IND vs AUS: ತೆಗಳಿದವರಿಂದಲೇ ಹೊಗಳಿಕೆ; ರಾಹುಲ್ ಆಟಕ್ಕೆ ವೆಂಕಟೇಶ್ ಪ್ರಸಾದ್ ಹೇಳಿದ್ದೇನು ಗೊತ್ತಾ?

ind vs aus 1st odi Venkatesh Prasad Praises KL Rahul After Fifty vs Australia

12 ಆಗಸ್ಟ್ 2021, ಲಾರ್ಡ್ಸ್ ಟೆಸ್ಟ್‌ನ ದಿನ 1. 28 ಸೆಪ್ಟೆಂಬರ್ 2022, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ. 17 ಮಾರ್ಚ್ 2023, ಭಾರತ-ಆಸ್ಟ್ರೇಲಿಯಾ (India vs Australia) ನಡುವಿನ ಮೊದಲ ಏಕದಿನ ಪಂದ್ಯ. ಮೂರು ವರ್ಷಗಳು, ಮೂರು ವಿಭಿನ್ನ ತಂಡಗಳ ವಿರುದ್ಧ ಟೀಂ ಇಂಡಿಯಾ (Team India) ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ. ಈ ಎಲ್ಲಾ ಮೂರು ಪಂದ್ಯಗಳಲ್ಲಿ ಸೋಲಿನ ಸುಳಿಯಲ್ಲಿದ್ದ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದು, ಅದು ನಮ್ಮ ಕನ್ನಡಿಗ ಕೆಎಲ್ ರಾಹುಲ್ (KL Rahul). ಇದೀಗ ಆಸೀಸ್ ವಿರುದ್ಧವೂ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ರಾಹುಲ್, ಭಾರತಕ್ಕೆ ಮೊದಲ ಜಯ ತಂದುಕೊಟ್ಟಿದ್ದಾರೆ. ಶುಕ್ರವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೆಎಲ್ ರಾಹುಲ್ ಇಂತಹದೊಂದು ಇನ್ನಿಂಗ್ಸ್ ಆಡಿದ್ದು, ಅವರ ಸಾಮರ್ಥ್ಯವನ್ನು ಪ್ರಶ್ನಿಸಿದವರೆಲ್ಲರ ಬಾಯಿ ಮುಚ್ಚಿಸುವಂತಿತ್ತು. ಕೆಲವು ದಿನಗಳ ಹಿಂದೆ, ಆಸ್ಟ್ರೇಲಿಯ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯ (Border Gavaskar Trophy 2023) ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿತ್ತು. ಆದರೆ ಈ ಎರಡೂ ಪಂದ್ಯಗಳಲ್ಲಿ ರಾಹುಲ್ ಅಟ್ಟರ್ ಫ್ಲಾಪ್ ಆಗಿದ್ದರು.

ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ರಾಹುಲ್​ಗೆ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಬೆಂಬಲವಾಗಿ ನಿಂತರೂ, ಅವರನ್ನು ಮೂರು ಮತ್ತು ನಾಲ್ಕನೇ ಟೆಸ್ಟ್‌ಗಳಿಂದ ಹೊರಹಾಕಲಾಯಿತು. ಮೊದಲಿಗೆ ರಾಹುಲ್‌ರನ್ನು ಟೆಸ್ಟ್‌ ತಂಡದ ಉಪನಾಯಕ ಸ್ಥಾನದಿಂದ ವಜಾಗೊಳಿಸಲಾಗಿತ್ತು. ನಂತರ ಅವರನ್ನು ಮುಂದಿನ ಎರಡು ಟೆಸ್ಟ್‌ಗಳಿಂದ ಕೈಬಿಡಲಾಯಿತು. ಇಡೀ ಸರಣಿಯಲ್ಲಿ ಸತತವಾಗಿ ಹಿನ್ನಡೆ ಅನುಭವಿಸಿದ್ದ ರಾಹುಲ್‌ಗೆ ಅಹಮದಾಬಾದ್‌ನ ಬ್ಯಾಟಿಂಗ್‌ ಸಹಾಯಕವಾದ ಪಿಚ್‌ನಲ್ಲಿ ಆಡುವ ಮೂಲಕ ರನ್ ಗಳಿಸುವ ಅವಕಾಶವೂ ಸಿಗಲಿಲ್ಲ.

IND vs AUS: ಟಾಸ್ ಗೆದ್ದ ಪಾಂಡ್ಯ, ರಾಹುಲ್​ಗೆ ಅವಕಾಶ; ಹೀಗಿದೆ ಭಾರತ ತಂಡ

ವಾಂಖೆಡೆಯಲ್ಲಿ ರಾಹುಲ್ ಕದನ

ಇದಾದ ಬಳಿಕ ರಾಹುಲ್ ಮತ್ತೆ ತಂಡಕ್ಕೆ ವಾಪಸಾಗಿ ಬ್ಯಾಟಿಂಗ್ ಅವಕಾಶ ಪಡೆದಾಗ ಯಾರೊಬ್ಬರಿಗೂ ಗೆಲುವಿನ ಭರವಸೆ ಇಲ್ಲದಂತಾಗಿತ್ತು ತಂಡದ ಸ್ಥಿತಿ. ಟೀಂ ಇಂಡಿಯಾದ ಮುಂದೆ ಕೇವಲ 189 ರನ್‌ಗಳ ಗುರಿ ಇತ್ತಾದರೂ, ಆಸೀಸ್ ಬೌಲರ್ ಮಿಚೆಲ್ ಸ್ಟಾರ್ಕ್ ದಾಳಿಗೆ ನಲುಗಿದ ಭಾರತದ ಟಾಪ್ ಆರ್ಡರ್ ಸೈಲೆಂಟ್ ಆಗಿ ಪೆವಿಲಿಯನ್ ಸೇರಿಕೊಂಡಿತ್ತು. ಕೇವಲ 39 ರನ್‌ಗಳಿಗೆ 4 ವಿಕೆಟ್‌ಗಳು ಪತನಗೊಂಡಿದ್ದು, 5ನೇ ವಿಕೆಟ್‌ ಕೂಡ 83ರನ್​ಗಳಿಗೆ ಉರುಳಿತು. ಆದರೆ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿದ ರಾಹುಲ್ ಸ್ಮರಣೀಯ ಇನ್ನಿಂಗ್ಸ್ ಆಡಿದರು.

ರಾಹುಲ್, ರವೀಂದ್ರ ಜಡೇಜಾ ಜೊತೆಗೂಡಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ನಿಧಾನವಾಗಿ ತಂಡದ ಸ್ಕೋರ್ ಅನ್ನು ಮುಂದಕ್ಕೆ ತಳ್ಳಿದರು. ರಾಹುಲ್ 73 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಜಡೇಜಾ ಅವರೊಂದಿಗೆ ಆರನೇ ವಿಕೆಟ್‌ಗೆ ಅಜೇಯ 108 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.

ರಾಹುಲ್ ಆಟ ಮೆಚ್ಚಿದ ವೆಂಕಟೇಶ್

ಟೆಸ್ಟ್ ಸರಣಿಯಲ್ಲಿ ರಾಹುಲ್ ವೈಫಲ್ಯವನ್ನು ನಿರಂತರವಾಗಿ ಟೀಕಿಸುತ್ತಿದ್ದ ವೆಂಕಟೇಶ್ ಪ್ರಸಾದ್ ಕೂಡ ರಾಹುಲ್ ಅವರನ್ನು ಹೊಗಳಿದ್ದು, ರಾಹುಲ್ ಆಟದ ಶ್ರೇಷ್ಠತೆಯನ್ನು ಜಾಗಜ್ಜಾಹೀರು ಮಾಡಿದೆ. ‘ಈ ಒತ್ತಡದ ಸಂದರ್ಭದಲ್ಲಿ ಅತ್ಯುತ್ತಮವಾದ ಸಂಯಮ ತೋರಿದ ಕೆಎಲ್ ರಾಹುಲ್ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ರವೀಂದ್ರ ಜಡೇಜಾ ಕೂಡ ರಾಹುಲ್​ಗೆ ಉತ್ತಮ ಬೆಂಬಲ ನೀಡಿದ್ದಾರೆ. ಭಾರತಕ್ಕೆ ಉತ್ತಮ ಗೆಲುವು’ ಎಂದು ವೆಂಕಟೇಶ್ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಕಷ್ಟದಲ್ಲಿ ತಂಡದ ಕೈ ಹಿಡಿದ ರಾಹುಲ್

ಕಳೆದ ಕೆಲವು ತಿಂಗಳುಗಳಿಂದ ಕೆಎಲ್ ರಾಹುಲ್‌ ಫಾರ್ಮ್​ನಲ್ಲಿಲ್ಲ. ವಿಶೇಷವಾಗಿ ಟೆಸ್ಟ್ ಮತ್ತು ಟಿ20ಗಳಲ್ಲಿ ರಾಹುಲ್ ಆಟ ಹೇಳಿಕೊಳ್ಳುವಂತಿಲ್ಲ. ಇದರ ಹೊರತಾಗಿಯೂ, ಕಠಿಣ ಪರಿಸ್ಥಿತಿಯಲ್ಲಿ ಬಲಿಷ್ಠ ಇನ್ನಿಂಗ್ಸ್‌ ಆಡುವ ಮೂಲಕ ತಂಡವನ್ನು ಗೆಲ್ಲಿಸುವಲ್ಲಿ ರಾಹುಲ್ ವಿಶೇಷ ಕೊಡುಗೆ ನೀಡಿದ 3 ವರ್ಷಗಳಲ್ಲಿ ಇದು ಮೂರನೇ ಬಾರಿಗೆ. ಇದಕ್ಕೂ ಮೊದಲು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ದಿನದಂದು, ವೇಗಿಗಳಿಗೆ ಅನುಕೂಲಕರ ಪರಿಸ್ಥಿತಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ರಾಹುಲ್ ಅತ್ಯುತ್ತಮ ಶತಕ ಬಾರಿಸಿದ್ದರು, ಇದು ಭಾರತದ ಗೆಲುವಿಗೆ ಆಧಾರವಾಯಿತು. ನಂತರ ಕಳೆದ ವರ್ಷ ತಿರುವನಂತಪುರಂನಲ್ಲಿ ನಡೆದ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ರಾಹುಲ್ ಅಜೇಯ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ind-vs-aus-1st-odi-venkatesh-prasad-praises-kl-rahul-after-fifty-vs-australia-psr-au14-538417.html

Leave a Reply

Your email address will not be published. Required fields are marked *