ಚಿತ್ರದುರ್ಗ|ರಸ್ತೆ ಅಗಲೀಕರಣ ನಿರ್ಧಾರ ಸ್ವಾಗತಾರ್ಹ : ಯೋಗೀಶ್ ಸಹ್ಯಾದ್ರಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 31: ನಗರದ ಬಿಡಿ ರೋಡ್ ಸೇರಿದಂತೆ ಪ್ರಮುಖ ರಸ್ತೆಗಳ ಅಗಲೀಕರಣದ ನಿರ್ಧಾರ ಸ್ವಾಗತಾರ್ಹವಾಗಿದೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ನಗರದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಲೇಖಕ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಯೋಗೀಶ್
ಸಹ್ಯಾದ್ರಿ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಚಿತ್ರದುರ್ಗ ನಗರದ ಪ್ರಮುಖ ರಸ್ತೆಗಳ ಅಗಲೀಕರಣದ ವಿಷಯ ಹಲವಾರು ವರ್ಷಗಳಿಂದ ಮುನ್ನೆಲೆಗೆ ಬಂದು, ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿ ಕೊನೆಗೆ ಕೇವಲ ಕಣ್ಣೊರೆಸುವ ತಂತ್ರವಾಗಿ ಮಾಯವಾಗುತ್ತಿತ್ತು. ಅಲ್ಲದೇ ಕಿಷ್ಕಿಂಧೆಯಂತಹ ರಸ್ತೆಗಳಿಂದಾಗಿ ಹಲವಾರು ಶಾಲಾ – ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಜಿಲ್ಲೆಯ ಮಟ್ಟಿಗೆ ಇಲ್ಲಿಯವರೆಗೂ ರಸ್ತೆ ಅಗಲೀಕರಣದ ವಿಷಯದಲ್ಲಿ ನಾಗರೀಕರು ವಿಶ್ವಾಸ ಕಳೆದುಕೊಂಡು ಸೋತು ಸುಣ್ಣವಾಗಿರುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಕ್ಷೇತ್ರದ ಶಾಸಕರು, ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳ ಉತ್ಸುಕತೆಯಿಂದ ಮತ್ತೆ ಜನರಲ್ಲಿ ಆಸೆ ಚಿಗುರೊಡೆದಿದೆ. ಆದರೆ ಈ ಬಾರಿ ನಗರದ ಬೆಳವಣಿಗೆಯ
ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ರಸ್ತೆ ಅಗಲೀಕರಣ ನಿಲ್ಲಬಾರದು ಮತ್ತು ಕಳಪೆ ಕಾಮಗಾರಿಯಾಗದೆ ಯೋಜನಾಬದ್ಧವಾಗಿ
ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಯೋಗೀಶ್ ಸಹ್ಯಾದ್ರಿ ತಮ್ಮ ಹೇಳಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯು ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ನೈಸರ್ಗಿಕವಾಗಿ ಶ್ರೀಮಂತವಾಗಿದ್ದು ರಾಜ್ಯದಲ್ಲಿ
ತನ್ನದೇ ಆದ ವಿಶಿಷ್ಟ ಖ್ಯಾತಿಯನ್ನು ಹೊಂದಿದ್ದೂ ಸಹ, ಬರದ ನಾಡು ಮತ್ತು ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೊಂದಿರುವುದು
ನಿಜಕ್ಕೂ ವಿಪರ್ಯಾಸವೇ ಸರಿ ಎಂದು ಅಭಿಪ್ರಾಯಪಟ್ಟಿರುವ ಅವರು ಜಿಲ್ಲೆಯ ಅಭಿವೃದ್ಧಿ, ಬೆಳವಣಿಗೆ, ಬದಲಾವಣೆ ಎಂಬ ವಿಷಯ
ಬಂದಾಗ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ರಾಜಕೀಯ ಮುಖಂಡರುಗಳು, ಜಿಲ್ಲೆಯ ಹೋರಾಟಗಾರರು, ಸಾಹಿತಿಗಳು,
ಸಾರ್ವಜನಿಕರು ಅಧಿಕಾರಿಗಳಿಗೆ ಸಾಥ್ ನೀಡುವ ಮೂಲಕ ಸಹಕರಿಸಿದರೆ ಉತ್ತಮವಾಗಲಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಾಡಿನ ಸಾಹಿತಿ ದೇವನೂರು ಮಹಾದೇವ ಅವರು ಬರೆದಿರುವ ‘ಡಾಂಬರು ಬಂದುದು’ ಕಥೆ ನೆನಪಿಗೆ ಬರುತ್ತದೆ
ಎಂದು ಹೇಳಿರುವ ಅವರು, ರಸ್ತೆ ಅಗಲೀಕರಣದ ವಿಷಯದಲ್ಲಿ ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ ಜಿಲ್ಲೆಯ ಜನರ
ಆಶಾಭಾವನೆಗೆ ಧಕ್ಕೆಯುಂಟುಮಾಡದೆ ಈಗಾಗಲೇ ನಿರ್ಧಾರ ಮಾಡಿರುವಂತೆ ಕಾನೂನು ಅನ್ವಯದಂತೆ ಹಾಗೂ ಮಾಲೀಕರು,
ವ್ಯಾಪಾರಸ್ಥರಿಗೆ ಯಾರಿಗೂ ಅನ್ಯಾಯವಾಗದಂತೆ ರಸ್ತೆಯ ಮಧ್ಯಭಾಗದಿಂದ 21 ಮೀಟರ್ ಅಗಲೀಕರಣವಾಗಲಿ. ಯಾವುದೇ ಆಸೆ,
ಆಮಿಷಗಳಿಗೆ ಒಳಗಾಗಿ ಮತ್ತೊಮ್ಮೆ ಹಿಂದಿನ ಅನುಭವಗಳು ಮರುಕಳಿಸಿದರೆ ಸಾರ್ವಜನಿಕರು ಕ್ಷಮಿಸುವುದಿಲ್ಲ ಎಂದು ತಮ್ಮ
ಪತ್ರಿಕಾ ಹೇಳಿಕೆಯ ಮೂಲಕ ಲೇಖಕ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಯೋಗೀಶ್ ಸಹ್ಯಾದ್ರಿ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *