ಶಾಲಾರಂಭದಲ್ಲಿ ಸೇತುಬಂಧ : ಕಲಿಕಾ ಸಾಮಗ್ರಿ ಬಳಸಿಕೊಂಡು ತರಗತಿ ನಡೆಸಲು ಶಿಕ್ಷಣ ಇಲಾಖೆ ಆದೇಶ.

ಬೆಂಗಳೂರು: ವಿದ್ಯಾರ್ಥಿಗಳ ವಯಸ್ಸು ಮತ್ತು ತರಗತಿಗೆ ಅನುಗುಣವಾಗಿ ಕಲಿಕಾಮಟ್ಟ ಮತ್ತು ಸಾಮರ್ಥ್ಯ ಗುರುತಿಸುವ ಮೂಲಕ ಮುಂದಿನ ಹಂತದ ಕಲಿಕೆಗೆ ಸಿದ್ಧಗೊಳಿಸಲು ಶಾಲೆಯ ಆರಂಭದ 30 ದಿನ 1ರಿಂದ 3ನೇ ತರಗತಿಗೆ ಹಾಗೂ 15 ದಿನ 4ರಿಂದ 10ನೇ ತರಗತಿಗೆ ಸೇತುಬಂಧ ಶಿಕ್ಷಣ ನೀಡುವಂತೆ ಶಿಕ್ಷಣ ಇಲಾಖೆಯು ಶಾಲೆಗಳಿಗೆ ಸೂಚನೆ ನೀಡಿದೆ.

ಈ ಕುರಿತು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ತರಗತಿ ಮತ್ತು ವಿಷಯವಾರು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಹಾಗೂ ಪ್ರಥಮ ಭಾಷೆಗಳಾದ ಕನ್ನಡ, ತಮಿಳು, ಉರ್ದು, ಮರಾಠಿ ಮತ್ತು ತೆಲುಗಿಗೆ ಸಂಬಂಧಿ ಸಿದ ಕಲಿಕಾ ಸಾಮಗ್ರಿಗಳನ್ನು ಡಿಎಸ್‌ ಇಆರ್‌ಟಿ ವೆಬ್‌ಸೈಟ್ ನಲ್ಲಿ ಪ್ರಕಟಿಸಿದೆ. ಈ ಸಾಮಗ್ರಿ ಬಳಸಿಕೊಂಡು ಸೇತುಬಂಧ ಕಾರ್ಯಕ್ರಮ ಯಶಸ್ವಿಗೊಳಿಸಲು ಡಿಎಸ್‌ಇಆರ್‌ಟಿ ನಿರ್ದೇಶಕರು ಆದೇಶಿಸಿದ್ದಾರೆ.

2024-25ನೇ ಸಾಲಿಗೆ ಪೂರಕವಾಗಿ ಕನ್ನಡ ಮತ್ತು ಉರ್ದು ಮಾಧ್ಯಮದ ನಲಿ-ಕಲಿ ತರಗತಿಗಳಿಗೆ ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ ವಿದ್ಯಾ ಪ್ರವೇಶ ಹಾಗೂ ಸೇತುಬಂಧ ಚಟುವಟಿಕೆಗಳನ್ನು ಸಿದ್ದಪಡಿಸಿ ನೂತನ ಅಭ್ಯಾಸ ಸಹಿತ ಪಠ್ಯಪುಸ್ತಕಗಳಲ್ಲಿ ಸೇರ್ಪಡೆ ಮಾಡಲಾಗಿದೆ.

8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ‘ಮರು ಸಿಂಚನ’ ಕಾರ್ಯಕ್ರಮದಡಿ ಸಿದ್ದಪಡಿಸಿರುವ ವಿದ್ಯಾರ್ಥಿ ಕೈಪಿಡಿಗಳನ್ನು ನೀಡಲಾಗಿದ್ದು, ಈ ಸಾಹಿತ್ಯದ ಬುನಾದಿ ಹಂತದ ಚಟುವಟಿಕೆಗಳನ್ನು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳ ឥ ಅನುಗುಣವಾಗಿ ಪ್ರತಿ ವಿದ್ಯಾರ್ಥಿಗೆ ಕಲಿಕಾ ತಂತ್ರಗಳನ್ನು ರೂಪಿಸಿ ನಿರಂತರ ಕಲಿಕೆಗೆ ಅನುಕೂಲ ಕಲ್ಪಿಸಲು ಕ್ರಿಯಾ ಯೋಜನೆ ರೂಪಿಸುವುದು ಅತ್ಯವಶ್ಯಕವಾಗಿದೆ.

ಕಲಿಕೆ ಖಾತರಿಪಡಿಸಿಕೊಳ್ಳಲು ಪೂರ್ವ ಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆಗಳನ್ನು ನಡೆಸಲು ಮಾದರಿ ಪ್ರಶ್ನೆಗಳನ್ನು ನೀಡಲಾಗಿದ್ದು, ತಮ್ಮ ಹಂತದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಿ ಮೌಲ್ಯಮಾಪನ ಕೈಗೊಳ್ಳುವುದು ಮತ್ತು ಮಕ್ಕಳಲ್ಲಿ ಅಪೇಕ್ಷಿತ ಕಲಿಕೆಯ ಫಲಗಳ ಕಲಿಕೆಯಾಗಿದೆ ಎಂಬುದನ್ನು ದಾಖಲಿಸಬೇಕು. ವಿದ್ಯಾರ್ಥಿಗಳ ಪ್ರಗತಿಯನ್ನಾಧರಿಸಿ ಶಾಲಾ ಶೈಕ್ಷಣಿಕ ಯೋಜನೆ ಸಿದ್ಧಪಡಿಸಿ ಪ್ರತಿ ಮಗುವಿನ ಕಲಿಕಾ ಪ್ರಗತಿಗೆ ನಿರಂತರ ಅನುಪಾಲನೆ ಮಾಡುವುದು. ಕಲಿಕೆ ಆಧರಿಸಿ ರಸಪ್ರಶ್ನೆ ಲಿಖಿತ ಅಥವಾ ಮೌಖಿಕ ಪ್ರಶೋತ್ತರ, ಸರಳ ಯೋಜನೆಗಳು, ಸಂಭಾಷಣೆ, ಸರಳ ಚಟುವಟಿಕೆಗಳು ಹಾಗೂ ಅಭ್ಯಾಸ ಹಾಳೆಗಳನ್ನು ಪೂರ್ಣಗೊಳಿಸಿ ಗೃಹ ಪಾಠ ಮತ್ತು ಇನ್ನಿತರ ಚಟುವಟಿಕೆಗಳನ್ನು ಆಧರಿಸಿ ಮೌಲ್ಯಮಾಪನ ಮಾಡುವಂತೆ ಸುತ್ತೋಲೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *