ಮಹಿಳೆಯರ ಕಲ್ಯಾಣಕ್ಕಾಗಿಯೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಿವು! ನೀವೂ ಲಾಭ ಪಡೆಯಬಹುದು

ಶಿಕ್ಷಣ, ಸುರಕ್ಷತೆ ಮತ್ತು ಆರ್ಥಿಕ ಸ್ವಾತಂತ್ರ್ಯದ ಅಗತ್ಯವನ್ನು  ಪೂರೈಸಲು ನೆರವಾಗುವಂತೆ  ಸರ್ಕಾರ ಮಹಿಳೆಯರಿಗಾಗಿ ಪರಿಚಯಿಸಿದ 5 ಪ್ರಮುಖ ಯೋಜನೆಗಳು ಇಲ್ಲಿವೆ.

ಬೆಂಗಳೂರು : ಮಹಿಳೆಯರ ಸಬಲೀಕರಣಕ್ಕಾಗಿ ಕೆಂದರ್ ಸರ್ಕಾರ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಮೂಲಕ ಮಹಿಳೆಯರ ಅಭಿವೃದ್ದಿಗೆ ನೆರವು ನೀಡುತ್ತಿದೆ. ಶಿಕ್ಷಣ, ಸುರಕ್ಷತೆ ಮತ್ತು ಆರ್ಥಿಕ ಸ್ವಾತಂತ್ರ್ಯದ ಅಗತ್ಯವನ್ನು  ಪೂರೈಸಲು ನೆರವಾಗುವಂತೆ  ಸರ್ಕಾರ ಮಹಿಳೆಯರಿಗಾಗಿ ಪರಿಚಯಿಸಿದ 5 ಪ್ರಮುಖ ಯೋಜನೆಗಳು ಇಲ್ಲಿವೆ.

1. ಮಹಿಳಾ ಸಮ್ಮಾನ್ ಬಚತ್ ಪತ್ರ ಯೋಜನೆ ಅಥವಾ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ : 
2023 ರ ಬಜೆಟ್‌ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಅವರು, ಮಹಿಳೆಯರು ಮತ್ತು ಬಾಲಕಿಯರಿಗಾಗಿ ಮಹಿಳಾ ಸಮ್ಮಾನ್ ಬಚತ್ ಪತ್ರ ಯೋಜನೆ ಅಥವಾ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ಎಂಬ ಉಳಿತಾಯ ಯೋಜನೆಯನ್ನು ಘೋಷಿಸಿದರು. ಈ ಯೋಜನೆಯು ಮಹಿಳೆಯರು ಮತ್ತು ಹೆಣ್ಣುಮಕ್ಕಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಇದು ಒಂದು ಬಾರಿಯ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಗರಿಷ್ಠ 2 ಲಕ್ಷ ಠೇವಣಿಗೆ ಶೇಕಡಾ 7.5 ರ ಬಡ್ಡಿದರವನ್ನು ನೀಡುತ್ತದೆ. 

2. ಸುಕನ್ಯಾ ಸಮೃದ್ಧಿ ಯೋಜನೆ  : 
‘ಬೇಟಿ ಪಡಾವೋ-ಬೇಟಿ ಬಚಾವೋ’ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಉಳಿತಾಯ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ, 10 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ  ಖಾತೆಯನ್ನು ತೆರೆಯಬಹುದು. ಈ ಯೋಜನೆಯು ಹಲವಾರು ತೆರಿಗೆ ಪ್ರಯೋಜನಗಳೊಂದಿಗೆ ಹೆಚ್ಚಿನ ಬಡ್ಡಿದರವನ್ನು ಹೊಂದಿರುತ್ತದೆ. ಭಾರತೀಯ ಅಂಚೆ ಕಚೇರಿಯ ಪ್ರಕಾರ, ಪಾಲಕರು ಹೆಣ್ಣು ಮಗುವಿನ ಹೆಸರಿನಲ್ಲಿ ಕನಿಷ್ಠ 250 ರೂ ಮತ್ತು ಗರಿಷ್ಠ 1,50,000 ವರೆಗೆ  ಠೇವಣಿ  ಮಾಡಬಹುದು. 

3. ಸಖಿ ನಿವಾಸ : 
ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷಿತ ಮತ್ತು ಅನುಕೂಲಕರವಾದ ವಸತಿ ಸೌಕರ್ಯವನ್ನು ಒದಗಿಸುವ ಸಲುವಾಗಿ, ಸಖಿ ನಿವಾಸ್ ಎಂಬ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಯು ಹೊಸ ಹಾಸ್ಟೆಲ್ ಕಟ್ಟಡಗಳ ನಿರ್ಮಾಣ, ಅಸ್ತಿತ್ವದಲ್ಲಿರುವ ಹಾಸ್ಟೆಲ್ ಕಟ್ಟಡಗಳ ವಿಸ್ತರಣೆ ಮತ್ತು ಬಾಡಿಗೆ ಆವರಣದಲ್ಲಿ ಹಾಸ್ಟೆಲ್ ಕಟ್ಟಡಗಳ ಯೋಜನೆಗಳಿಗೆ ಸಹಾಯ ಮಾಡುತ್ತಿದೆ. ಈ ಯೋಜನೆಯಡಿಯಲ್ಲಿ ಸಹಾಯ ಮಾಡಲಾಗುತ್ತಿರುವ ಮಹಿಳಾ ಹಾಸ್ಟೆಲ್ ಜಾತಿ, ಧರ್ಮ, ವೈವಾಹಿಕ ಸ್ಥಿತಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಯಾವುದೇ ಭೇದವಿಲ್ಲದೆ ಎಲ್ಲಾ ಉದ್ಯೋಗಸ್ಥ ಮಹಿಳೆಯರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು.

4. ಮಹಿಳಾ ಶಕ್ತಿ ಕೇಂದ್ರ ಯೋಜನೆ : 
ಕೌಶಲ್ಯಾಭಿವೃದ್ಧಿ, ಉದ್ಯೋಗ, ಡಿಜಿಟಲ್ ಸಾಕ್ಷರತೆ, ಆರೋಗ್ಯ ಮತ್ತು ಪೋಷಣೆಯ ಅವಕಾಶಗಳೊಂದಿಗೆ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸಲು ಈ ಯೋಜನೆ ಜಾರಿಗೆ ತರಲಾಗಿದೆ. MSK ಮಹಿಳಾ ಕೇಂದ್ರಿತ ಯೋಜನೆಗಳು ಮತ್ತು ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸ್ಥಳೀಯ ಆಡಳಿತ, ರಾಜ್ಯ ಸರ್ಕಾರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯು ಶಿಕ್ಷಣ, ಆರೋಗ್ಯ ರಕ್ಷಣೆ, ಕೆಲಸದ ಪ್ರಗತಿ ಮತ್ತು ರಾಜಕೀಯ ಮತ್ತು ಆರ್ಥಿಕ ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಾತಿನಿಧ್ಯದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

5. ಮಹಿಳಾ ಸಹಾಯವಾಣಿ ಯೋಜನೆ :
ಈ ಕಾರ್ಯಕ್ರಮವು ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ 24 ಗಂಟೆಗಳ ತುರ್ತು ಸಹಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ. ದೇಶದಾದ್ಯಂತ ಮಹಿಳೆಯರಿಗೆ ತಕ್ಷಣದ ಸಹಾಯವನ್ನು ಒದಗಿಸುವ ಏಕೈಕ ಟೋಲ್-ಫ್ರೀ ಸಂಖ್ಯೆ (181) ಮೂಲಕ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಮಹಿಳಾ ಸಹಾಯವಾಣಿ ಸಂಖ್ಯೆಗಳನ್ನು ಲಭ್ಯಗೊಳಿಸಲಾಗಿದೆ.

Source : https://zeenews.india.com/kannada/business/central-govt-has-schemes-for-women-empowermnet-150167

Leave a Reply

Your email address will not be published. Required fields are marked *