
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಯನ ಓ ಜೋಗಿ ಚಿತ್ರದುರ್ಗ ಅವರು ಬರೆದಿರುವ ಲೇಖನ.
ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
” ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ.
ತೋರುತಿಹುದು, ಹೊಡೆದು ಹೊಡೆದು ಬಾನಿನಗಲ ಪಟಪಟ.
ಕೇಸರಿ, ಬಿಳಿ, ಹಸಿರು ಮೂರು ಬಣ್ಣ ನಡುವೆ ಚಕ್ರವು.
ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು “
ಇದು ಕಯ್ಯಾರ ಕಿಂಞ್ಞಣ್ಣ ರೈ ರವರು ಬರೆದ ದೇಶಭಕ್ತಿ ಗೀತೆಯ ಸಾಲುಗಳು. ನಮ್ಮ ರಾಷ್ಟ್ರ, ರಾಷ್ಟ್ರಪಿತ, ಹಾಗೂ ರಾಷ್ಟ್ರಧ್ವಜಕ್ಕಿರುವ ಶಕ್ತಿ ಮೌಲ್ಯಗಳನ್ನು ಸವಿವರವಾಗಿ ಈ ನಾಲ್ಕು ಸಾಲಿನಲ್ಲಿ ಕವಿ ವಿವರಿಸದ್ದಾರೆ.
ಸಾಮಾನ್ಯವಾಗಿ ಇಡೀ ದೇಶಾದ್ಯಂತ ಸ್ವಾತಂತ್ರೋತ್ಸವದ ಸಂಭ್ರಮದ ದಿನಾಚರಣೆಯಲ್ಲಿ ನಾವಿದ್ದೇವೆ, ಅಖಂಡ ಭಾರತದ ಸರ್ವ ರಾಜ್ಯಗಳಲ್ಲಿ, ನಗರದ ಪ್ರಮುಖ ರಸ್ತೆಗಳಲ್ಲಿ, ಕಛೇರಿ- ಮನೆಗಳಲ್ಲಿ, ಬೀದಿ-ಮೊಹಲ್ಲಾಗಳಲ್ಲಿ, ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಮನೆ-ಮನೆಗಳಲ್ಲಿಯೇನೋ ಸರಿ ಮನಗಳಲ್ಲಿ?. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿ ಭರ್ತಿ 75ರ ವಸಂತದಲ್ಲಿ ನಿಂತು, ಭೂತ-ವರ್ತಮಾನಗಳನ್ನು ಒಮ್ಮೆ ನಾವೆಲ್ಲರೂ ಅವಲೋಕಿಸಬೇಕಿದೆ. ತ್ರಿವರ್ಣ ಧ್ವಜದಲ್ಲಿರುವ ಕೇಸರಿ, ಶ್ವೇತಾ, ಹಸಿರು ಬಣ್ಣದಲ್ಲಿ ಮಿಂದೇಳಲು ಸಜ್ಜಾಗಿರುವ ನಮ್ಮೆಲ್ಲರಿಗೂ ಕೆಲವು ಪ್ರಶ್ನೆಗಳು ನಮ್ಮೆಲ್ಲರನ್ನು ಪ್ರಶ್ನಿಸುತ್ತಿವೆ!
ತ್ರಿವರ್ಣ ಧ್ವಜದಲ್ಲಿ ಮೊದಲಿರುವ ಕೇಸರಿ ಬಣ್ಣ ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆಯುವ ಬಲಿದಾನಗಳ ಸಂಕೇತವಾಗಿದೆ. ಆದರೆ ಪ್ರಸ್ತುತ ನಮ್ಮಲ್ಲಿ ನಡೆಯುತ್ತಿರುವುದು ಏನು? ಎಲ್ಲವೂ ರಾಜಕೀಯ ಪ್ರೇರಿತ ಸ್ವಾರ್ಥ. ಕೋಮುಗಲಭೆಗಳು ಜಾತಿ, ಮತ-ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಮತಾಂಧ ಸಾವುಗಳು.
ಒಬ್ಬಂಟಿ ಹೆಣ್ಣು ಮದ್ಯ ರಾತ್ರಿಯಲ್ಲಿ ನಿರ್ಭಯವಾಗಿ ಓಡಾಡುವುದೇ ಸ್ವಾತಂತ್ರ್ಯವೆಂದ ಗಾಂಧಿ ತಾತರ ನುಡಿಯಲ್ಲಿ ಇಂದು ತನ್ನ ಮನೆಯವರಿಂದಲೇ, ಉದ್ಯೋಗ ಸ್ಥಳಗಳಲ್ಲಿ, ಶಾಲಾ- ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಎಲ್ಲೆಲ್ಲಿಯೂ ಬೆಂಬಿಡದೆ ಕಾಡುತ್ತಿರುವ ಕ್ರೌರ್ಯ ಮನಸ್ಸುಗಳ ನಡುವೆ ಸ್ವತಂತ್ರ ನಲುಗುತಿದೆ.
ಶಾಂತಿ-ಶುದ್ಧತೆಯ ಸಂಕೇತವಾಗಿರುವ ಶ್ವೇತ ವರ್ಣ, ಮಣಿಪುರದಲ್ಲಿ ನಡೆದಿರುವ ಹಿಂಸಾಚಾರ, ಸರ್ಕಾರಿ ಉದ್ಯೋಗಗಳ ಹೆಸರಿನಲ್ಲಿ ನಡೆಯುತ್ತಿರುವ ಹಗಲು ದರೋಡೆಗಳು, ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ ಬ್ಯುಸಿನೆಸ್, ನಮ್ಮಲ್ಲಿರುವ ಅಶುದ್ಧ ಮನಸ್ಸಿನ ಸ್ಥಿತಿಯನ್ನು ನಸುನಗುತ್ತಾ ಪ್ರಶ್ನಿಸುತ್ತಿದೆ.
ಪ್ರಗತಿ ಮತ್ತು ಸಮೃದ್ಧತೆಯ ಸಂಕೇತ ಹಸಿರು ಬಣ್ಣ. ಮನುಷ್ಯ ಮತ್ತು ಪ್ರಕೃತಿ ನಡುವಿನ ಅವಿನಾಭಾವ ಸಂಬಂಧವನ್ನು ತಿಳಿಸುತ್ತದೆ. ಸಕಲ ಜೀವರಾಶಿಗಳ ಜೊತೆಗೆ ನಮ್ಮ ಒಡನಾಟ, ಭೂಮಿಯ ಮೇಲೆ ನಮಗಿರುವ ಹಕ್ಕಿನಷ್ಟೆ ಇತರ ಜೀವಿ ಸಂಕುಲಗಳಿಗೂ, ಇದೇ ಎಂದು ಕಾಡಿನಿಂದ ನಾಡಿಗೆ ಬಂದು ಆಗಾಗ ಎಚ್ಚರಿಸುತ್ತಿರುತ್ತವೆ.
ಭಾರತದ ವೈವಿಧ್ಯಮಯ ವನ್ಯ ಜೀವಿಗಳ, ಕಾಡು -ಮೇಡುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಸಂವಿಧಾನಿಕವಾಗಿ ಇದೆಲ್ಲವೂ ನಮ್ಮ ಮೂಲಭೂತ ಕರ್ತವ್ಯಗಳಾಗಿವೆ. ಜ್ಞಾನ-ವಿಜ್ಞಾನದ ವಿಕಾಸದ ಹಾದಿಯಲ್ಲಿ ಅಂಬೆಗಾಲಿಡುತ್ತಾ ಇರುವ ನಾವು. ಪರಿಸರ ಸಂರಕ್ಷಣೆಯ ವಿಚಾರದಲ್ಲಿ ತುಸು ಹಿಂದೆ ಬಿದ್ದಿದ್ದೇವೆ. ನಮ್ಮ ಮನೆಯ ಕಸವನ್ನು ನಮ್ಮದೇ ಆಗಿರುವ, ನಮ್ಮದಲ್ಲವೆಂದು ತಿಳಿದು ರಸ್ತೆಗೆ ಬಿಸಾಕುತ್ತಿದ್ದೇವೆ. ಸ್ವಚ್ಛ ಭಾರತ ದಿನ ಕಳೆದಂತೆ ಕಾಗದದಲ್ಲಿ ಮಾತ್ರ, ಉಳಿದು ಧೂಳು ಹಿಡಿಯುತ್ತಿದೆ.
ಬನ್ನಿ ಕೇವಲ ಸ್ವಾತಂತ್ರ ದಿನಾಚರಣೆಗೆ ಸೀಮಿತವಾಗದೆ ಶಾಂತಿ, ಸ್ನೇಹ, ಸೌಹಾರ್ದತೆ, ದೇಶಪ್ರೇಮದಲ್ಲಿ ಮಿಂದೆಳೋಣ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೆ ಸಾಲದು ಪ್ರತಿ ಪ್ರಜೆಗೂ ಸ್ವತಂತ್ರ ಸಿಗುವುದು ಮುಖ್ಯ. ಸದೃಢ ಭಾರತವನ್ನು ಕಟ್ಟುವ ಜಾಗೃತ ಹೆಜ್ಜೆ ನಮ್ಮದೇ ಆಗಿರಲಿ…….. ಅಲ್ವಾ?
ಹರ್ ಘರ್ ಮೇ ತಿರಂಗ, ಹರ್ ಮನ್ ಮೇ ತಿರಂಗ.
ಜೈಹಿಂದ್.

✍️. ನಯನ ಓ ಜೋಗಿ
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು
ಚಿತ್ರದುರ್ಗ