಿಲ್ಲ. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದ ಭಾರತ ಆಸ್ಟ್ರೇಲಿಯಾದ ಮೂರು ವಿಕೆಟ್‌ಗಳನ್ನು ಬೇಗನೆ ಉರುಳಿಸಿತು. ಇದಾದ ನಂತರ ಮತ್ತೆ ಸ್ಮಿತ್ ಮತ್ತು ಹೆಡ್ ಭಾರತದ ಬೌಲರ್‌ಗಳ ಲಯವನ್ನು ಹಾಳು ಮಾಡಿದರು. ಮೊದಲ ದಿನವೇ ಹಾಳಾದ ಲಯ ಮತ್ತೆ ಮರಳಲು ಸಾಧ್ಯವಾಗಲಿಲ್ಲ.
ಎಡವಿದ ಬ್ಯಾಟಿಂಗ್ ವಿಭಾಗ
ಆಸ್ಟ್ರೇಲಿಯ ಬೃಹತ್ ಸ್ಕೋರ್ ಮಾಡಿದ್ದರಿಂದ ಭಾರತದ ಬ್ಯಾಟ್ಸ್‌ಮನ್‌ಗಳು ಕೂಡ ರನ್ ಗಳಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಎರಡನೇ ದಿನ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ತರಗೆಲೆಗಳಂತೆ ಉದುರಿತು. ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿಯ ಹೊರತಾಗಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಕೂಡ ರನ್ ಗಳಿಸುವಲ್ಲಿ ವಿಫಲರಾದರು.
ದೊಡ್ಡ ಜೊತೆಯಾಟ ಬರಲಿಲ್ಲ
ಟೀಂ ಇಂಡಿಯಾ ಪರ ಅಜಿಂಕ್ಯ ರಹಾನೆ ಮೂರನೇ ದಿನ ಕೊಂಚ ಹೋರಾಟ ನೀಡಿದರಾದರೂ ಶತಕದ ಸನಿಹದಲ್ಲಿ ಎಡವಿದ್ದರಿಂದ ಟೀಂ ಇಂಡಿಯಾ 300 ರನ್ ಗಳಿಸಲೂ ಸಾಧ್ಯವಾಗಲಿಲ್ಲ. ಭಾರತದ ಪರ, ಈ ಪಂದ್ಯದಲ್ಲಿ ಕೇವಲ ಇಬ್ಬರು ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಗಳಿಸಲು ಸಾಧ್ಯವಾಯಿತು. ಅವರೆಂದರೆ ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್ ಠಾಕೂರ್. ಇವರಿಬ್ಬರೂ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದರು.
ಟಾಪ್ ಆರ್ಡರ್ ಪ್ಲಾಫ್ ಶೋ
ನಾಲ್ಕನೇ ದಿನ ಭಾರತದ ಬೌಲರ್‌ಗಳು ಆಸ್ಟ್ರೇಲಿಯದ ವಿಕೆಟ್‌ಗಳನ್ನು ಬೇಗನೆ ಕಬಳಿಸಬೇಕಿತ್ತು. ಆದರೆ ಈ ಕೆಲಸ ಸಾಧ್ಯವಾಗದೆ ಭಾರತಕ್ಕೆ 444 ರನ್‌ಗಳ ಬೃಹತ್ ಗುರಿ ಲಭಿಸಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ರೋಹಿತ್ ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅದು ಸಾಧ್ಯವಾಗಲಿಲ್ಲ. ಈ ಇನ್ನಿಂಗ್ಸ್‌ನಲ್ಲಿ ಪೂಜಾರ ಕೂಡ ಕೆಟ್ಟ ಶಾಟ್ ಆಡಿ ಔಟಾದರು.
ಎಡವಿದ ರಹಾನೆ- ಕೊಹ್ಲಿ ಜೋಡಿ
ಐದನೇ ದಿನ ಭಾರತದ ಗೆಲುವಿಗೆ 280 ರನ್ ಬೇಕಿತ್ತು.ಕಳೆದ ಕೆಲ ವರ್ಷಗಳಲ್ಲಿ ಟೆಸ್ಟ್ನಲ್ಲಿ ಟೀಂ ಇಂಡಿಯಾ ತೋರಿದ ಹೋರಾಟದ ಮನೋಭಾವ ನೋಡಿದರೆ ಈ ಕೆಲಸ ಸಾಧ್ಯವೇನೋ ಎನಿಸಿತು.ಇದಕ್ಕೆ ಒಂದು ಕಾರಣ ವಿರಾಟ್ ಕೊಹ್ಲಿ ಹಾಗೂ ರಹಾನೆ ವಿಕೆಟ್ನಲ್ಲಿದ್ದದ್ದು. ಆದರೆ ಕೊಹ್ಲಿ ಕೆಟ್ಟ ಶಾಟ್ ಆಡಿ ಔಟಾದರು ಮತ್ತು ರಹಾನೆಗೂ ಕೂಡ ಹೆಚ್ಚು ಹೊತ್ತು ವಿಕೆಟ್ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Views: 0