IPL 2023: ವಿರಾಟ್ ಕೊಹ್ಲಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಖ್ಯಾತ ಕ್ರಿಕೆಟಿಗನ ಪುತ್ರರು

IPL 2023: ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು ವಿರಾಟ್ ಕೊಹ್ಲಿ ಹಾಗೂ ಮಹಿಪಾಲ್ ಲೋಮ್ರರ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್​ ಕಲೆಹಾಕಿತು.ಈ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಫಿಲ್ ಸಾಲ್ಟ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 45 ಎಸೆತಗಳಲ್ಲಿ 87 ರನ್ ಬಾರಿಸುವ ಮೂಲಕ ಸಾಲ್ಟ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 16.4 ಓವರ್​ನಲ್ಲಿ ಗುರಿ ಮುಟ್ಟುವ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.ಈ ಗೆಲುವಿನ ಎಲ್ಲಾ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಕ್ರೀಡಾಸ್ಪೂರ್ತಿ ಮೆರೆದರು. ಇದೇ ವೇಳೆ ಸ್ಟೇಡಿಯಂ ಗ್ಯಾಲರಿಯಲ್ಲಿದ್ದ ಇಬ್ಬರು ಬಾಲಕರು ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದರು.ಅಷ್ಟೇ ಅಲ್ಲದೆ ನೇರವಾಗಿ ವಿರಾಟ್ ಕೊಹ್ಲಿ ಬಳಿ ಈ ಇಬ್ಬರು ಬಾಲಕರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕೊಹ್ಲಿ ಜೊತೆಗಿನ ಈ ಪುಟಾಣಿ ಪೋರರ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಅಂದಹಾಗೆ ಹೀಗೆ ವಿರಾಟ್ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಂಡ ಪೋರರು ಮತ್ಯಾರೂ ಅಲ್ಲ. ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಸುಪುತ್ರರು. ಸೆಹ್ವಾಗ್ ಅವರ ಪುತ್ರರಾದ ಆರ್ಯವೀರ್ ಸೆಹ್ವಾಗ್ ಮತ್ತು ವೇದಾಂತ್ ಕಿಂಗ್ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಅಂದಹಾಗೆ ಆರ್ಯವೀರ್ ಕೂಡ ಕ್ರಿಕೆಟಿಗನಾಗಲು ಬಯಸಿದ್ದು, ಈಗಾಗಲೇ ದೆಹಲಿ ಕಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ತಂದೆಯಂತೆ ಆರ್ಯವೀರ್ ಮಿಂಚಿದರೂ ಅಚ್ಚರಿಪಡಬೇಕಿಲ್ಲ.

source https://tv9kannada.com/photo-gallery/cricket-photos/ipl-2023-virat-kohli-poses-with-virender-sehwags-sons-kannada-news-zp-572379.html

Leave a Reply

Your email address will not be published. Required fields are marked *