COMEDK UGET Result 2024: ಕಾಮೆಡ್‌ ಕೆ ಫಲಿತಾಂಶ ಪ್ರಕಟ; ಬೆಂಗಳೂರಿನ ಬಾಲಸತ್ಯ ಸರವಣನ್ ಫಸ್ಟ್‌ ರ‍್ಯಾಂಕ್‌.

ಬೆಂಗಳೂರು: ಕಾಮೆಡ್‌ ಕೆ ನಡೆಸಿದ್ದ ಯುಜಿಇಟಿ ಪರೀಕ್ಷೆ ಫಲಿತಾಂಶ ಮೇ 24ರ ಶುಕ್ರವಾರ ಮಧ್ಯಾಹ್ನ ಪ್ರಕಟಗೊಂಡಿದೆ. ಬೆಂಗಳೂರಿನ ಬಾಲಸತ್ಯ ಸರವಣನ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಅಭ್ಯರ್ಥಿಗಳು ಪರೀಕ್ಷಾ ಫಲಿತಾಂಶವನ್ನು ಕಾಮೆಡ್‌ಕೆ www.comedk.org ಅಧಿಕೃತ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ. ರ‍್ಯಾಂಕ್‌ ಮತ್ತು ಸ್ಕೋರ್ ಕಾರ್ಡ್‌ಗಳನ್ನು 24ರ ಮಧ್ಯಾಹ್ನ 3 ಗಂಟೆಯಿಂದ ಅಭ್ಯರ್ಥಿಗಳಿಗೆ ಲಭ್ಯವಿರುತ್ತವೆ. ಮೊದಲ 10 ರ‍್ಯಾಂಕ್‌ ಪಡೆದವರಲ್ಲಿ 8 ಅಭ್ಯರ್ಥಿಗಳು ಕರ್ನಾಟಕದವರೇ ಆಗಿದ್ದಾರೆ.

ಕರ್ನಾಟಕದ 150 ಖಾಸಗಿ ಎಂಜಿನಿಯರಿಂಗ್ ಕಾಲೇಜು, ದೇಶದ ಕೆಲವು ಕಡೆ ಇರುವ 40 ಖಾಸಗಿ ವಿವಿಗಳಲ್ಲಿನ ಸುಮಾರು 22 ಸಾವಿರ ಎಂಜಿನಿಯರಿಂಗ್ ಸೀಟುಗಳ ಪ್ರವೇಶಾತಿಗಾಗಿ ಈ ಅರ್ಹತಾ ಪರೀಕ್ಷೆಯನ್ನು ನಡೆಸಲಾಗಿತ್ತು. ದೇಶದ 1,03,799 (ಶೇಕಡಾ 87.96) ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ವಿದ್ಯಾರ್ಥಿಗಳು ತಮ್ಮ ಶ್ರೇಯಾಂಕದ ಪಟ್ಟಿಯನ್ನು ಪರಿಶೀಲಿಸಿಕೊಂಡು ಸ್ಕೋರ್‌ ಕಾರ್ಡ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

2024ನೇ ಸಾಲಿನ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 12 ರಂದು ಪರೀಕ್ಷೆ ನಡೆದಿತ್ತು. ಕಾಮೆಡ್‌ ಕೆ ಕೀ ಉತ್ತರಗಳನ್ನು ಮೇ 21ರಂದು ಬಿಡುಗಡೆ ಮಾಡಿತ್ತು. ದೇಶಾದ್ಯಾಂತ 191 ನಗರಗಳಲ್ಲಿರುವ 264 ಪರೀಕ್ಷಾ ಕೇಂದ್ರಗಳಲ್ಲಿ ಮೂರು ಸೆಷನ್‌ಗಳಲ್ಲಿ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಎಂಜಿನಿಯರಿಂಗ್ ಯುಜಿ ಸೀಟುಗಳನ್ನು ಕೋರಿ 1,18,005 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಸುಮಾರು 1,03,799 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. 35,124 ಮಂದಿ ಕರ್ನಾಟಕದವರು ಮತ್ತು 68,675 ಕರ್ನಾಟಕೇತರ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು.

COMEDK UGET ಫಲಿತಾಂಶ 2024 ಪರಿಶೀಲನೆ ಹೇಗೆ?                    

ಹಂತ 1: ಕಾಮೆಡ್‌ಕೆ ಪರೀಕ್ಷಾ ಪೋರ್ಟಲ್‌ಗೆ ಭೇಟಿ ನೀಡಿ.

ಹಂತ 2: COMEDK UGET 2024 ಫಲಿತಾಂಶದ ಲಾಗಿನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹಂತ 3: ನಿಮ್ಮ ಲಾಗಿನ್ ರುಜುವಾತುಗಳನ್ನು ನಮೂದಿಸಿ – ಅಪ್ಲಿಕೇಶನ್ ಸಂಖ್ಯೆ ಅಥವಾ ಬಳಕೆದಾರ ID ಮತ್ತು ಪಾಸ್‌ವರ್ಡ್ ಮತ್ತು ನಂತರ ಸಲ್ಲಿಸು ಮೇಲೆ ಕ್ಲಿಕ್ ಮಾಡಿ.

ಹಂತ 4: COMEDK UGET ಫಲಿತಾಂಶ 2024 ಪರದೆಯ ಮೇಲೆ ಕಾಣಿಸುತ್ತದೆ.

ಹಂತ 5: ಕೀ ಉತ್ತರವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿ.

ಇಂದಿನಿಂದಲೇ ಕೌನ್ಸೆಲಿಂಗ್‌ ನೋಂದಣಿ ಆರಂಭ

ಕೌನ್ಸೆಲಿಂಗ್ ನೋಂದಣಿ ಮತ್ತು ಡಾಕ್ಯುಮೆಂಟ್ ಅಪ್ಲೋಡ್ ಮೇ 24 ರ ಸಂಜೆ 4 ರಿಂದ ಪ್ರಾರಂಭವಾಗುತ್ತದೆ. ಅಭ್ಯರ್ಥಿಗಳ ಶೇಕಡವಾರು ಅಂಕ ಹಾಗೂ ರ‍್ಯಾಂಕ್‌ ಆಧಾರದ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಿ ಕೌನ್ಸಿಲಿಂಗ್‌ ನಡೆಸುವುದಾಗಿ ಕಾಮೆಡ್‌ಕೆ ತಿಳಿಸಿದೆ. ಕರ್ನಾಟಕದಲ್ಲಿರುವ 150 ಖಾಸಗಿ ಎಂಜಿನಿಯರಿಂಗ್ ಕಾಲೇಜು ಮತ್ತು ದೇಶದ ವಿವಿಧ ಕಡೆ ಇರುವ 40 ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಯಾವ ಕಡೆಯಲ್ಲಾದರೂ ಪ್ರವೇಶ ಪಡೆಯಬೇಕೆಂದರೆ ಇಲ್ಲಿ ನೋಂದಣಿಯನ್ನು ಮಾಡಿಕೊಂಡಿರಬೇಕು.

Source : https://vistaranews.com/education/comedk-uget-result-2024-comed-k-on-may-24-published-result/659154.html

Leave a Reply

Your email address will not be published. Required fields are marked *