ಚಿತ್ರದುರ್ಗ ಸೆ. 25
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಈ ಸರ್ಕಾರದಲ್ಲಿ ಈಡಿಗ ಸಮಾಜವನ್ನು ನಿರ್ಲಕ್ಷ್ಯ ಮಾಡಲಾಗಿದೆ. ನಮ್ಮ ಸಮುದಾಯದ ವಿವಿಧ ಬೇಡಿಕೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಇದರಿಂದ 2026ರ ಜ16ರಿಂದ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರದ ಗುರುಪೀಠದಿಂದ ಬೆಂಗಳೂರವರೆಗೆ ಪಾದಯಾತ್ರೆಯನ್ನು (ಒಟ್ಟು 46 ದಿನಗಳು) ಹಮ್ಮಿಕೊಳ್ಳ ಲಾಗಿದೆ ಎಂದು ಈಡಿಗ ಮಹಾ ಮಂಡಳಿ, ನಾರಾಯಣ ಗುರು ಶಕ್ತಿ ಪೀಠದ ರಾಷ್ಟ್ರೀಯ ಅಧ್ಯಕ್ಷರು, ಪೀಠಾಧಿಪತಿಗಳಾದ ಡಾ.ಶ್ರೀ ಪ್ರಣವನಂದ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ಸರ್ಕಾರ ಸೇಂದಿ/ಸಾರಾಯಿ ನಿಷೇಧ ಮಾಡಿತು.. ಆದರೆ ಅವರಿಗೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಮಾಡಲಿಲ್ಲ.ಸೇಂದಿವನ ಇದ್ದಂತಹ ಜಾಗವನ್ನು ಸಹ ಗೋಮಾಳವನ್ನಾಗಿ ಮಾರ್ಪಡಿಸಿ ಜಾನುವಾರುಗಳು ಮೇಯಲು ಬಿಡಲಾಯಿತು. ಇದರಿಂದ ಈಡಿಗ ಸಮುದಾಯ ಕೆಲಸವಿಲ್ಲದೆ ಅಲೆಮಾರಿಗಳಾಗಿ ಜೀವನ ಸಾಗಿಸಬೇಕಾಯಿತು.ಸರ್ಕಾರ ನಮ್ಮ ಸಮುದಾಯಕ್ಕೆ ಪರ್ಯಾಯವಾಗಿ ಏನಾದರೂ ಉದ್ಯೋಗವನ್ನು ನೀಡಬೇಕು, ಈಗ ನಮ್ಮವರು ಕೆಲಸ ಇಲ್ಲದೆ ಬೇರೆ ಬೇರೆ ಕೆಲಸವನ್ನು ಮಾಡುತ್ತಾ ಜಿವನವನ್ನು ಸಾಗಿಸುತ್ತಿದ್ದಾರೆ ಎಂದರು.
ಬೆಂಗಳೂರಿನ ವಿಧಾನಸೌಧ ಮುಂದೆ ಶ್ರೀ ನಾರಾಯಣ ಗುರೂಜಿಯವರ ಪುತ್ತಳಿಯನ್ನು ನಿರ್ಮಾಣ ಮಾಡಬೇಕು.ಸರಕಾರ ಸ್ಥಾಪನೆ ಮಾಡಿರುವ ಈಡಿಗ ನಿಗಮಕ್ಕೆ 500 ಕೋಟಿ ರೂ ಗಳನ್ನು ನೀಡಬೇಕು… ಇದರಿಂದ ಈಡಿಗ ಸಮುದಾಯ ಅಭಿವೃದ್ಧಿಯಾಗಲು ಸಾಧ್ಯವಿದೆ.ಈಗಿನ ಸರ್ಕಾರದಲ್ಲಿ ಒಬ್ಬರಿಗೆ ಮಾತ್ರ ಈಡಿಗ ಸಮುದಾಯದವರನ್ನು ಸಚಿವರನ್ನಾಗಿ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಎರಡು ಸಚಿವರು ಇದ್ದರು.. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಮ್ಮ ಸಮುದಾಯದ ಇನ್ನೊಬ್ಬರಿಗೆ ಸಚಿವ ಸ್ಥಾನ ನೀಡಬೇಕು ಸೇರಿದಂತೆ 16 ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಆಗ್ರಹಿಸಿ ಇದಕ್ಕಾಗಿ.ಜ.16 ರಿಂದ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರದ ಗುರುಪೀಠದಿಂದ ಬೆಂಗಳೂರವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ನಮ್ಮ ಸಮುದಾಯದವರು ಈಡಿಗ, ನಾಮಧಾರಿ, ಬಿಲ್ಲವ, ದಿವರು ಎಂದು ಆಯಾ ಪ್ರದೇಶಕ್ಕೆ ಅನುಗುಣವಾಗಿ ಬರೆಸುವ ಮೂಲಕ ಅಂತಿಮವಾಗಿ 10ನೇ ಕಲಂನಲ್ಲಿ ಈಡಿಗ ಎಂದು ಬರೆಸಬೇಕು. ಕಳೆದ ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ನಮ್ಮ ಸಮುದಾಯದ ಜನಸಂಖ್ಯೆಯನ್ನು ಬಹಳ ಕಡಿಮೆ ತೋರಿಸಲಾಗಿದೆ.. ರಾಜ್ಯದಲ್ಲಿ ನಮ್ಮ ಸಮುದಾಯ 35 ರಿಂದ 40 ಲಕ್ಷ ಇದೆ.ಈ ಜಾತಿ ಗಣತಿಯಲ್ಲಿ ಎಲ್ಲರೂ ತಪ್ಪದೇ ಭಾಗವಹಿಸಿ ನಮ್ಮ ಸಮುದಾಯಗಳ ಹೆಸರನ್ನು ನಮೂದಿಸಬೇಕು ಎಂದು ಶ್ರೀಗಳು ಸಮುದಾಯದವರಲ್ಲಿ ಮನವಿ ಮಾಡಿದರು.
ಸೆ.27 ರಂದು ಹಿರಿಯೂರು ತಾಲ್ಲೂಕು ಪಿಲಾಜನಹಳ್ಳಿ ಗ್ರಾಮದಲ್ಲಿ ಶ್ರೀ ನಾರಾಯಣ ಗುರೂಜಿಗಳ 171ನೇ ಜಯಂತಿ ಹಾಗೂ ಈಡಿಗ ಸಮುದಾಯದ ಚಿಂತನ ಮಂಥನ, ಅಧ್ಯಕ್ಷರು, ಪದಾಧಿಕಾರಿಗಳ ಘೋಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಮಾಜಿ ರಾಜ್ಯ ಸಭಾ ಸದಸ್ಯರು ವಿಧಾನ ಪರಿಷತ್ ಸದಸ್ಯರಾದ ಬಿ.ಕೆಹರಿಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್, ಮಾಜಿ ಕೆಪಿಸಿಸಿನ ಸದಸ್ಯರಾದ ಲಕ್ಷ್ಮೀ ನರಸಿಂಹಯ್ಯ, ಬಿಜೆಪಿ ಮುಖಂಡರಾದ ರಘುಚಂದನ್ ಸೇರಿದಂತೆ ಸಮುದಾಯ ಮುಖಂಡರು ಭಾಗವಹಿಸಲಿದ್ದಾರೆ.
ಗೋಷ್ಟಿಯಲ್ಲಿ ಈಡಿಗ ಮಹಾ ಮಂಡಳಿ ರಾಜ್ಯ ಅಧ್ಯಕ್ಷರಾದ ಸಿ.ತಿಪ್ಪೇಸ್ವಾಮಿ, ರಮೇಶ್ ಲೋಕೇಶ್, ರೋಹನ್, ಪ್ರವೀಣ ಕುಮಾರ್, ಕುಮಾರ್, ಸೇರಿದಂತೆ ಇತರರು ಭಾಗವಹಿಸಿದ್ದರು.
Views: 169