ನವ ದೆಹಲಿ : ಪ್ರಸಿದ್ಧ ಮಾಜಿ ಓಟದ ರಾಣಿ ಪಿಟಿ ಉಷಾ ಅವರು ಇಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಡೆ, ಖ್ಯಾತ ಕ್ರೀಡಾಪಟು ಪಿ ಟಿ ಉಷಾ, ಖ್ಯಾತ ಸಂಗೀತ ಸಂಯೋಜಕ ಇಳೆಯರಾಜ್ ಹಾಗು ಖ್ಯಾತ ಚಿತ್ರ ಸಾಹಿತಿ ಬಾಹುಬಲಿ ಸಿನಿಮಾದ ಕಥೆಗಾರ ಕೆ ವಿ ವಿಜಯೇಂದ್ರ ಪ್ರಸಾದ್ ಅವರನ್ನು ಸರ್ಕಾರವು ಸಂಸತ್ತಿನ ಮೇಲ್ಮನೆಗೆ ನಾಮನಿರ್ದೇಶನ ಮಾಡಿತ್ತು.
ಇದೀಗ ಉಷಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೇರಳದ ಕೋಝೀ ಕೋಡ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ, ಉಷಾ ಭಾರತದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ, ಅಂತರಾಷ್ಟ್ರೀಯ ಮಟ್ಟದ ನೂರಕ್ಕೂ ಹೆಚ್ಚಿನ ಪದಕಗಳಿಗೆ ಇವರು ಭಾಜನರಾಗಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಅನೇಕ ರಾಷ್ಟ್ರೀಯ ಮತ್ತು ಏಷ್ಯನ್ ದಾಖಲೆಗಳನ್ನು ಸ್ಥಾಪಿಸಿದ್ದಾರೆ ಮತ್ತು ಉಷಾ ರೈಲ್ವೆಯಲ್ಲಿ ಅಧಿಕಾರಿಯಾಗಿದ್ದಾರೆ. ಉಷಾ ಪದ್ಮಶ್ರೀ, ಅರ್ಜುನ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿ ಗಳಿಸಿದ್ದಾರೆ.
ಪಿ ಟಿ ಉಷಾ ಅವರು 1986ರಲ್ಲಿ ನಡೆದ 10ನೇ ಏಷಿಯನ್ ಗೇಮ್ಸ್ ಟ್ರ್ಯಾಕ್ ಅಂಡ್ ಫೀಲ್ಸ್ ಸ್ಪರ್ಧೆಗಳಲ್ಲಿ 4 ಚಿನ್ನ ಮತ್ತು 1 ರಜತ ಪದಕಗಳನ್ನು ಪಡೆದರು. ಜಕಾರ್ತದಲ್ಲಿ 1985ರಲ್ಲಿ ನಡೆದ ಆರನೇ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಚಾಂಪಿಯನ್ಶಿಪ್ ನಲ್ಲಿ 5 ಚಿನ್ನದ ಪದಕ ಗಳಿಸಿದರು. ಅವರು ಅದೇ ಸ್ಪರ್ಧೆಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಏಕಾಂಗಿಯಾಗಿ 6 ಪದಕ ಗೆದ್ದ ಏಕೈಕ ಕ್ರೀಡಾಣು ಎನಿಸಿದ್ದಾರೆ.
ರಾಜ್ಯಸಭಾ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಉಷಾ ಅವರಿಗೆ ಶುಭ ಹಾರೈಸಿದ್ದಾರೆ.