ತಿರುಪತಿ ಬಾಲಾಜಿಯಿಂದ ಬಂಗಾಳದ ತನಕ: ಚೀನಾ ಹೇಗೆ ಭಾರತದ ಕೂದಲು ವ್ಯಾಪಾರದಲ್ಲೂ ಕೈಯಾಡಿಸುತ್ತಿದೆ?

ಅತ್ಯುತ್ತಮ ಗುಣಮಟ್ಟದ ಭಾರತೀಯ ಕೂದಲು “ರೆಮಿ ಹೇರ್” ಎಂದು ಜನಪ್ರಿಯವಾಗಿದ್ದು, ದಕ್ಷಿಣ ಭಾರತದ ದೇಗುಲಗಳಿಂದ ಸಂಗ್ರಹಿಸಲಾಗುತ್ತದೆ. ಅಲ್ಲಿ ಮಹಿಳೆಯರೂ ಹರಕೆಯ ರೂಪದಲ್ಲಿ ತಮ್ಮ ಮುಡಿಯನ್ನು ಅರ್ಪಿಸುತ್ತಾರೆ. ರೆಮಿ ಕೂದಲಿನ ಹೊರಪೊರೆ ಯಾವುದೇ ಹಾನಿಗೊಳಗಾಗಿರದಿರುವುದರಿಂದ, ಈ ಕೂದಲು ಹೆಚ್ಚು ನೈಸರ್ಗಿಕವಾಗಿ ಕಾಣುತ್ತದೆ ಮತ್ತು ದೀರ್ಘಕಾಲ ಬಾಳಿಕೆಗೆ ಬರುತ್ತದೆ.

ಜಾಗತಿಕ ಮಾನವ ಕೂದಲು ರಫ್ತು ಉದ್ಯಮದಲ್ಲಿ ಭಾರತ ಈ ಸಮಯದ ತನಕವೂ ಜಗತ್ತಿನಲ್ಲಿ ಅಗ್ರಸ್ಥಾನಿಯಾಗಿದೆ. ಭಾರತ 607.8 ಮಿಲಿಯನ್ ಡಾಲರ್ ಮೌಲ್ಯದ ಮಾನವ ಕೂದಲು ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಅಮೆರಿಕಾ ಮತ್ತು ಚೀನಾಗೆ ರಫ್ತು ಮಾಡಿದೆ. ಆದರೆ, ಒಂದು ವೇಳೆ ಭಾರತವೇನಾದರೂ ಕೂದಲು ಕಳ್ಳ ಸಾಗಾಣಿಕೆಯನ್ನು ತಡೆಯಲು ಸಾಧ್ಯವಾದರೆ, ಭಾರತ ವಾರ್ಷಿಕವಾಗಿ 3 ಬಿಲಿಯನ್ ಡಾಲರ್ ಮೊತ್ತವನ್ನು ಸಂಪಾದಿಸಬಹುದು. ಮಾನವ ಕೂದಲು ಕಳ್ಳ ಸಾಗಾಣಿಕೆ ಭಾರತಕ್ಕೆ ನ್ಯಾಯಬದ್ಧ ಆದಾಯ ಮತ್ತು ತೆರಿಗೆಯನ್ನು ತಪ್ಪಿಸುತ್ತದೆ.

ಭಾರತೀಯ ಕೂದಲುಗಳು ಹಗುರ, ಹೊಳಪುಳ್ಳ, ಮತ್ತು ಆಕರ್ಷಕವಾಗಿರುವುದರಿಂದ, ವಿಗ್ ಮತ್ತು ಚೌರಿಗಳಿಗೆ ಜನಪ್ರಿಯವಾಗಿವೆ. ಪ್ರತಿ ತಿಂಗಳು ಲಕ್ಷಾಂತರ ಭಕ್ತರು ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ಹರಕೆಯ ರೂಪದಲ್ಲಿ ತಮ್ಮ ಕೂದಲನ್ನು ಅರ್ಪಿಸುತ್ತಾರೆ. ಒಂದು ಅಂದಾಜಿನ ಪ್ರಕಾರ, ಪ್ರತಿ ವರ್ಷವೂ ಜಗತ್ತಿನ ಬೇರೆ ಬೇರೆ ಭಾಗಗಳಿಂದ ಬರುವ ಭಕ್ತಾದಿಗಳು ತಿರುಪತಿ ತಿಮ್ಮಪ್ಪನಿಗೆ 500-600 ಟನ್‌ಗಳಷ್ಟು ಕೂದಲು ಅರ್ಪಿಸುತ್ತಾರೆ.

ಅತ್ಯುತ್ತಮ ಗುಣಮಟ್ಟದ ಭಾರತೀಯ ಕೂದಲು “ರೆಮಿ ಹೇರ್” ಎಂದು ಜನಪ್ರಿಯವಾಗಿದ್ದು, ದಕ್ಷಿಣ ಭಾರತದ ದೇಗುಲಗಳಿಂದ ಸಂಗ್ರಹಿಸಲಾಗುತ್ತದೆ. ಅಲ್ಲಿ ಮಹಿಳೆಯರೂ ಹರಕೆಯ ರೂಪದಲ್ಲಿ ತಮ್ಮ ಮುಡಿಯನ್ನು ಅರ್ಪಿಸುತ್ತಾರೆ. ರೆಮಿ ಕೂದಲಿನ ಹೊರಪೊರೆ ಯಾವುದೇ ಹಾನಿಗೊಳಗಾಗಿರದಿರುವುದರಿಂದ, ಈ ಕೂದಲು ಹೆಚ್ಚು ನೈಸರ್ಗಿಕವಾಗಿ ಕಾಣುತ್ತದೆ ಮತ್ತು ದೀರ್ಘಕಾಲ ಬಾಳಿಕೆಗೆ ಬರುತ್ತದೆ.

ಪಶ್ಚಿಮ ಬಂಗಾಳದ, ಈಸ್ಟ್ ಮಿಡ್ನಾಪುರ ಜಿಲ್ಲೆಯ, ಹಬಿ ಚೌಕ್ ಎಂಬ ಗ್ರಾಮದಲ್ಲಿ ಹಸೀನಾ ಎಂಬ 35ರ ಹರೆಯದ ಮಹಿಳೆ ಪ್ರತಿದಿನವೂ ಐದು ಗಂಟೆಗಳ ಕಾಲ ಮಾನವರ ಕೂದಲಿನ ಸಿಕ್ಕು ಬಿಡಿಸುವ ಕೆಲಸ ಮಾಡುತ್ತಾಳೆ. ಆಕೆ ಕೂದಲುಗಳನ್ನು ಎಳೆಗಳಾಗಿ ಬಿಡಿಸಿಕೊಂಡು, ಬಳಿಕ ಆರು ಇಂಚುಗಳಿಗಿಂತ ಹೆಚ್ಚು ಉದ್ದವಿರುವ ಕೂದಲುಗಳನ್ನು ಉಂಡೆಯನ್ನಾಗಿ ಮಾಡುತ್ತಾಳೆ. ಬಾಕಿ ಉಳಿದ ಕೂದಲನ್ನು ಆಕೆ ಎಸೆದು ಬಿಡುತ್ತಾಳೆ. ಆಕೆ ಪ್ರತಿ ತಿಂಗಳೂ ಅಂದಾಜು 25 ಕೆಜಿಗಳಷ್ಟು ಕೂದಲನ್ನು ಸುಕ್ಕು ಬಿಡಿಸುವ ಮೂಲಕ 7,500 ರೂಪಾಯಿ (92 ಡಾಲರ್) ಮೊತ್ತವನ್ನು ಸಂಪಾದಿಸುತ್ತಾಳೆ. ಹಸೀನಾಗೆ ತಾನು ಮಾನವರ ಕೂದಲಿನಿಂದಲೂ ಹಣ ಸಂಪಾದಿಸಬಲ್ಲೆ ಎಂಬ ಯಾವ ಕಲ್ಪನೆಯೂ ಇರಲಿಲ್ಲ. ಆದರೆ ಈಗ ಆಕೆ ಅನವಶ್ಯಕವಾದ ಕೂದಲನ್ನು ಸಂಗ್ರಾಹಕರಿಗೆ ಮಾರಾಟ ಮಾಡಿ, ಒಂದು ನಿಗದಿತ ಆದಾಯವನ್ನು ಸಂಪಾದಿಸುತ್ತಾಳೆ.

ಭಾರತದ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸಾಕಷ್ಟು ಮಹಿಳೆಯರು ಈ ಮಾನವ ಕೂದಲು ಉದ್ಯಮದಲ್ಲಿ ಕೆಲಸ ಮಾಡುತ್ತಾರೆ. ಅವರು ಕೂದಲನ್ನು ಸಂಗ್ರಹಿಸಿ, ಮಾರಾಟ ಮಾಡಿ, ಅದರಿಂದ ಹಣ ಸಂಪಾದಿಸುತ್ತಾರೆ. ಈ ಉದ್ಯಮ 1 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದು, ಪಶ್ಚಿಮ ಬಂಗಾಳ ಭಾರತದ ಅರ್ಧಕ್ಕಿಂತಲೂ ಹೆಚ್ಚಿನ ಕೂದಲಿನ ರಫ್ತು ನಡೆಸುತ್ತದೆ.

ಕೂದಲು ವ್ಯಾಪಾರಿಗಳು ಹಸೀನಾಳಂತಹ ವ್ಯಕ್ತಿಗಳಿಂದ ಕೂದಲನ್ನು ಸಂಗ್ರಹಿಸಿ, ಸಣ್ಣ ಸಣ್ಣ ಕೇಂದ್ರಗಳಲ್ಲಿ ಅದನ್ನು ತೊಳೆದು, ಬಳಿಕ ವಿಭಾಗಿಸಿ, ಗಾತ್ರಗಳಿಗೆ ಅನುಗುಣವಾಗಿ ಅವುಗಳನ್ನು ಜೋಡಿಸುತ್ತಾರೆ. ಈ ಉಂಡೆಗಳಲ್ಲಿರುವ ಕೂದಲುಗಳು ನಾಲ್ಕರಿಂದ ನಲ್ವತ್ತು ಇಂಚುಗಳಷ್ಟು ಉದ್ದವಿರಬಹುದು. ಅವುಗಳನ್ನು ನೆಟ್ಟಗಾಗಿಸುವ ಪ್ರಕ್ರಿಯೆ ಒಂದೇ ಉದ್ದದ, ಬುಡದಿಂದ ತುದಿಯ ತನಕ ಒಂದೇ ದಪ್ಪ ಹೊಂದಿರುವ ಕೂದಲುಗಳನ್ನು ಒಳಗೊಂಡಿರುತ್ತದೆ. ಈ ರೀತಿ ಸಿದ್ಧಗೊಳಿಸಿದ ಕೂದಲನ್ನು ಬಳಿಕ ಚೀನಾ, ಅಮೆರಿಕಾ, ಯೂರೋಪ್‌ನಂತಹ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಅಲ್ಲಿ ಇಂತಹ ಕೂದಲನ್ನು ವಿಗ್ ತಯಾರಿಸಲು, ಇತರ ಕೂದಲಿನ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ. ಈ ದೇಶಗಳು ಭಾರತದ ಕೂದಲಿನ ಅತಿದೊಡ್ಡ ಖರೀದಿದಾರರಾಗಿದ್ದಾರೆ.

ಈ ಹಿಂದೆ, ಚೀನಾದ ಕಂಪನಿಗಳು ಭಾರತದ ಉದ್ಯಮಗಳಿಂದ ಪ್ರತಿ ಕಿಲೋಗೆ 200 ಡಾಲರ್ ಬೆಲೆ ತೆತ್ತು ಕೂದಲು ಖರೀದಿಸುತ್ತಿದ್ದವು. ಅವು ಈ ಕೂದಲನ್ನು ಬಳಸಿ ವಿಗ್, ಚೌರಿ, ಕಣ್ಣು ರೆಪ್ಪೆ, ಪೈಂಟ್ ಬ್ರಷ್, ಹಾಗೂ ನಕಲಿ ಗಡ್ಡ ಮೀಸೆಗಳನ್ನು ಉತ್ಪಾದಿಸಿ, ಜಾಗತಿಕ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದವು.

ಆದರೆ ಈಗ ಚೀನಾದ ಕಂಪನಿಗಳು ಭಾರತದಲ್ಲಿ ಸ್ಥಳೀಯ ಏಜೆಂಟ್‌ಗಳನ್ನು ನೇಮಿಸಿಕೊಂಡು, ಭಾರತೀಯ ಉದ್ಯಮಿಗಳಿಂದ ಸಾಕಷ್ಟು ಕಡಿಮೆ ಬೆಲೆಗೆ, ಅಂದರೆ ಪ್ರತಿ ಕೆಜಿಗೆ 60ರಿಂದ 70 ಡಾಲರ್ ನೀಡಿ ಖರೀದಿಸತೊಡಗಿವೆ. ಈ ರೀತಿ ಖರೀದಿಸಿದ ಕೂದಲನ್ನು ಬಾಂಗ್ಲಾದೇಶಕ್ಕೆ ಕಳ್ಳ ಸಾಗಾಣಿಕೆ ನಡೆಸಲಾಗುತ್ತದೆ. ಅಲ್ಲಿ ಇದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದರ ಪರಿಣಾಮವಾಗಿ, ಭಾರತ ತನ್ನ ತೆರಿಗೆ ಆದಾಯವನ್ನು ಕಳೆದುಕೊಳ್ಳುತ್ತಿದೆ. 2021 ಒಂದೇ ವರ್ಷದಲ್ಲಿ ಗಡಿ ಭದ್ರತಾ ಪಡೆಗಳು ಬಹುತೇಕ 400 ಕೆಜಿಗಳಷ್ಟು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಕೂದಲನ್ನು ವಶಪಡಿಸಿಕೊಂಡಿವೆ. ಇಂತಹ ಕೂದಲಿನ ಉಂಡೆಗಳನ್ನು ಬಾಂಗ್ಲಾದೇಶಕ್ಕೆ ಸಾಗಾಟ ನಡೆಸಿದ ಬಳಿಕ, ಅಲ್ಲಿನ ಸ್ಥಳೀಯ ಕೇಂದ್ರಗಳಲ್ಲಿ ಅವುಗಳನ್ನು ಸಂಸ್ಕರಿಸಿ, ಅಲ್ಲಿಂದ ಚೀನಾಗೆ ಕಳುಹಿಸಲಾಗುತ್ತದೆ. ಕೆಲವು ಬಾರಿ, ಇಂತಹ ಕೂದಲಿನ ಉಂಡೆಗಳನ್ನು ಮಯನ್ಮಾರ್ ಮೂಲಕ ಚೀನಾಗೆ ಕಳುಹಿಸಲಾಗುತ್ತದೆ. ನಿರ್ಲಜ್ಜ ವ್ಯಾಪಾರಿಗಳು ಆಮದು ಮೌಲ್ಯದ 30%ರಷ್ಟಿರುವ ತೆರಿಗೆ ನೀಡುವುದನ್ನು ತಪ್ಪಿಸುವ ಸಲುವಾಗಿ ಕೂದಲಿನ ಕಳ್ಳ ಸಾಗಾಣಿಕೆ ನಡೆಸುತ್ತಾರೆ.

ಮಾನವ ಕೂದಲನ್ನು ಭಾರತದಿಂದ ಮಯನ್ಮಾರ್ಗೆ 2012ರಿಂದಲೂ ಕಳ್ಳ ಸಾಗಾಣಿಕೆ ನಡೆಸಲಾಗುತ್ತಿತ್ತು. ಕಳೆದ ಐದು ವರ್ಷಗಳ ಅವಧಿಯಲ್ಲಿ, ಚೀನಾದ ಆಮದುದಾರರು ಬಾಂಗ್ಲಾದೇಶದಲ್ಲಿ ಕಡಿಮೆ ಬೆಲೆಗೆ ಸ್ಥಳೀಯ ಕಾರ್ಮಿಕರನ್ನು ನೇಮಿಸಿಕೊಂಡು, ಸ್ಥಳೀಯ ಘಟಕಗಳನ್ನು ಆರಂಭಿಸಿ, ಕೂದಲನ್ನು ಸಂಸ್ಕರಿಸುತ್ತಿದ್ದಾರೆ. ಇದರ ನಂತರ ಬಾಂಗ್ಲಾದೇಶಕ್ಕೆ ಕೂದಲಿನ ಕಳ್ಳ ಸಾಗಾಣಿಕೆ ಹೆಚ್ಚಾಗತೊಡಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ, 5,61,000 ಭಾರತೀಯರು ಕಳ್ಳ ಸಾಗಾಣಿಕೆಯ ಕಾರಣದಿಂದ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಯಾಕೆಂದರೆ, ಕಳ್ಳ ಸಾಗಾಣಿಕೆಯ ಕಾರಣದಿಂದಾಗಿ ಪಶ್ಚಿಮ ಬಂಗಾಳ, ನವದೆಹಲಿ, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿದ್ದ ಹಲವಾರು ಸಣ್ಣ ಪುಟ್ಟ ಕೂದಲು ಸಂಸ್ಕರಣಾ ಕೇಂದ್ರಗಳು ಮುಚ್ಚಿ ಹೋಗಿವೆ.

ಗಡಿ ಭದ್ರತಾ ಪಡೆಗಳ ಮುಂದಿದೆ ಗುರುತರ ಸವಾಲು:
ಭಾರತದ ಗಡಿ ಭದ್ರತಾ ಪಡೆಗಳಿಗೆ ಮಾನವ ಕೂದಲು ಕಳ್ಳ ಸಾಗಾಣಿಕೆ ಒಂದು ನೂತನ ಸವಾಲಾಗಿದೆ. ಅವರು ಈಗಾಗಲೇ ಬಾಂಗ್ಲಾದೇಶದ ಜೊತೆಗಿನ 4,096 ಕಿಲೋಮೀಟರ್ ಉದ್ದನೆಯ ಗಡಿಯಲ್ಲಿ ಕಳ್ಳ ಸಾಗಾಣಿಕೆ ನಡೆಯುತ್ತಿರುವ ಆಕಳು, ಚಿನ್ನ, ಹಾಗೂ ಮಾದಕ ವಸ್ತುಗಳನ್ನು ತಡೆಯಲೇ ಕಷ್ಟಪಡುತ್ತಿದ್ದಾರೆ. ಈ ವರ್ಷದಲ್ಲಿ ಈಗಾಗಲೇ ಭಾರತದ ಗಡಿ ಭದ್ರತಾ ಪಡೆಗಳು 350 ಕೆಜಿಗಳಷ್ಟು ಮಾನವ ಕೂದಲನ್ನು ಪಶ್ಚಿಮ ಬಂಗಾಳದಲ್ಲಿ ವಶಪಡಿಸಿಕೊಂಡಿದ್ದಾರೆ. ಕಳೆದ ವರ್ಷ 1,104 ಕೆಜಿಗಳಷ್ಟು ಕೂದಲನ್ನು ವಶಪಡಿಸಿಕೊಳ್ಳಲಾಗಿತ್ತು.

ಕೋಲ್ಕತ್ತಾದ 55 ವರ್ಷದ ಮಹಿಳೆಯೊಬ್ಬರು ತನ್ನ ಬಿದ್ದ ಕೂದಲನ್ನು ಪ್ರತಿ ಕೆಜಿಗೆ 5,000 ರೂ.ಗಳಂತೆ ತನ್ನ ಮನೆಬಾಗಿಲಿಗೆ ಬರುವ ಕೂದಲು ಸಂಗ್ರಾಹಕ ಮಹಿಳೆಗೆ ನೀಡುತ್ತಾರೆ. ಕೂದಲಿನ ಬೆಲೆ 2018ರಲ್ಲಿ ಪ್ರತಿ ಕೆಜಿಗೆ 2,000 ರೂಪಾಯಿಗಳಿಂದ ಈಗ ಪ್ರತಿ ಕೆಜಿಗೆ 5,000 ಕೆಜಿಗೆ ತಲುಪಿದೆ. ಇದಕ್ಕೆ ಹೆಚ್ಚುತ್ತಿರುವ ಬೇಡಿಕೆಯೂ ಪ್ರಮುಖ ಕಾರಣವಾಗಿದೆ.

ಭಾರತವನ್ನು ಶೋಷಿಸುತ್ತಿರುವ ಚೀನಾದ ವರ್ತಕರು:
ಸ್ಥಳೀಯ ವರ್ತಕರು ಸಾಮಾನ್ಯವಾಗಿ ಚೀನಾದ ಆಮದುದಾರರ ಪರವಾಗಿ ಕೆಲಸ ಮಾಡುವ ಏಜೆಂಟ್‌ಗಳೊಡನೆ ವ್ಯವಹಾರ ನಡೆಸುತ್ತಾರೆ. ಈ ಏಜೆಂಟ್‌ಗಳು ನಗದು ರೂಪದಲ್ಲಿ ಅಥವಾ ಹವಾಲಾ ಜಾಲದ ಮೂಲಕ ಹಣ ಪಾವತಿಸುತ್ತಾರೆ. ಈ ಹವಾಲಾ ಜಾಲ ಭಾರತದಲ್ಲಿ ಅಕ್ರಮ ವಿಧಾನವಾಗಿದೆ. ಭಾರತದ ಸ್ಥಳೀಯ ವರ್ತಕರು ಈ ರೀತಿ ನಗದು ಅಥವಾ ಹವಾಲಾ ಜಾಲದ ಮೂಲಕ ಹಣ ಪಾವತಿಸುವ ಮೂಲಕ ಡ್ರಗ್ಸ್ ಹಾಗೂ ಚಿನ್ನದ ಕಳ್ಳ ಸಾಗಾಣಿಕೆ ನಡೆಸುತ್ತಾರೆ. ಭಾರತೀಯ ರಫ್ತುದಾರರು ಸಾಮಾನ್ಯವಾಗಿ ಪ್ರಮುಖ ವ್ಯವಹಾರಗಳನ್ನು ಬ್ಯಾಂಕ್ ವರ್ಗಾವಣೆಯ ಮೂಲಕ ನಡೆಸುತ್ತಾರೆ.

2026ರ ವೇಳೆಗೆ ಅಂತಾರಾಷ್ಟ್ರೀಯ ವಿಗ್ ಮತ್ತು ಕೂದಲು ಮಾರುಕಟ್ಟೆ 13.3 ಬಿಲಿಯನ್ ಡಾಲರ್ ಮೌಲ್ಯ ತಲುಪುವ ಸಾಧ್ಯತೆಗಳಿವೆ. ಆದರೆ ದಿನೇ ದಿನೇ ಹೆಚ್ಚುತ್ತಿರುವ ಕೂದಲು ಕಳ್ಳ ಸಾಗಾಣಿಕೆಯ ಕಾರಣದಿಂದ ಭಾರತ ಇದರಿಂದ ಬಹುಪಾಲು ಹೊರಗುಳಿಯುವ ಸಾಧ್ಯತೆಗಳಿವೆ.

ಭ್ರಷ್ಟ ಚೀನೀ ವ್ಯಾಪಾರಿಗಳು ತೆರಿಗೆ ತಪ್ಪಿಸುವ ಕಾರಣದಿಂದ ಭಾರತೀಯ ಕೂದಲನ್ನು ಭಾರತೀಯ ವ್ಯಾಪಾರಿಗಳಿಂದಲೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಸಣ್ಣಪುಟ್ಟ ಚೀನೀ ಆಮದುದಾರರು ತೆರಿಗೆ ತಪ್ಪಿಸುವ ಸಲುವಾಗಿ ಕೂದಲಿನ ಕಳ್ಳ ಸಾಗಾಣಿಕೆ ನಡೆಸುವ ಸಾಧ್ಯತೆಗಳು ಹೆಚ್ಚಿವೆ. ಬಹುತೇಕ ದೊಡ್ಡ ಆಮದುದಾರರು ಕಾನೂನುಬದ್ಧವಾಗಿ ವ್ಯವಹಾರ ನಡೆಸುತ್ತಾರೆ. ಆದರೆ ಚೀನಾದ ಕೂದಲು ವ್ಯಾಪಾರ ಭಾರತದ ಪೂರೈಕೆಯ ಮೇಲೆಯೇ ಬಹುಪಾಲು ಅವಲಂಬಿತವಾಗಿದೆ.

ಭಾರತೀಯ ರಫ್ತುದಾರರು ಈ ವ್ಯಾಪಾರದಲ್ಲಿ ಹಣ ಕಳೆದುಕೊಳ್ಳುತ್ತಿದ್ದರೆ, ಬಾಂಗ್ಲಾದೇಶದ ಅಧಿಕೃತ ಕೂದಲು ರಫ್ತು ಹೆಚ್ಚಾಗುತ್ತಾ ಬಂದಿದೆ. ಬಾಂಗ್ಲಾದೇಶ ಜುಲೈ 2022 ಮತ್ತು ಮೇ 2023ರ ನಡುವೆ 113 ಮಿಲಿಯನ್ ಡಾಲರ್ ಮೌಲ್ಯದ ಕೂದಲನ್ನು ರಫ್ತು ಮಾಡಿದೆ. ಇದು ಹಿಂದಿನ ವರ್ಷದ 95.5 ಮಿಲಿಯನ್ ಡಾಲರ್ಗೆ ಹೋಲಿಸಿದರೆ ಸಾಕಷ್ಟು ಹೆಚ್ಚಳವಾಗಿದೆ.

ಚೀನಾ ಭಾರತೀಯ ಕೂದಲಿನಿಂದ ನಿರ್ಮಿಸುವ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಮಾರಾಟ ಮಾಡುತ್ತದೆ. ಇದರಿಂದ ಭಾರತದ ಲಾಭಾಂಶವನ್ನು ಚೀನಾ ಪಡೆಯುವಂತಾಗುತ್ತದೆ.

ಚೀನಾದ ಕಂಪನಿಗಳು ಆಧುನಿಕ ಯಂತ್ರಗಳನ್ನು ಬಳಸುವುದರಿಂದ, ವಿಗ್ ಮತ್ತು ಹೇರ್ ಎಕ್ಸ್ಟೆನ್ಷನ್‌ಗಳ ಮಾರಾಟದಲ್ಲಿ ಹೆಚ್ಚಿನ ಲಾಭ ಪಡೆಯುತ್ತವೆ. ಭಾರತದ ಕಂಪನಿಗಳ ಉತ್ಪನ್ನಗಳು ಚೀನೀ ಕಂಪನಿಗಳ ಉತ್ಪನ್ನಗಳ ಗುಣಮಟ್ಟ ಹೊಂದಿರದ ಕಾರಣ ಕಡಿಮೆ ಲಾಭ ಪಡೆಯುತ್ತವೆ. ಇದರ ಪರಿಣಾಮವಾಗಿ, ಚೀನಾದ ಕಂಪನಿಗಳ ಲಾಭ ಪ್ರತಿ ಕೆಜಿ ಕೂದಲಿಗೆ 300 ಡಾಲರ್ ಆಗಿದ್ದರೆ, ಭಾರತದ ಕಂಪನಿಗಳ ಲಾಭಾಂಶ ಪ್ರತಿ ಕೆಜಿಗೆ 200 ಡಾಲರ್ ಆಗಿದೆ.

ಭಾರತೀಯ ಕೂದಲು ಉದ್ಯಮ ಅತ್ಯಾಧುನಿಕ ತಂತ್ರಜ್ಞಾನ ಬಳಸುವ ಮೂಲಕ, ಯುರೋಪ್ ಮತ್ತು ದಕ್ಷಿಣ ಕೊರಿಯಾದ ವಿಗ್ ಮತ್ತು ಹೇರ್ ಎಕ್ಸ್ಟೆನ್ಷನ್ ತಜ್ಞರನ್ನು ಹೊಂದುವ ಮೂಲಕ ಅಭಿವೃದ್ಧಿ ಹೊಂದಬಹುದು.

ಭಾರತ ಸರ್ಕಾರ ಎಲ್ಲ ಮಾನವ ಕೂದಲು ರಫ್ತುದಾರರಿಗೆ ವ್ಯಾಪಾರ ನಡೆಸುವ ಮೊದಲೇ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಆದರೆ ಸಾಗಾಣಿಕೆಯಲ್ಲಿ ಕಳಪೆಯಾಗಿರುವ ಹಲವು ವ್ಯಾಪಾರಿಗಳೂ ಪರವಾನಗಿ ಪಡೆಯಲು ಯಶಸ್ವಿಯಾಗಿದ್ದಾರೆ.

ವರ್ತಕರ ಸಂಘದ ಸದಸ್ಯರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಗ್ರಾಮ ಪಂಚಾಯತ್‌ಗಳಿಗೆ ಮನೆಗಳಿಂದ ಕೂದಲು ಸಂಗ್ರಹಿಸಿ, ಭಾರತೀಯ ರಫ್ತುದಾರರಿಗೇ ಮಾರಾಟ ಮಾಡಬೇಕೆಂದು ಸೂಚಿಸುವಂತೆ ಕೋರಿಕೊಂಡಿದ್ದಾರೆ. ಇದರಿಂದ ಗಳಿಸುವ ಲಾಭವನ್ನು ಸರ್ಕಾರ ಸ್ಥಳೀಯ ಅಭಿವೃದ್ಧಿಗೆ ಬಳಸಬಹುದಾಗಿದೆ.

ಭದ್ರತಾ ಪಡೆಗಳು ಕಳ್ಳಸಾಗಣೆಯ ಕುರಿತು ಶೂನ್ಯ ಸಹಿಷ್ಣುತೆ ಹೊಂದಿವೆಯಾದರೂ, ಗಡಿಯ ಬೇಲಿಗಳಿಗೆ ಇನ್ನಷ್ಟು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕಿದೆ. ಆ ಮೂಲಕ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಂತೆ ಕಾಯಲು ಸಾಧ್ಯವಾಗುತ್ತದೆ.

ಹಸೀನಾಳಂತವರು ತೀರಾ ಕಡಿಮೆ ಹಣಕ್ಕೆ ಕೂದಲಿನ ರಾಶಿಯನ್ನು ಸರಿಪಡಿಸುತ್ತಾ ದಿನ ಕಳೆಯುತ್ತಿರುತ್ತಾರೆ. ಅವರಿಗೆ ಕೊನೆಯದಾಗಿ ಈ ಕೂದಲನ್ನು ಯಾರು ಧರಿಸುತ್ತಾರೆ, ಅವರಿಗೆ ಇದು ಹೇಗೆ ತಲುಪುತ್ತದೆ ಎನ್ನುವುದೇ ತಿಳಿಯುವುದಿಲ್ಲ.

Source : https://zeenews.india.com/kannada/business/from-tirupati-balaji-to-bengal-how-china-is-tapping-into-india-s-hair-trade-144176

Leave a Reply

Your email address will not be published. Required fields are marked *