WTC points table: ಲಂಕಾವನ್ನು ಮಣಿಸಿ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಆಫ್ರಿಕಾ

WTC points table: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ ರೇಸ್​​ನಲ್ಲಿರಿವ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ವಿರುದ್ಧ ಅಮೋಘ ಜಯ ಸಾಧಿಸುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.ಹೀಗಾಗಿ ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೆ ಕುಸಿದಿದೆ. ಇದೀಗ ಟೀಂ ಇಂಡಿಯಾ ಕೂಡ ಮೊದಲ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದೆ.

2024-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ರೇಸ್ ಪಂದ್ಯದಿಂದ ಪಂದ್ಯಕ್ಕೆ ಕುತೂಹಲಕಾರಿ ಘಟ್ಟ ತಲುಪುತ್ತಿದೆ. ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಒಟ್ಟು 5 ತಂಡಗಳು ಫೈನಲ್ ತಲುಪಲು ಸ್ಪರ್ಧಿಗಳಾಗಿವೆ. ಇತ್ತೀಚೆಗಷ್ಟೇ ಪರ್ತ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಪಾಯಿಂಟ್ಸ್ ಪಟ್ಟಿಯಲ್ಲಿ ಮತ್ತೊಮ್ಮೆ ಮೊದಲ ಸ್ಥಾನ ಗಳಿಸಿತ್ತು.

ಆದರೆ ಇದೀಗ ಆಸ್ಟ್ರೇಲಿಯಾಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದ್ದು, ಮೊದಲ ಟೆಸ್ಟ್ ಸೋತಿರುವ ಕಾಂಗರೂ ಪಡೆ ಟಾಪ್-2ರಿಂದಲೂ ಹೊರಗುಳಿದಿದೆ. ಅದೇ ಸಮಯದಲ್ಲಿ ಈ ಹಿಂದೆ 5 ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡ ನೇರವಾಗಿ ಎರಡನೇ ಸ್ಥಾನಕ್ಕೆ ಬಂದಿದೆ. ಅಂದರೆ ಫೈನಲ್ ರೇಸ್​ನಲ್ಲಿ ಆಫ್ರಿಕಾ ತಂಡಕ್ಕೆ ಭಾರಿ ಮುನ್ನಡೆ ಸಿಕ್ಕಿದೆ.

ಪ್ರಸ್ತುತ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯ ಕಿಂಗ್ಸ್‌ಮೀಡ್ ಡರ್ಬಿಯಲ್ಲಿ ನಡೆಯಿತು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 233 ರನ್‌ಗಳ ಜಯ ಸಾಧಿಸಿತ್ತು. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯನ್ನು ಸಂಪೂರ್ಣವಾಗಿ ಬದಲಾಯಿಸಿದೆ.

ದಕ್ಷಿಣ ಆಫ್ರಿಕಾ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 5 ಗೆಲುವು ಮತ್ತು 3 ಸೋಲುಗಳೊಂದಿಗೆ 59.25 ಶೇಕಡಾವಾರು ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ. ಇದರಿಂದಾಗಿ ಆಸ್ಟ್ರೇಲಿಯಾ ತಂಡ ಮೂರನೇ ಸ್ಥಾನಕ್ಕೆ ಜಾರಿದೆ. ಮತ್ತೊಂದೆಡೆ ಶ್ರೀಲಂಕಾ ತಂಡ 3ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದಿದ್ದು ಅದರ ಶೇಕಡಾವಾರು ಅಂಕಗಳು 50.00 ಆಗಿವೆ.

ಉಳಿದಂತೆ ಟೀಂ ಇಂಡಿಯಾ 15 ಪಂದ್ಯಗಳಲ್ಲಿ 9 ಗೆಲುವು, ಶೇ.61.11 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಆಸ್ಟ್ರೇಲಿಯ ತಂಡ 13 ಪಂದ್ಯಗಳಲ್ಲಿ 8 ಗೆಲುವು ಮತ್ತು 57.69 ಶೇಕಡಾ ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಜಾರಿದೆ. ಇದರರ್ಥ ದಕ್ಷಿಣ ಆಫ್ರಿಕಾ ಈಗ ಟೀಂ ಇಂಡಿಯಾವನ್ನು ಹಿಂದಿಕ್ಕುವ ಅವಕಾಶವನ್ನು ಹೊಂದಿದೆ. ಹೀಗಾಗಿ ಟೀಂ ಇಂಡಿಯಾ ಅಡಿಲೇಡ್ ಟೆಸ್ಟ್‌ನಲ್ಲಿ ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು.

ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ 191 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ತಂಡವು ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 13.5 ಓವರ್‌ಗಳಲ್ಲಿ 42 ರನ್ ಗಳಿಸಿ ಆಲೌಟ್ ಆಗಿತ್ತು. ಇದಾದ ಬಳಿಕ ಎರಡನೇ ಇನ್ನಿಂಗ್ಸ್​ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ದಕ್ಷಿಣ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 366 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು, ಶ್ರೀಲಂಕಾ ಗೆಲುವಿಗೆ 516 ರನ್​ಗಳ ಗುರಿ ನೀಡಿತ್ತು. ಈ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 282 ರನ್‌ಗಳಿಗೆ ಆಲೌಟ್ ಆಗುವ ಮೂಲಕ, 233 ರನ್‌ಗಳಿಂದ ಸೋಲನುಭವಿಸಿತು.

Leave a Reply

Your email address will not be published. Required fields are marked *