ಮಹಿಳೆಯರ ಋತು ಸಂಬಂಧಿಸಿದ ಸಮಸ್ಯೆಗಳಿಗೆ ಯೋಗ ಸೂಕ್ತ ಪರಿಹಾರ _ ರವಿ ಕೆ. ಅಂಬೇಕರ್.

ಚಿತ್ರದುರ್ಗ: ಜ.08 : “ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಇದು ಮನಸ್ಸು, ದೇಹ ಮತ್ತು ಆತ್ಮವನ್ನು ಸಮತೋಲನಗೊಳಿಸುವ ಪೂರ್ಣವಾದ ಅನುಭವ. ವಿಶೇಷವಾಗಿ ಮಹಿಳೆಯರಿಗೆ, ಯೋಗವು ಹಲವಾರು ಆರೋಗ್ಯ ಮತ್ತು ಸೌಂದರ್ಯ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರವಾಗಿದೆ.” ಎಂದು ಯೋಗಗುರು ರವಿ ಕೆ.ಅಂಬೇಕರ್ ಅಭಿಪ್ರಾಯ ಪಟ್ಟಿದ್ದಾರೆ.

ಜಿಲ್ಲಾ ಮಹಿಳಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಇದೇ ಆರೋಗ್ಯ ಕೇಂದ್ರದ ವ್ಯಾಪ್ತಿಯ ಹಳಿಯೂರು ಗ್ರಾಮದ ಅಂಗನವಾಡಿ ಎ ಮತ್ತು ಬಿ ಕೇಂದ್ರಗಳಲ್ಲಿ ಗ್ರಾಮದ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಯೋಗ ತರಬೇತಿ ನೀಡುತ್ತಾ ಅವರು ಮಾತನಾಡಿ ಯೋಗದ ನಿರ್ದಿಷ್ಟ ಆಸನಗಳು ಮತ್ತು ಪ್ರಾಣಾಯಾಮಗಳು ಮಹಿಳೆಯರಲ್ಲಿ ಮಾಸಿಕ ಸ್ರಾವದ ಸಮಯದಲ್ಲಿ ಆಗುವ ನೋವು, ಅಸ್ವಸ್ಥತೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.ಯೋಗವು ಮಹಿಳೆಯರಲ್ಲಿ ಹಾರ್ಮೋನುಗಳನ್ನು ಸಮತೋಲನಗೊಳಿಸಿ, ಮುಟ್ಟಿನ ಸಮಸ್ಯೆಗಳು, PCOS, ಮತ್ತು ಮೆನೋಪಾಸ್‌ನ ಲಕ್ಷಣಗಳನ್ನು ನಿವಾರಿಸುತ್ತದೆ.

ತೂಕ ನಷ್ಟ ಮತ್ತು ದೇಹದ ಆಕಾರ: ಯೋಗವು ಕ್ಯಾಲರಿಗಳನ್ನು ಸುಡುವುದರ ಜೊತೆಗೆ, ದೇಹದ ಸ್ನಾಯುಗಳನ್ನು ಬಲಪಡಿಸಿ, ಸೊಂಟದ ಸುತ್ತಳತೆಯನ್ನು ಕಡಿಮೆ ಮಾಡುತ್ತದೆ. ಯೋಗದ ಧ್ಯಾನ ಮತ್ತು ಪ್ರಾಣಾಯಾಮಗಳು ಮನಸ್ಸನ್ನು ಶಾಂತಗೊಳಿಸಿ, ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ನಿವಾರಿಸುತ್ತದೆ. ಯೋಗವು ರಕ್ತದೊತ್ತಡವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಯೋಗದ ಆಸನಗಳು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸಿ, ಮಲಬದ್ಧತೆ ಮತ್ತು ಅಜೀರ್ಣದ ಸಮಸ್ಯೆಗಳನ್ನು ನಿವಾರಿಸುತ್ತದೆ. ಯೋಗವು ಆತ್ಮವಿಶ್ವಾಸವನ್ನು ಹೆಚ್ಚಿಸಿ, ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಯೋಗವು ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಿ, ಚರ್ಮವನ್ನು ಹೊಳಪುಗೊಳಿಸುತ್ತದೆ.ಅನುಭವಿ ಯೋಗ ಗುರುಗಳ ಮಾರ್ಗದರ್ಶನದಲ್ಲಿ ಯೋಗ ಕಲಿಯಬಹುದು. ಯೂಟ್ಯೂಬ್ ಮತ್ತು ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಯೋಗ ವೀಡಿಯೋಗಳನ್ನು ಅನುಸರಿಸಿ ಯೋಗಭ್ಯಾಸ ಮಾಡುವುದು ಸೂಕ್ತವಾಗಿದೆ.

ಪ್ರಾರಂಭದಲ್ಲಿ ಯೋಗ ಮಾಡುವಾಗ ಕೆಲವು ಮುಖ್ಯವಾದ ಅಂಶಗಳನ್ನು ಗಮನಿಸಬೇಕಾಗುತ್ತದೆ ಯೋಗವನ್ನು ಪ್ರಾರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ. ಆರಂಭದಲ್ಲಿ ಸರಳವಾದ ಆಸನಗಳನ್ನು ಮಾಡಿ, ಕ್ರಮೇಣ ಕಷ್ಟದ ಆಸನಗಳಿಗೆ ಹೋಗಿ. ಯೋಗ ಮಾಡುವಾಗ ಸರಿಯಾದ ಉಸಿರಾಟವನ್ನು ಕಾಪಾಡಿಕೊಳ್ಳಿ. ಯೋಗ ಮಾಡುವಾಗ ಆರಾಮದಾಯಕವಾದ ಬಟ್ಟೆಗಳನ್ನು ಧರಿಸಿ.ಯೋಗವು ಮಹಿಳೆಯರ ಆರೋಗ್ಯ ಮತ್ತು ಸೌಂದರ್ಯವನ್ನು ಹೆಚ್ಚಿಸಲು ಅತ್ಯುತ್ತಮ ಮಾರ್ಗವಾಗಿದೆ. ನಿಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಸೇರಿಸಿಕೊಂಡು ಆರೋಗ್ಯಕರ ಮತ್ತು ಸಂತೋಷಕರ ಜೀವನವನ್ನು ನಡೆಸಿ ಎಂದು ಸಲಹೆ ನೀಡಿದರು.

ತರಬೇತಿಯಲ್ಲಿ ಯೋಗದ ಸೂಕ್ಷ್ಮ ವ್ಯಾಯಾಮಗಳು ಮತ್ತು ಪ್ರಾಣಾಯಾಮಗಳ ಕುರಿತು ತಿಳಿಸಿಕೊಡಲಾಯಿತು.

ತರಬೇತಿ ಶಿಬಿರದಲ್ಲಿ ಅಂಗನವಾಡಿ ಶಿಕ್ಷಕಿಯರಾದ ನಂದಾ, ಶಶಿಕಲಾ ಅಂಗನವಾಡಿ ಸಹಾಯಕಿ ಶ್ರೀಮತಿ ಮಂಜಮ್ಮ, ಹಳಿಯೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ನಿರ್ಮಲ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *