ಗೌತಮ್ ಅದಾನಿಗೆ ಸೇರಿದ 5 ಸ್ವಿಸ್ ಬ್ಯಾಂಕ್ ಖಾತೆಗಳು ಫ್ರೀಜ್, 310 ಮಿಲಿಯನ್ ಡಾಲರ್ ಸ್ಥಗಿತ: Hindenburg.

ನವದೆಹಲಿ: ಭಾರತದ ಖ್ಯಾತ ಉದ್ಯಮಿ ಗೌತಮ್ ಅದಾನಿ ಕುರಿತಂತೆ Hindenburg ಮತ್ತೊಂದು ವರದಿ ಬಿಡುಗಡೆ ಮಾಡಿದ್ದು, ಇದೀಗ Gautam Adaniಗೆ ಸೇರಿದ 5 ಸ್ವಿಸ್ ಬ್ಯಾಂಕ್ ಖಾತೆಗಳನ್ನು ಮತ್ತು ಅದರಲ್ಲಿದ್ದ ಸುಮಾರು 310 ಮಿಲಿಯನ್ ಡಾಲರ್ ಹಣವನ್ನು ಫ್ರೀಜ್ ಮಾಡಲಾಗಿದೆ ಎಂದು ಹೇಳಿದೆ.

ಸ್ವಿಸ್ ಬ್ಯಾಂಕ್‌ಗಳಲ್ಲಿನ ಅದಾನಿ ಗ್ರೂಪ್ ಕಂಪನಿಗಳ ಹಲವಾರು ಖಾತೆಗಳಲ್ಲಿ ಠೇವಣಿ ಮಾಡಲಾದ ಸುಮಾರು 310 ಮಿಲಿಯನ್ ಡಾಲರ್ ಹಣವನ್ನು ಸ್ವಿಸ್ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಸ್ವಿಸ್ ತನಿಖಾ ಸುದ್ದಿ ತಾಣ ಗೋಥಮ್ ಸಿಟಿಯನ್ನು ಉಲ್ಲೇಖಿಸಿ ಹಿಂಡನ್ ಬರ್ಗ್ ಈ ವರದಿ ಬಿಡುಗಡೆ ಮಾಡಿದೆ ಎನ್ನಲಾಗಿದೆ.

ವರದಿಯ ಪ್ರಕಾರ, ಅದಾನಿ ಗ್ರೂಪ್‌ಗೆ ಲಿಂಕ್ ಮಾಡಲಾಗಿದೆ ಎಂದು ಹೇಳಲಾದ ಕೆಲವು ಖಾತೆಗಳಲ್ಲಿ ಹಣ ವರ್ಗಾವಣೆಯ ತನಿಖೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅದಾನಿ ಗ್ರೂಪ್ ಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣವನ್ನು ಸ್ವಿಟ್ಜರ್ಲೆಂಡ್‌ನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಹೇಳಿದೆ. ಈ ತನಿಖೆಯ ಭಾಗವಾಗಿ ಅದಾನಿ ಸಮೂಹದ 6 ಸ್ವಿಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಖಾತೆಯಲ್ಲಿ ಸುಮಾರು 310 ಮಿಲಿಯನ್ ಡಾಲರ್ ಇತ್ತು. ಇದೀಗ ಈ ಹಣವನ್ನು ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ಸ್ವಿಸ್ ಕ್ರಿಮಿನಲ್ ಕೋರ್ಟ್‌ನಲ್ಲಿ ನಡೆದ ವಿಚಾರಣೆಯನ್ನು ಆಧರಿಸಿ ಅದಾನಿ ಗ್ರೂಪ್‌ಗೆ ಸೇರಿದ ಓರ್ವ ವ್ಯಕ್ತಿಯು ತನ್ನ ಗುರುತನ್ನು ಬಹಿರಂಗಪಡಿಸದೆ ಮಾರಿಷಸ್ ಮತ್ತು ಬರ್ಮುಡಾ ಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿದೆ. ಸ್ವಿಸ್ ಮೀಡಿಯಾ ಔಟ್ಲೆಟ್ ಇತ್ತೀಚೆಗೆ ಈ ವರದಿಯನ್ನು ಬಿಡುಗಡೆ ಮಾಡಿತ್ತು. ಈ ವರದಿಯ ಪ್ರಕಾರ, ಹಿಂಡೆನ್‌ಬರ್ಗ್‌ನ ಆರೋಪಗಳಿಗೆ ಮುಂಚೆಯೇ, ಜಿನೀವಾ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯು ಅದಾನಿ ಗ್ರೂಪ್‌ನ ತಪ್ಪುಗಳ ಬಗ್ಗೆ ತನಿಖೆ ನಡೆಸುತ್ತಿತ್ತು ಎಂದು ಹೇಳಲಾಗಿದೆ.

ಆರೋಪಗಳ ಅಲ್ಲಗಳೆದ ಅದಾನಿ ಸಮೂಹ

ಇನ್ನು ಅದಾನಿ ಗ್ರೂಪ್ ಹಿಂಡೆನ್‌ಬರ್ಗ್‌ನ ಹೊಸ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಅಲ್ಲದೆ ಈ ಎಲ್ಲ ಆರೋಪಗಳು ಸುಳ್ಳು ಎಂದು ವಾದಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅದಾನಿ ಗ್ರೂಪ್, ‘ಹಿಂಡೆನ್‌ಬರ್ಗ್ ತಮ್ಮ ಸಂಸ್ಥೆಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಕಂಪನಿಯ ಮೌಲ್ಯ ಮಾರುಕಟ್ಟೆಯಲ್ಲಿ ಕುಸಿಯುವಂತೆ ಈ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದೆ.

ಅಲ್ಲದೆ ಮಾಧ್ಯಮಗಳ ಕುರಿತಾಗಿಯೂ ಮನವಿ ಮಾಡಿಕೊಂಡಿರುವ ಅದಾನಿ ಸಮೂಹ. ‘ನೀವು ಸುದ್ದಿಯನ್ನು ಪ್ರಕಟಿಸಿದರೆ ನಮ್ಮ ಹೇಳಿಕೆಗಳನ್ನು ಸೇರಿಸಬೇಕು. ಕಂಪನಿಯು ಸ್ವಿಸ್ ನ್ಯಾಯಾಲಯದ ಯಾವುದೇ ಪ್ರಕ್ರಿಯೆಗಳಿಗೆ ಸಂಬಂಧಿಸಿಲ್ಲ. ಇದಲ್ಲದೆ, ಕಂಪನಿಯ ಯಾವುದೇ ಸ್ವಿಸ್ ಖಾತೆಗಳನ್ನು ಫ್ರೀಜ್ ಮಾಡಿಲ್ಲ. ಕಂಪನಿಯ ಸಾಗರೋತ್ತರ ವಹಿವಾಟು ರಚನೆಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಕಂಪನಿಯು ಯಾವುದೇ ನಿಯಮಗಳನ್ನು ಉಲ್ಲಂಘಿಸುತ್ತಿಲ್ಲ. ಇದಲ್ಲದೇ ಕಂಪನಿಯ ಮಾರುಕಟ್ಟೆ ಮೌಲ್ಯವನ್ನು ತಗ್ಗಿಸಿ ಕಂಪನಿಗೆ ನಷ್ಟ ಉಂಟು ಮಾಡಲು ಮಾತ್ರ ಈ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

Source : https://www.kannadaprabha.com/nation/2024/Sep/13/hindenburg-swiss-authorities-freeze-310-million-across-five-bank-accounts-linked-to-gautam-adani-says-report

 

Leave a Reply

Your email address will not be published. Required fields are marked *