ರಾಜ್ಯ ಸರ್ಕಾರ ಲಾಲ್‌ಬಾಗ್ ಸಸ್ಯೋದ್ಯಾನದ ಸಸ್ಯ ಸಂಗ್ರಹ ರಕ್ಷಣೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸಸ್ಯ ವೈವಿಧ್ಯತೆ ಸಂರಕ್ಷಿಸಲು ಮತ್ತು ಶಿಸ್ತು ಕಾಪಾಡಲು ಮರ ಹತ್ತುವುದು, ಹೂ ಕೀಳುವುದು, ಛಾಯಾಗ್ರಹಣ ಸೇರಿ 33 ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ 500 ರೂ. ದಂಡ ವಿಧಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಬೆಂಗಳೂರು, ನ. 22: ರಾಜ್ಯ ಸರ್ಕಾರ ಲಾಲ್‌ಬಾಗ್ ಸಸ್ಯೋದ್ಯಾನವನದ (Lal bagh Botanical Garden) ವ್ಯಾಪಕ ಸಸ್ಯ ಸಂಗ್ರಹವನ್ನು ರಕ್ಷಿಸಲು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ನಿಯಮದಡಿಯಲ್ಲಿ ದಿನನಿತ್ಯ ನಡೆಯುತ್ತಿದ್ದ ಹಲವಾರು ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದ್ದು, ನಿಷೇಧಿತ ಚಟುವಟಿಕೆಗಳಲ್ಲಿ ತೊಡಗುವವರಿಗೆ 500 ರೂ. ವರೆಗಿನ ದಂಡವೂ ಬೀಳಲಿದೆ. ಕಳೆದ ವಾರ ಬಿಡುಗಡೆಯಾದ ಅಧಿಸೂಚನೆಯಲ್ಲಿ ಲಾಲ್‌ಬಾಗ್‌ನ ಶ್ರೀಮಂತ ಸಸ್ಯ ವೈವಿಧ್ಯತೆಯನ್ನು ಸಂರಕ್ಷಿಸಲು ಮತ್ತು ಶಿಸ್ತು ಕಾಪಾಡಲು ಸರ್ಕಾರವು ಗುಂಪು ಯೋಗ, ಮರಗಳನ್ನು ಹತ್ತುವುದು, ಹೂವುಗಳನ್ನು ಕೀಳುವುದು ಸೇರಿ 33 ಚಟುವಟಿಕೆಗಳನ್ನು ನಿಷೇಧಿಸಿದ್ದು, ಉದ್ಯಾನವನದಲ್ಲಿ ಹೊಸ ನಿಯಮಗಳನ್ನೊಳಗೊಂಡ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತಿದೆ.
ಲಾಲ್‌ಬಾಗ್ ಯಾವೆಲ್ಲಾ ಚಟುವಟಿಕೆಗಳ ಮೇಲೆ ನಿಷೇಧ?
ಲಾಲ್‌ಬಾಗ್‌ನ ಆವರಣದೊಳಗೆ ಹೊರಗಿನ ಆಹಾರವನ್ನು ತರುವುದು ಅಥವಾ ಸೇವಿಸುವುದನ್ನು ನಿಷೇಧಿಸಲಾಗಿದೆ. ಫಿಟ್‌ನೆಸ್ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಾದ ವಾಕಥಾನ್‌ಗಳು, ಮ್ಯಾರಥಾನ್‌ಗಳು, ಸೈಕ್ಲಿಂಗ್ ಮತ್ತು ಸ್ಕೇಟಿಂಗ್‌ಗಳಿಗೆ ಅನುಮತಿಯಿರುವುದಿಲ್ಲ. ಅದರೊಂದಿಗೆ ಭಿಕ್ಷೆ ಬೇಡುವುದು, ಲಂಚ ಸಂಗ್ರಹಿಸುವುದು ಮತ್ತು ಭವಿಷ್ಯ ಹೇಳುವುದು ಇಂತಹ ಚಟುವಟಿಕೆಗಳನ್ನು ಬ್ಯಾನ್ ಮಾಡಲಾಗಿದೆ. ಉದ್ಯಾನದ ಒಳಗೆ ಸಾಕುಪ್ರಾಣಿಗಳಿಗೆ ಅನುಮತಿಯಿರುವುದಿಲ್ಲ. ಯೋಗ, ಸಭೆಗಳು, ಸಾಮಾಜಿಕ ಕಾರ್ಯಕ್ರಮಗಳು ಮತ್ತು ಪತ್ರಿಕಾಗೋಷ್ಠಿಗಳಂತಹ ಗುಂಪು ಚಟುವಟಿಕೆಗಳನ್ನು ಸಹ ನಿಷೇಧಿಸಲಾಗಿದ್ದು, ಹುಟ್ಟುಹಬ್ಬದ ಪಾರ್ಟಿಗಳು ಸೇರಿದಂತೆ ಹಲವು ಆಚರಣೆಗಳನ್ನು ನಿಷೇಧಿಸಲಾಗಿದೆ.
ಲಾಲ್‌ಬಾಗ್‌ನ ಸಸ್ಯ ಸಂಗ್ರಹವನ್ನು ರಕ್ಷಿಸಲು 33 ಚಟುವಟಿಕೆಗಳನ್ನು ಮರಗಳನ್ನು ಹತ್ತುವುದು, ಹೂವುಗಳನ್ನು ಕೀಳುವುದು ಅಥವಾ ಕೊಂಬೆಗಳೊಂದಿಗೆ ಆಟವಾಡುವುದನ್ನು ಲಾಲ್‌ಬಾಗ್‌ನ ಸಸ್ಯ ಸಂಗ್ರಹವನ್ನು ರಕ್ಷಿಸಲು ಉದ್ಯಾನದಲ್ಲಿರುವ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೆ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಯ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ರೀಲ್‌ಗಳ ಚಿತ್ರೀಕರಣ, ಮಾಡೆಲಿಂಗ್, ಮದುವೆಗಳು, ಬೇಬಿ ಶವರ್‌ಗಳು ಮತ್ತು ಇತರ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಮುಖ್ಯವಾಗಿ ಸಂದರ್ಭಗಳಲ್ಲಿ ಡ್ರೋನ್ ಛಾಯಾಗ್ರಹಣಕ್ಕೆ ಅವಕಾಶವಿರುವುದಿಲ್ಲ. ಉದ್ಯಾನದೊಳಗೆ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದ್ದು, ಸಂದರ್ಶಕರು ಧ್ವನಿ ವ್ಯವಸ್ಥೆಗಳು ಅಥವಾ ಸಂಗೀತ ವಾದ್ಯಗಳನ್ನು ಬಳಸುವಂತಿಲ್ಲ ಎಂದು ಹೇಳಲಾಗಿದೆ. ಜೊತೆಗೆ ಆವರಣದೊಳಗೆ ಮದ್ಯಪಾನ ಅಥವಾ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಲಾಲ್ಬಾಗ್ನಲ್ಲಿ ಯಾವುದಕ್ಕೆಲ್ಲಾ ಅನುಮತಿ ನೀಡಲಾಗಿದೆ?
ಲಾಲ್ಬಾಗ್ನಲ್ಲಿ ಬೆಳಿಗ್ಗೆ 5.30 ರಿಂದ 9 ರವರೆಗೆ ಮತ್ತು ಸಂಜೆ 4.30 ರಿಂದ 7 ರವರೆಗೆ ಮಾತ್ರ ವಾಕಿಂಗ್ ಮತ್ತು ಜಾಗಿಂಗ್‌ಗೆ ಅವಕಾಶವಿರುತ್ತದೆ. ತೋಟಗಾರಿಕೆ ಇಲಾಖೆಯಿಂದ ಪೂರ್ವಾನುಮತಿಯೊಂದಿಗೆ ಹೂವಿನ ಪ್ರದರ್ಶನಗಳು, ಸರ್ಕಾರಿ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಇಲಾಖೆಯ ಅನುಮತಿಯೊಂದಿಗೆ ಮತ್ತು ಕೆಲ ಷರತ್ತುಗಳೊಂದಿಗೆ ಹವ್ಯಾಸಿ ಪ್ರಕೃತಿ ಛಾಯಾಗ್ರಹಣ ಮತ್ತು ಆರೋಗ್ಯ ಶಿಬಿರಗಳಿಗೆ ಅನುಮತಿ ನೀಡಲಾಗುತ್ತದೆ.
Views: 14