Tanmay Srivastava and Ajitesh Argal: ಜೂನ್’ನಲ್ಲಿ ಅಹಮದಾಬಾದ್’ನಲ್ಲಿ ನಿವೃತ್ತ ಕ್ರಿಕೆಟಿಗರಿಗೆ ಬಿಸಿಸಿಐ ನಡೆಸಿದ ಅಂಪೈರಿಂಗ್ ಪರೀಕ್ಷೆ ಯ ಫಲಿತಾಂಶಗಳು ಜುಲೈ 26ರಂದು ಹೊರಬಿದ್ದಿವೆ.

U19 World Cup, Cricket News: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮಲೇಷ್ಯಾದಲ್ಲಿ ನಡೆದ 2008ರ ಅಂಡರ್-19 ವಿಶ್ವಕಪ್‌ನಲ್ಲಿ ಜಯಭೇರಿ ಬಾರಿಸಿದ ಭಾರತದ ಅಂಡರ್-19 ತಂಡದ ಇಬ್ಬರು ಹೀರೋಗಳು ಇದೀಗ ಬಿಸಿಸಿಐ ಅಂಪೈರ್’ಗಳಾಗಿದ್ದಾರೆ. ಆರಂಭಿಕ ಆಟಗಾರ 33ರ ಹರೆಯದ ತನ್ಮಯ್ ಶ್ರೀವಾಸ್ತವ ಮತ್ತು ವೇಗಿ 34 ವರ್ಷದ ಅಜಿತೇಶ್ ಅರ್ಗಲ್ ಅಂಪೈರ್ ಆಗಿ ನೇಮಕಗೊಂಡಿದ್ದಾರೆ.
ಜೂನ್’ನಲ್ಲಿ ‘ಅಹಮದಾಬಾದ್’ನಲ್ಲಿ ಕ್ರಿಕೆಟಿಗರಿಗೆ ಬಿಸಿಸಿಐ ನಡೆಸಿದ ಅಂಪೈರಿಂಗ್ ಪರೀಕ್ಷೆ ಯ ಫಲಿತಾಂಶಗಳು ಜುಲೈ 36ರಂದು ಹೊರಬಿದ್ದಿವೆ.
“ಅವರು ಆಗಸ್ಟ್ 17-19 ರಂದು ಅಹಮದಾಬಾದ್’ನಲ್ಲಿ ನಡೆಯಲಿರುವ ಬಿಸಿಸಿಐ ಓರಿಯಂಟೇಶನ್ ಕಾರ್ಯಕ್ರಮ ಮತ್ತು ಸೆಮಿನಾರ್’ಗೆ ಹಾಜರಾಗುತ್ತಾರೆ. ನಂತರ ಬೋರ್ಡ್ ನಡೆಸಿದ ಆಟಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ” ಎಂದು ಮೂಲವೊಂದು ತಿಳಿಸಿದೆ.
ವಿರಾಟ್ ಕೊಹ್ಲಿ ಜೊತೆಯೇ ಕ್ರಿಕೆಟ್ ವೃತ್ತಿ ಬದುಕು ಆರಂಭಿಸಿದ್ದ ತನ್ಮಯ್ ಶ್ರೀವಾಸ್ತವ್ ಮತ್ತು ಅಜಿತೇಶ್ ಅರ್ಗಲ್ ಕೆಲ ವರ್ಷಗಳ ಹಿಂದೆ ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ್ದರು. ಕ್ರಿಕೆಟ್’ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ ಸಹ ಭಾರತೀಯ ತಂಡಕ್ಕೆ ಆಯ್ಕೆಯಾಗಲಿಲ್ಲ ಎಂಬುದು ಬೇಸರದ ಸಂಗತಿ.
ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅಂಪೈರಿಂಗ್ ಮಾಡಬೇಕೆಂದರೆ, ಐಸಿಸಿ ನಡೆಸುವ ತೀರ್ಪುಗಾರರ ಪರೀಕ್ಷೆಯಲ್ಲಿ ಪಾಸ್ ಆಗಬೇಕಾಗುತ್ತದೆ. ಇನ್ನು ಮುಂಬರುವ ದಿನಗಳಲ್ಲಿ ಈ ಇಬ್ಬರು ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಅಂಪೈರ್ಗಳಾಗಿ ಕಾಣಿಸಿಕೊಂಡರು ಅಚ್ಚರಿ ಇಲ್ಲ.
ಇನ್ನು ಈ ಬಗ್ಗೆ ಮಾತನಾಡಿದ ಶ್ರೀವಾಸ್ತವ್, “ಬಿಸಿಸಿಐ ಅಂಪೈರಿಂಗ್ ಪ್ಯಾನೆಲ್’ನಲ್ಲಿರುವುದು ಖುಷಿಯ ಸಂಗತಿ. ಇದು ನನಗೆ ಹೊಸ ಪಾತ್ರದ ಪ್ರಾರಂಭ. ನಾನು ಕೋಚಿಂಗ್’ನಲ್ಲಿ ಅಗ್ರಸ್ಥಾನದಲ್ಲಿರಲು ಬಯಸುತ್ತೇನೆ. ಇದೀಗ ಅಂಪೈರಿಂಗ್’ಗೆ ಅತ್ಯುತ್ತಮ ಆಯ್ಕೆಯಾಗಿರಲಿದ್ದೇನೆ ಎಂಬುದು ನನ್ನ ಆಶಯ. ಮುಂದೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್’ನಲ್ಲಿ ಭಾರತವನ್ನು ಪ್ರತಿನಿಧಿಸಬಲ್ಲೆ. ಇದು ಸವಾಲಿನ ಕೆಲಸ. ನಾನು ಪ್ರಕ್ರಿಯೆಯನ್ನು ಅನುಸರಿಸುತ್ತೇನೆ” ಎಂದು ಹೇಳಿದರು.
ಕೊಹ್ಲಿ ನೇತೃತ್ವದಲ್ಲಿ ಸ್ಮರಣೀಯ 19 ವರ್ಷದೊಳಗಿನವರ ವಿಶ್ವಕಪ್ ವಿಜಯವನ್ನು ನೆನಪಿಸಿಕೊಂಡ ಅವರು, “ಇದು ನನ್ನ ಕ್ರಿಕೆಟ್ ವೃತ್ತಿಜೀವನದ ಅತ್ಯುತ್ತಮ ಕ್ಷಣವಾಗಿದೆ. ತಂಡವಾಗಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ನಾನು ಶ್ರೇಷ್ಠರೊಂದಿಗೆ ಡ್ರೆಸ್ಸಿಂಗ್ ರೂಮ್ ಅನ್ನು ಹಂಚಿಕೊಳ್ಳಲು ಮತ್ತು ಅವರೊಂದಿಗೆ ಆಟವಾಡಲು ಪುಣ್ಯ ಮಾಡಿದ್ದೆ, ನಾನು ಈಗಲೂ ಆ ಬ್ಯಾಚ್‌ನ ಎಲ್ಲರೊಂದಿಗೆ ಸಂಪರ್ಕದಲ್ಲಿದ್ದೇನೆ” ಎಂದರು.