ಹೊಸದಲ್ಲಿ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಮುಂಬರುವ ಏಷ್ಯಾ ಕಪ್ ಹಣಾಹಣಿಗೆ ಸಂಬಂಧಪಟ್ಟಂತೆ ಈಗಾಗಲೇ ಸಾಕಷ್ಟು ಪರ- ವಿರೋಧ ಚರ್ಚೆಗಳು ಆರಂಭವಾಗಿದ್ದು, ಭಾರತದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಸೂರ್ಯಕುಮಾರ್ ಯಾದವ್ ಈ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಲಿದ್ದಾರೆ ಎಂದು ಪಾಕಿಸ್ತಾನದ ವಿಶ್ವವಿಖ್ಯಾತ ವೇಗದ ಬೌಲರ್ ವಾಸಿಂ ಅಕ್ರಂ ಭವಿಷ್ಯ ನುಡಿದಿದ್ದಾರೆ.
2022ರ ಸಾಲಿನ ಏಷ್ಯಾ ಕಪ್( ಟಿ 20 ಮಾದರಿ) ಇದೇ ಆಗಸ್ಟ್ 27ರಿಂದ ಸೆಪ್ಟೆಂಬರ್ 11 ರವರೆಗೆ ಯುಎಇನಲ್ಲಿ ನಡೆಯಲಿದೆ. ಆಗಸ್ಟ್ 28ರಂದು ಭಾರತ- ಪಾಕಿಸ್ತಾನ ಮುಖಾಮುಖಿ ನಿಗದಿಯಾಗಿದೆ.
ಇದುವರೆಗೆ 23 ಅಂತಾರಾಷ್ಟ್ರೀಯ ಟಿ 20 ಪಂದ್ಯ ಆಡಿರುವ ಸೂರ್ಯಕುಮಾರ್ 37.33ರ ಸರಾಸರಿಯಲ್ಲಿ 672 ರನ್ ಗಳನ್ನು ಬಾರಿಸಿದ್ದಾರೆ .ಇದರಲ್ಲಿ ಒಂದು ಶತಕ (ಇಂಗ್ಲೆಂಡ್ ವಿರುದ್ಧ ವೋವೆಲ್ ನಲ್ಲಿ 117 ರನ್) ಹಾಗೂ ಐದು ಅರ್ಧ ಶತಕಗಳು ಅಡಕವಾಗಿವೆ.
“ರೋಹಿತ್ ಶರ್ಮ, ಕೆ .ಎಲ್ .ರಾಹುಲ್ ,ವಿರಾಟ್ ಕೊಹ್ಲಿಯಂತಹ ಘಟಾನುಘಟಿಗಳು ಭಾರತ ತಂಡದಲ್ಲಿದ್ದರೂ, ಸೂರ್ಯ ಕುಮಾರ್ ಯಾದವ್ ಟಿ 20 ಮಾದರಿಯಲ್ಲಿ ಅತ್ಯಂತ ಅಪಾಯಕಾರಿ ಆಟಗಾರ ಎಂಬುದು ನನ್ನ ಅಭಿಪ್ರಾಯ. ಯಾದವ್ ವಿಶಿಷ್ಟ ಆಟಗಾರ .ಆತ ಕೊಲ್ಕತ್ತಾ ನೈಟ್ ರೈಡರ್ಸ್ ಗೆ (ಐಪಿಎಲ್ ತಂಡ) ಸೇರ್ಪಡೆಗೊಂಡ ಮೊದಲ ವರ್ಷವೇ ನಾನು ನೋಡಿದ್ದೇನೆ.” ಎಂದು ಅಕ್ರಮ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
“ಪಾಕಿಸ್ತಾನದ ಸ್ಪೋಟಕ ಬ್ಯಾಟರ್ ಬಾಬರ್ ಉತ್ತಮ ಆಟಗಾರ ಎಂಬುದು ನಿಜವಾದರೂ, ಆತನನ್ನು ಈಗಲೇ ವಿರಾಟ್ ಕೊಹ್ಲಿ ಗೆ ಹೋಲಿಕೆ ಮಾಡುವುದು ಸಮಂಜಸವಲ್ಲ. ವಿರಾಟ್ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ ಮನ್ ಗಳಲ್ಲೊಬ್ಬರು.” ಎಂದು ವಾಸಿಂ ಇದೇ ವೇಳೆ ವಿಶ್ಲೇಷಿಸಿದರು.