ನಾನು ಎಂದೂ ಭ್ರಷ್ಟಾಚಾರ ಮಾಡಿಲ್ಲ; ಜಾತಿ ರಾಜಕಾರಣ ಮಾಡುವುದೇ ಇಲ್ಲ : ಜಿ.ರಘು ಆಚಾರ್

 

ಚಿತ್ರದುರ್ಗ,(ಏ.09): ಕಾಂಗ್ರೆಸ್ ಟಿಕೆಟ್ ವಂಚಿತ ರಘು ಆಚಾರ್ ಬಂಡಾಯದ ಬಾವುಟ ಹಾರಿಸಿದ್ದು, ಅದರ ಮುಂದುವರೆದ ಭಾಗವಾಗಿ ಭಾನುವಾರ ಕರೆದಿದ್ದ ಬೆಂಬಲಿಗರ ಸಭೆ ಭರ್ಜರಿ ಯಶಸ್ಸು ಕಂಡಿದೆ.

ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದ್ದ ಸಭೆ ನಿಗಧಿತ ವೇಳೆಯಂತೆ 11 ಗಂಟೆಗೆ ಆರಂಭವಾಯಿತು, ಆದರೆ ರಘು ಆಚಾರ್ ಬೆಂಬಲಿಗರು, ಅಭಿಮಾನಿಗಳು ಎರಡು ಗಂಟೆ ಮೊದಲೇ ಕಲ್ಯಾಣ ಮಂಟಪದ ಬಳಿ ಜಮಾಯಿಸಿದರು.

ಸಭೆಯ ಆರಂಭದ ಸಮಯಕ್ಕೆ ಕಲ್ಯಾಣ ಮಂಟಪ ತುಂಬಿ ತುಳುಕುವಂತಾಗಿತ್ತು. ನಿರಂತರವಾಗಿ ಆಗಮಿಸುತ್ತಲೇ ಇದ್ದ ಬೆಂಬಲಿಗರ ಸಂಖ್ಯೆ ೫ ಸಾವಿರ ದಾಟಿತ್ತು, ಜನರು ಕಲ್ಯಾಣ ಮಂಟಪದ ಹೊರಗೂ ಜಾಗ ಸಾಲದೆ ರಸ್ತೆಯ ತುಂಬೆಲ್ಲಾ ಜಮಾಯಿಸಿದ ಪರಿಣಾಮ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.

ನಿಗಧಿಯಂತೆ ಸಭೆ ಆರಂಭವಾದಾಗ ಅಭಿಮಾನಿಗಳ ಹರ್ಷೋದ್ಗಾರ ಹೆಚ್ಚಾಗಿತ್ತು, ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಬೆಂಬಲಿಗರು, ರಘು ಆಚಾರ್ ಅವರಿಗೆ ಕಾಂಗ್ರೆಸ್ ಪಕ್ಷ ನಂಬಿಸಿ ಮೋಸ ಮಾಡಿದೆ. ಕಾಂಗ್ರೆಸ್ ನಾಯಕರು ಸಣ್ಣ ಸಮುದಾಯವರನ್ನು ಕಡೆಗಣಿಸಿ ಸಾಮಾಜಿಕ ನ್ಯಾಯ ಎಂಬ ಪದಕ್ಕೆ ಅಪಚಾರವೆಸಗಿದ್ದಾರೆ.

ರಘು ಆಚಾರ್ ಅವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ನಾವು ಅವರನ್ನು ಗೆಲ್ಲಿಸುತ್ತೇವೆ ಎಂದರು, ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ, ನಾವು ಕಾಂಗ್ರೆಸ್ ತ್ಯಜಿಸಿ ನಿಮಗೆ ಮತಹಾಕುತ್ತೇವೆ, ನೀವು ನಮ್ಮ ಮನೆ ಮನೆ ಬಾಗಿಲಿಗೆ ನಲ್ಲಿ ಹಾಕಿಸಿ ನೀರು ಕೊಟ್ಟಿದ್ದೀರಿ, ನಮ್ಮ ಗ್ರಾಮಗಳ ಅಭಿವೃದ್ದಿಗೆ ಸಹಕಾರ ನೀಡಿದ್ದೀರಿ ಎಂದು ಕೃತಜ್ಙತೆಯ ಮಾತುಗಳನ್ನಾಡಿದರು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿ.ರಘು ಆಚಾರ್ ರಾಜಕಾರಣ ನಿಂತ ನೀರಲ್ಲ, ನಾನೆಂದೂ ಭ್ರಷ್ಟಾಚಾರ ಮಾಡಿಲ್ಲ, ಜಾತಿ ಹೆಸರಲ್ಲಿ ರಾಜಕಾರಣ ಮಾಡಿಲ್ಲ, ರೈತರಿಗೆ ಬಡವರಿಗೆ ಸಹಾಯ ಮಾಡಿದಾಗಲೂ ನಾನು ವೋಟ್ ಕೇಳಿಲ್ಲ, ದುಡ್ಡು ಕೊಟ್ಟರೆ ಜನರು ವೋಟ್ ಹಾಕುತ್ತಾರೆ ಎಂಬುದು ಸುಳ್ಳು, ಜನರು ಅಭಿವೃದ್ದಿಯನ್ನು ನೋಡಿ ವೋಟ್ ಹಾಕ್ತಾರೆ, ಚಿತ್ರದುರ್ಗದ ಜನರು ಸ್ವಾಭಿಮಾನಿಗಳು, ಇದು ದುರ್ಗದ ಜನರ ಸ್ವಾಭಿಮಾನದ ಪ್ರಶ್ನೆ, ನಾನು ಪ್ರಾಮಾಣಿಕವಾದ ರಾಜಕಾರಣ ಮಾಡಲು ಬಂದಿದ್ದೇನೆ, ದುಡ್ಡು ಮಾಡಲು ಬಂದಿಲ್ಲ, ನಾನು ಹಸಿದವರ ಪರ, ಬಡವರ ಪರ, ಜಾತಿಯ ಹೆಸರಲ್ಲಿ ರಾಜಕಾರಣ ಮಾಡುವುದಿಲ್ಲ.

5 ವರ್ಷದ ಹಿಂದೆ 50 ಸಾವಿರ ಮತ ಹಾಕಿದ ಜನರನ್ನು ಬಿಟ್ಟು ಓಡಿಹೋದವರು, ಈಗ ಜಾತಿ ಹೆಸರಲ್ಲಿ ರಾಜಕೀಯ ಮಾಡಲು ಬಂದಿದ್ದಾರೆ. ನಾನು ಇದೇ ಊರಲ್ಲಿ ಇದ್ದೇನೆ, ಜನರ ನಿರಂತರ ಸಂಪರ್ಕದಲ್ಲಿದ್ದೇನೆ, ನನ್ನ ಜೊತೆ ಜನರಿದ್ದಾರೆ, ಅವರ ಬಳಿ ದುಡ್ಡಿದೆ, ಅವರ ಅಕೌಂಟ್ ಬ್ಯಾಂಕ್ ನಲ್ಲಿದೆ, ನನ್ನ ಅಕೌಂಟ್ ದೇವರ ಬಳಿ ಇದೆ. ಚಿತ್ರದುರ್ಗದಲ್ಲಿ ನಾನು ಏನು ಅಭಿವೃದ್ದಿ ಮಾಡಿದ್ದೇನೆ ಎಂಬುದನ್ನು ಪಟ್ಟಿ ಕೊಡುತ್ತೇನೆ, ಧಮ್ ಇದ್ದರೆ ನನ್ನ ಎದುರಾಳಿಯಾಗಿ ನನಗೆ ಟಿಕೆಟ್ ತಪ್ಪಿಸಿದ ಮಹಾನುಭಾವನೇ ಬಂದು ನಿಲ್ಲಲಿ, ನಾನು ಅತ್ಯಧಿಕ ಮತಗಳಿಂದ ಗೆದ್ದು ತೋರಿಸುತ್ತೇನೆ, ಈ ಬಾರಿ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕುವಂತಹ ಪರಿಸ್ಥಿತಿ ಮುಂದೆ ನಿರ್ಮಾಣವಾಗಲಿದೆ ಎಂದು ಡಿಕೆಶಿಗೆ ಹೆಸರು ಹೇಳದೆ ಪರೋಕ್ಷವಾಗಿ ಸವಾಲು ಹಾಕಿದರು.

ಬೆಂಬಲಿಗರ ಸಭೆಯಲ್ಲಿ ಮೈಸೂರು ಸುಬ್ಬಣ್ಣ ನಿರೂಪಣೆ ಮಾಡಿದರು, ವಿಶ್ವಕರ್ಮ ಅಭಿವೃದ್ದಿ ನಿಗಮಗ ಮಾಜಿ ಅಧ್ಯಕ್ಷೆ ಸತ್ಯವತಿ, ಆಶಾ ರಘು ಆಚಾರ್, ಡಿಸಿಸಿ ಜಿಲ್ಲಾ ಕಾರ್ಯದರ್ಶಿ ತಿಪ್ಪೇಸ್ವಾಮಿ ಸೇರಿದಂತೆ ಹಲವು ಬೆಂಬಲಿಗರು ಮಾತನಾಡಿ ಸಲಹೆ ನೀಡಿದರು.

The post ನಾನು ಎಂದೂ ಭ್ರಷ್ಟಾಚಾರ ಮಾಡಿಲ್ಲ; ಜಾತಿ ರಾಜಕಾರಣ ಮಾಡುವುದೇ ಇಲ್ಲ : ಜಿ.ರಘು ಆಚಾರ್ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/jDRoeLK
via IFTTT

Views: 0

Leave a Reply

Your email address will not be published. Required fields are marked *