ವಿಜಯವಾಡ: ಸಮುದ್ರ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಪ್ರತಿಯೊಬ್ಬರೂ ಬೀಚ್ನಲ್ಲಿ ಮೋಜು-ಮಸ್ತಿ ಮಾಡಲು ಮತ್ತು ಅಲೆಗಳ ಶಬ್ದವನ್ನು ಆನಂದಿಸಲು ಬಯಸುತ್ತಾರೆ. ಆದರೆ, ಅದೇ ಸಮಯದಲ್ಲಿ, ಸಮುದ್ರ ತೀರಕ್ಕೆ ಹೋಗುವಾಗ ತುಂಬಾ ಜಾಗರೂಕರಾಗಿರಬೇಕು. ಇಲ್ಲದೇ ಹೋದರೆ ಸಮುದ್ರ ನೋಡಿದ ಖುಷಿ, ದುರಂತದಲ್ಲಿ ಅಂತ್ಯವಾಗಿಬಿಡುತ್ತದೆ.

ಇತ್ತೀಚೆಗಷ್ಟೇ ಆಂಧ್ರ ಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಅಚ್ಯುತಪುರಂ ಮಂಡಲದ ತಾಂತಾಡಿ ಕಡಲತೀರದಲ್ಲಿ ದುರಂತವೊಂದು ನಡೆದಿದೆ. ಸಮುದ್ರ ನೋಡಲು ಹೋದ ಮೂವರು ಯುವತಿಯರು ನಾಪತ್ತೆಯಾಗಿದ್ದಾರೆ. ಇವರಲ್ಲಿ ಇಬ್ಬರು ಸಾವಿಗೀಡಾಗಿದ್ದು, ಮತ್ತೊಬ್ಬಳ ಸ್ಥಿತಿ ಚಿಂತಾಜನಕವಾಗಿದೆ. ಮೃತರಿಬ್ಬರು ಸಹೋದರಿಯರು ಎಂದು ತಿಳಿದುಬಂದಿದೆ.
ಮಾಕವರಪಾಳ್ಯ ಮಂಡಲದ ಶೆಟ್ಟಿಪಾಳ್ಯ ಮೂಲದ ನೂಕರತ್ನಂ ಹಾಗೂ ತೇಡ ಗ್ರಾಮದ ಕನಕ ದುರ್ಗ ಎಂಬುವರು ಸಿರಿಶಾ ಎಂಬ ಯುವತಿಯೊಂದಿಗೆ ಅಚ್ಯುತಾಪುರ ಮಂಡಲದ ತಾಂತಾಡಿ ಬೀಚ್‌ಗೆ ಬಂದಿದ್ದರು. ಬಹಳ ಕಾಲ ಸಂತೋಷದಿಂದ ಇದ್ದರು. ಆದರೆ, ಅಷ್ಟರಲ್ಲಿ ಅಪಾಯ ಎದುರಾಗಿದೆ. ಕಡಲತೀರದಲ್ಲಿ ಕಳೆದ ಸಂತೋಷದ ಸಮಯವನ್ನು ಸೆರೆಹಿಡಿಯಲು ತಮ್ಮ ಫೋನ್‌ಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದರು. ಸೆಲ್ಫಿ ತೆಗೆಯುವ ಭರದಲ್ಲಿ ಕಾಲು ಜಾರಿ ಆಕಸ್ಮಿಕವಾಗಿ ನೀರಿಗೆ ಬಿದ್ದು ದುರ್ಘಟನೆ ಸಂಭವಿಸಿದೆ.
ಘಟನೆ ವೇಳೆ ಸ್ಥಳದಲ್ಲೇ ಇದ್ದ ಮೀನುಗಾರರು ಮೂವರನ್ನು ರಕ್ಷಿಸಲು ಯತ್ನಿಸಿದರೂ ಇಬ್ಬರು ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಮೃತ ಇಬ್ಬರು ಯುವತಿಯರನ್ನು ಸಹೋದರಿಯರು ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಶೆಟ್ಟಿಪಾಲೆಂ ಗ್ರಾಮದ ನೂಕ ರತ್ನಂ ಹಾಗೂ ಕನಕದುರ್ಗ ಮೃತಪಟ್ಟಿದ್ದು, ಸಿರಿಶಾ ಸ್ಥಿತಿ ಚಿಂತಾಜನಕವಾಗಿದೆ. ಆಕೆಯನ್ನು ವಿಶಾಖಪಟ್ಟಣಂನ ಕೆಜಿಎಚ್‌ಗೆ ಸ್ಥಳಾಂತರಿಸಲಾಗಿದೆ.
ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಡಲತೀರದಲ್ಲಿ ಮೋಜು ಮಾಡಲು ಹೋದ ಇಬ್ಬರು ಸಹೋದರಿಯರು ಶಾಶ್ವತ ಲೋಕಕ್ಕೆ ತೆರಳಿದ್ದು ಅವರ ಕುಟುಂಬಗಳಲ್ಲಿ ಶೋಕ ಮಡುಗಟ್ಟಿದೆ.