ಚಿತ್ರದುರ್ಗ, ಅ. 23:
“ನವೆಂಬರ್-ಡಿಸೆಂಬರ್‌ನಲ್ಲಿ ಕ್ರಾಂತಿ ಎಂದು ನಾನು ಹೇಳಿದ್ದೆ. ಕಾಂಗ್ರೆಸ್ ನಾಯಕರು ಅದನ್ನು ಭ್ರಾಂತಿ ಎಂದಿದ್ದರು. ಆದರೆ ಈಗ ನಿಜವಾಗುತ್ತಿದೆ. ಬೆಳಗಾವಿಗೆ ಹೋಗಿ ಯತೀಂದ್ರ ಸಿದ್ಧರಾಮಯ್ಯ ಹೇಳಿಕೆ ನೀಡುವ ಅಗತ್ಯ ಏನಿತ್ತು? ಕಿರಿಕ್ ಅಲ್ಲಿ ಆರಂಭವಾಗಿದೆ. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಬೀಳುವ ಪ್ರಾರಂಭವೂ ಬೆಳಗಾವಿಯಿಂದಲೇ ಆಗಿತ್ತು. ಈಗಲೂ ಅದೇ ನಡೆಯುತ್ತಿದೆ” ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಆಶೋಕ್ ಆರೋಪಿಸಿದರು.
ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯತೀಂದ್ರರ ಹೇಳಿಕೆಯ ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿಎಂ ಸ್ಥಾನಕ್ಕೆ ‘ಟವಲ್ ಹಾಕಿಬಿಟ್ಟರು’. ಆದರೆ ಅವರಿಗೆ ಸಿಎಂ ಆಗದಂತೆ ಕಾಂಗ್ರೆಸ್ ಒಳಗೇ ಕುತಂತ್ರ ನಡೆದಿದೆ. ಸರ್ಕಾರ ಬಿದ್ದರೆ ಚುನಾವಣೆಗೆ ನಾವು ಸಿದ್ಧ” ಎಂದರು.
ಅವರು ಮುಂದುವರಿದು, “ಪ್ರಿಯಾಂಕ ಖರ್ಗೆ ಅವರ ಬಗ್ಗೆ ನಾನು ಹೇಳಲು ಬಯಸುವುದಿಲ್ಲ. ಆದರೆ ಐಟಿ-ಬಿಟಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. 1.3 ಲಕ್ಷ ಕೋಟಿ ಹೂಡಿಕೆ ಮತ್ತು 30 ಸಾವಿರ ಉದ್ಯೋಗ ರಾಜ್ಯದಿಂದ ಹೊರಟುಹೋದವು. ಇನ್ಫೋಸಿಸ್ ಮತ್ತು ಐಟಿ ಸಂಸ್ಥೆಗಳು ಸರ್ಕಾರದ ವಿರುದ್ಧ ಮಾತನಾಡುತ್ತಿವೆ. ಇವೆಲ್ಲವೂ ವಿಷಯಾಂತರ ಮಾಡಲು ಮಾಡುತ್ತಿರುವ ರಾಜಕೀಯ ಆಟಗಳು. ಮುಖ್ಯಮಂತ್ರಿಗಳ ಉದ್ದೇಶ ಕಿತಾಪತಿ ಸುದ್ದಿಗಳ ಮೂಲಕ ಗಮನ ಬೇರೆಡೆಗೆ ಸೆಳೆಯುವುದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಡಿ.ಕೆ. ಶಿವಕುಮಾರ್ ಅವರನ್ನು ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ. ಅವರು ಸಿಎಂ ಆಗಬಾರದು ಎಂಬ ತಂತ್ರಗಾರಿಕೆ ಸಿದ್ಧರಾಮಯ್ಯ ಗುಂಪಿನಿಂದ ನಡೆದಿದ್ದು, ಇದು ಕಾಂಗ್ರೆಸ್ ಒಳಗಿನ ವಿಭಜನೆಗೆ ಕಾರಣವಾಗಲಿದೆ” ಎಂದು ಆಶೋಕ್ ದೂರಿದರು.
ಚಿತ್ತಾಪುರ ವಿವಾದಕ್ಕೆ ಪ್ರತಿಕ್ರಿಯಿಸುತ್ತಾ ಅವರು, “ಆರ್.ಎಸ್.ಎಸ್. ರಾಷ್ಟ್ರಭಕ್ತ ಸಂಸ್ಥೆ. ಅದು ರಾಜಕೀಯ ಸಂಘಟನೆ ಅಲ್ಲ. ಆರ್.ಎಸ್.ಎಸ್. ಹಾಗೂ ಬಿಜೆಪಿ ಎರಡು ಬೇರೆ ಸಂಸ್ಥೆಗಳು. ಆರ್.ಎಸ್.ಎಸ್. ನಲ್ಲಿ ಜಾತಿಯ ಭೇದವಿಲ್ಲ, ದೇಶದ ಎಲ್ಲಾ ಸಮುದಾಯದವರು ಅಲ್ಲಿ ಇದ್ದಾರೆ. ದೇಶಕ್ಕಾಗಿ ತನು-ಮನ-ಧನ ತ್ಯಾಗ ಮಾಡುವ ರಾಷ್ಟ್ರವಾದಿ ಸಂಸ್ಥೆ ಅದು” ಎಂದು ಹೇಳಿದರು.
Views: 5