Yashasvi Jaiswal: ಯಶಸ್ವಿ ಜೈಸ್ವಾಲ್ ತೂಫಾನ್ ಶತಕ: ಹಳೆಯ ದಾಖಲೆಗಳು ಧೂಳೀಪಟ

IPL 2023: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 1000ನೇ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್ ಹಲವು ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಆಯ್ದುಕೊಂಡಿತು.ಅದರಂತೆ ಮುಂಬೈ ಇಂಡಿಯನ್ಸ್ ವಿರುದ್ಧ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಮುಂಬೈ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ಜೈಸ್ವಾಲ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಪರಿಣಾಮ ಕೇವಲ 53 ಎಸೆತಗಳಲ್ಲಿ ಶತಕ ಮೂಡಿಬಂತು. ಅಷ್ಟೇ ಅಲ್ಲದೆ 62 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 16 ಫೋರ್​ನೊಂದಿಗೆ 124 ರನ್​ಗಳಿಸಿ ಔಟಾದರು. ಈ ಭರ್ಜರಿ ಶತಕದೊಂದಿಗೆ ಯಶಸ್ವಿ ಜೈಸ್ವಾಲ್ ಐಪಿಎಲ್​ನಲ್ಲಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...ರಾಜಸ್ಥಾನ್ ರಾಯಲ್ಸ್ ಪರ ಗರಿಷ್ಠ ವೈಯುಕ್ತಿಕ ಸ್ಕೋರ್​ಗಳಿಸಿದ ದಾಖಲೆ ಇದೀಗ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಈ ಹಿಂದೆ ಜೋಸ್ ಬಟ್ಲರ್ 64 ಎಸೆತಗಳಲ್ಲಿ 124 ರನ್​ ಬಾರಿಸಿದ್ದರು. ಇದೀಗ ಕೇವಲ 62 ಎಸೆತಗಳಲ್ಲಿ 124 ರನ್​ ಬಾರಿಸಿ ಜೈಸ್ವಾಲ್ ಅಗ್ರಸ್ಥಾನಕ್ಕೇರಿದ್ದಾರೆ.ಐಪಿಎಲ್​ ಇತಿಹಾಸದಲ್ಲೇ ಗರಿಷ್ಠ ಸ್ಕೋರ್​ಗಳಿಸಿದ ಅನ್​ಕ್ಯಾಪ್ಡ್​ ಆಟಗಾರ ಎಂಬ ದಾಖಲೆ ಕೂಡ ಯಶಸ್ವಿ ಜೈಸ್ವಾಲ್​ ಪಾಲಾಗಿದೆ. 2011 ರಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಪೌಲ್ ವಾಲ್ತಟಿ ಸಿಎಸ್​ಕೆ ವಿರುದ್ಧ 120 ರನ್​ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 124 ರನ್​ ಬಾರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಕೂಡ ಜೈಸ್ವಾಲ್ ತಮ್ಮದಾಗಿಸಿಕೊಂಡಿದ್ದಾರೆ. 21 ವರ್ಷದ ಯಶಸ್ವಿ ಜೈಸ್ವಾಲ್ 124 ರನ್​ ಬಾರಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.ರಾಜಸ್ಥಾನ್ ರಾಯಲ್ಸ್ ತಂಡದ ಪರ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಜೈಸ್ವಾಲ್ ಪಾತ್ರರಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿರುವ ಜೈಸ್ವಾಲ್ ಅವರ ಪ್ರಸ್ತುತ ವಯಸ್ಸು 21 ವರ್ಷ, 123 ದಿನಗಳು.ಇನ್ನು ಈ ಬಾರಿಯ ಐಪಿಎಲ್​ನಲ್ಲಿ ಗರಿಷ್ಠ ಸ್ಕೋರ್​ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಕೂಡ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಇದಕ್ಕೂ ಮುನ್ನ 104 ರನ್​ ಬಾರಿಸಿದ್ದ ವೆಂಕಟೇಶ್ ಅಯ್ಯರ್​ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಇದೀಗ 124 ರನ್ ಬಾರಿಸುವ ಮೂಲಕ ಜೈಸ್ವಾಲ್ ಮೊದಲ ಸ್ಥಾನಕ್ಕೇರಿದ್ದಾರೆ.

source https://tv9kannada.com/photo-gallery/cricket-photos/yashasvi-jaiswal-maiden-hundred-in-ipl-2023-kannada-news-zp-au50-567227.html

Leave a Reply

Your email address will not be published. Required fields are marked *