ಅಮರಾವತಿ: ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ನಾಲ್ಕನೇ ಬಾರಿಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷವು ಸರಳ ಬಹುಮತ ಗಳಿಸಿ ಅಧಿಕಾರಕ್ಕೆ ಏರಲಿದ್ದಾರೆ.
ಜೂನ್ 9 ರಂದು ಅಮರಾವತಿಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ನಿಗದಿಪಡಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ಎನ್‌ಡಿಎ 168 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಟಿಡಿಪಿ 131, ಜಸಸೇನಾ ಪಕ್ಷ 20 ಮತ್ತು ಬಿಜೆಪಿ 7ರಲ್ಲಿ ಮುಂದಿದೆ.
ಪ್ರಸ್ತುತ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ ಅಥವಾ ವೈಎಸ್‌ಆರ್‌ಸಿಪಿ ಕೇವಲ 17 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜ್ಯಾದ್ಯಂತ ಟಿಡಿಪಿ ಕಾರ್ಯಕರ್ತರು ಬೀದಿಗಿಳಿದು ತಮ್ಮ ಪಕ್ಷದ ಗೆಲುವಿನ ಸಂಭ್ರಮ ಆಚರಿಸುತ್ತಿದ್ದಾರೆ.
ಮೇ 13ರಂದು ಲೋಕಸಭೆ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆಯೂ ನಡೆದಿತ್ತು. ವೈಎಸ್‌ಆರ್‌ಸಿಪಿ ಎಲ್ಲಾ 175 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೆ, ಟಿಡಿಪಿ 144 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಪವನ್ ಕಲ್ಯಾಣ್ ನೇತೃತ್ವದ ಜೆಎಸ್‌ಪಿ 21 ಸ್ಥಾನಗಳಲ್ಲಿ ಮತ್ತು ಬಿಜೆಪಿ 10 ಸ್ಥಾನಗಳಲ್ಲಿ ಸ್ಪರ್ಧಿಸಿವೆ.
ಐದು ವರ್ಷಗಳ ಹಿಂದೆ 2020ರಲ್ಲಿ YSRCP 151 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆಗ ಟಿಡಿಪಿ 23 ಸ್ಥಾನಗಳನ್ನು ಗೆದ್ದುಕೊಂಡಿತ್ತು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಒಂದು ಸ್ಥಾನವನ್ನು ಗೆದ್ದಿರಲಿಲ್ಲ.