Yashasvi Jaiswal: ಇತಿಹಾಸ ನಿರ್ಮಿಸಿದ ಯಶಸ್ವಿ ಜೈಸ್ವಾಲ್: ಐಪಿಎಲ್​ನಲ್ಲಿ ಯಾರೂ ಮಾಡಿಲ್ಲ ಈ ಸಾಧನೆ

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಶುಕ್ರವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಈ ಮೂಲಕ ಆರ್​ಆರ್​ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ.ರಾಜಸ್ಥಾನ್ ಗೆಲುವಿನಲ್ಲಿ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅರ್ಧಶತಕ ಸಿಡಿಸಿ ನೆರವಾದರು. 36 ಎಸೆತಗಳಲ್ಲಿ 8 ಫೋರ್​ನೊಂದಿಗೆ 50 ರನ್ ಚಚ್ಚಿದರು. ಇದರ ಜೊತೆಗೆ ಐಪಿಎಲ್​ನಲ್ಲಿ ಇದುವರೆಗೆ ಯಾರೂ ಮಾಡಿರದ ವಿಶೇಷ ಸಾಧನೆ ಗೈದಿದ್ದಾರೆ. 188 ರನ್‌ಗಳ ಗುರಿ ಬೆನ್ನತ್ತಿದ್ದ ರಾಜಸ್ಥಾನ್ ಪರ ಜೈಸ್ವಾಲ್‌ 41 ರನ್‌ ಗಳಿಸುತ್ತಿದ್ದಂತೆಯೇ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಕಲೆಹಾಕಿದ ಅನ್‌ಕ್ಯಾಪ್ಡ್‌ (ರಾಷ್ಟ್ರೀಯ ತಂಡದ ಪರ ಆಡದ) ಆಟಗಾರ ಎಂಬ ದಾಖಲೆ ಸೃಷ್ಟಿಸಿದ್ದಾರೆ.15 ವರ್ಷಗಳ ಹಿಂದೆ 2008ರಲ್ಲಿ ನಡೆದ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಆಟಗಾರ ಶಾನ್‌ ಮಾರ್ಷ್‌ 616 ರನ್‌ಗಳೊಂದಿಗೆ ದಾಖಲೆ ನಿರ್ಮಿಸಿದ್ದರು. ಇದೀಗ ಜೈಸ್ವಾಲ್‌ 625 ರನ್‌ಗಳೊಂದಿಗೆ ಈ ದಾಖಲೆ ಮುರಿದು ವಿಶೇಷ ಸಾಧನೆ ಮಾಡಿದ್ದಾರೆ.ಇದಿಷ್ಟೆ ಅಲ್ಲದೆ 25 ವರ್ಷ ವಯಸ್ಸಿಗೂ ಮೊದಲೇ ಐಪಿಎಲ್‌ ಟೂರ್ನಿಯ ಆವೃತ್ತಿ ಒಂದರಲ್ಲಿ 600+ ರನ್‌ ಕಲೆಹಾಕಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಗೆ ಜೈಸ್ವಾಲ್ ಸೇರಿದ್ದಾರೆ. ಈ ಮೂಲಕ ವಿರಾಟ್‌ ಕೊಹ್ಲಿ, ರಿಷಭ್ ಪಂತ್ ಮತ್ತು ಋತುರಾಜ್ ಗಾಯಕ್ವಾಡ್ ಇರುವ ವಿಶೇಷ ದಾಖಲೆ ಪಟ್ಟಿಗೆ ಸೇರಿದ್ದಾರೆ.ಧರ್ಮಶಾಲಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲ ಬ್ಯಾಟಿಂಗ್​ ಮಾಡಿದ ಪಂಬಾಜ್​ 187 ರನ್​ಗಳನ್ನು ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್​ ತಂಡವು ಇನ್ಸಿಂಗ್ಸ್​ನ ಎರಡು ಎಸೆತಗಳು ಬಾಕಿ ಇರುವಾಗಲೇ 189 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.ಪಂಜಾಬ್​ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್‌ ತಂಡ ನಾಲ್ಕು ವಿಕೆಟ್​ಗಳ ರೋಚಕ ಜಯ ದಾಖಲಿಸುವ ಮೂಲಕ ಪ್ಲೇ ಆಫ್ ರೇಸ್​ನಲ್ಲಿ ಉಳದಿದೆ. ಸೋಲಿನೊಂದಿಗೆ ಐಪಿಎಲ್​ ಟೂರ್ನಿನಿಂದ ಶಿಖರ್​ ಧವನ್​ ಪಡೆ ಹೊರ ಬಿದ್ದಿದೆ.

source https://tv9kannada.com/photo-gallery/cricket-photos/rajasthan-royals-opener-yashasvi-jaiswal-created-history-during-rr-vs-pbks-kannada-news-vb-582866.html

Views: 0

Leave a Reply

Your email address will not be published. Required fields are marked *