
ಮಾಂಗಫ್: ಕುವೈತ್‌ನ ಮಾಂಗಫ್ ನಗರದಲ್ಲಿ ಕಾರ್ಮಿಕರ ವಸತಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಕನಿಷ್ಠ 41 ಮಂದಿ ಸಜೀವ ದಹನಗೊಂಡಿದ್ದಾರೆ. ಸ್ಥಳೀಯ ಕಾಲಮಾನ ಮುಂಜಾನೆ 6 ಗಂಟೆಗೆ ಈ ದುರಂತ ಸಂಭವಿಸಿದೆ. ಬೆಂಕಿಯಿಂದ ಗಾಯಗೊಂಡ ಸುಮಾರು 43 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ 4 ಮಂದಿ ಮೃತಪಟ್ಟಿದ್ದಾರೆ ಎಂದು ಕುವೈತ್ ಆರೋಗ್ಯ ಸಚಿವಾಲಯ ತಿಳಿಸಿದೆ. ಘಟನೆಯಲ್ಲಿ ಭಾರತ ಮೂಲದ 30ಕ್ಕೂ ಅಧಿಕ ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
“ಅಗ್ನಿ ಅವಘಡ ಸಂಭವಿಸಿದ ಕಟ್ಟಡವು ಮನೆ ಕೆಲಸದವರ ವಸತಿಗೆ ಬಳಕೆಯಾಗುತ್ತಿತ್ತು. ಅಲ್ಲಿ ಅಪಾರ ಸಂಖ್ಯೆಯ ಕೆಲಸಗಾರರು ಇದ್ದರು” ಎಂದು ಹಿರಿಯ ಪೊಲೀಸ್ ಕಮಾಂಡರ್ ತಿಳಿಸಿದ್ದಾರೆ. “ಹತ್ತಾರು ಮಂದಿಯನ್ನು ರಕ್ಷಿಸಲಾಗಿದೆ. ಆದರೆ ದುರದೃಷ್ಟವಶಾತ್, ಬೆಂಕಿಯಿಂದ ಆವರಿಸಿದ ದಟ್ಟ ಹೊಗೆಯನ್ನು ಸೇವಿಸಿದ ಪರಿಣಾಮ ಅನೇಕರು ಮೃತಪಟ್ಟಿದ್ದಾರೆ” ಎಂದು ಅವರು ಹೇಳಿದ್ದಾರೆ. ಅವಘಡಕ್ಕೆ ತುತ್ತಾದ ಕಟ್ಟಡದಲ್ಲಿ ಸುಮಾರು 160 ಮಂದಿ ವಾಸವಿದ್ದರು. ಅವರಲ್ಲಿ ಬಹುಪಾಲು ಮಂದಿ ಕಾರ್ಮಿಕರು ಭಾರತದವರು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಘಟನೆಯಲ್ಲಿ 30ಕ್ಕೂ ಅಧಿಕ ಭಾರತೀಯರು ಗಾಯಗೊಂಡಿದ್ದಾರೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಆದರೆ ಮೃತಪಟ್ಟವರಲ್ಲಿ ಭಾರತೀಯರು ಇದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಕುವೈತ್‌ನಲ್ಲಿರುವ ರಾಯಭಾರಿ ಆದರ್ಶ್ ಸ್ವೈಕಾ ಅವರು ಅಲ್ ಅದಾನ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಭಾರತೀಯ ಗಾಯಾಳುಗಳನ್ನು ಭೇಟಿ ಮಾಡಿದರು. ರಾಯಭಾರ ಕಚೇರಿಯಿಂದ ಸಂಪೂರ್ಣ ನೆರವು ಒದಗಿಸುವ ಭರವಸೆ ನೀಡಿದರು. ಅವರೆಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿರುವುದಾಗಿ ಕಚೇರಿ ಹೇಳಿದೆ.