ಕಳಪೆ ಫೀಲ್ಡಿಂಗ್, ಬೌಲಿಂಗ್​ಗೆ ಸೋಲಿನ ಬೆಲೆ ತೆತ್ತ ಭಾರತ..!

ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮಹಿಳಾ ತಂಡ, ಭಾರತ ವನಿತಾ ಪಡೆಯನ್ನು 12 ರನ್​ಗಳಿಂದ ಮಣಿಸುವ ಮೂಲಕ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಭಾರತ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ತಂಡ ಮೊದಲ ಬಾರಿಗೆ ಗೆಲುವಿನ ಖಾತೆ ತೆರೆದಿದೆ. ಟಿ20 ಸರಣಿಗೂ ಮುನ್ನ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಏಕೈಕ ಟೆಸ್ಟ್ ಪಂದ್ಯವನ್ನು ಭಾರತ ಕ್ಲೀನ್ ಸ್ವೀಪ್ ಮಾಡಿತ್ತು. ಟಿ20 ಸರಣಿಯಲ್ಲೂ ಭಾರತಕ್ಕೆ ಗೆಲುವಿನ ಶುಭಾರಂಭ ಮಾಡುವ ಅವಕಾಶವಿತ್ತು. ಆದರೆ ಕಳಪೆ ಫೀಲ್ಡಿಂಗ್ ಮತ್ತು ಬೌಲಿಂಗ್​ನಿಂದಾಗಿ ತಂಡ ಸೋಲಿನ ಬೆಲೆ ತೆರಬೇಕಾಯಿತು.

ಭಾರತದ ಕಳಪೆ ಫೀಲ್ಡಿಂಗ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಆರಂಭ ಲಭಿಸಿತು. ಆರಂಭಿಕರಾದ ನಾಯಕಿ ಲಾರಾ ವೊಲ್ವಾರ್ಡ್ಟ್ ಹಾಗೂ ತಜ್ಮಿನ್ ಬ್ರಿಟ್ಸ್ ಮೊದಲ ವಿಕೆಟ್​ಗೆ 50 ರನ್​ಗಳ ಜೊತೆಯಾಟ ನೀಡಿದರು. ಈ ಜೊತೆಯಾಟಕ್ಕೆ ಶ್ರೇಯಾಂಕ ಕೈಚೆಲ್ಲಿದ ಸುಲಭ ಕ್ಯಾಚ್ ಕೂಡ ಕಾರಣವಾಯಿತು. ವಾಸ್ತವವಾಗಿ 3ನೇ ಓವರ್​ನಲ್ಲಿ ತಜ್ಮಿನ್ ಬ್ರಿಟ್ಸ್ ಸುಲಭ ಕ್ಯಾಚ್ ನೀಡಿದ್ದರು. ಆದರೆ ಬ್ಯಾಕ್​ವರ್ಡ್​ ಪಾಯಿಂಟ್​ನಲ್ಲಿ ನಿಂತಿದ್ದ ಶ್ರೇಯಾಂಕ ಸುಲಭ ಕ್ಯಾಚ್ ಚೆಲ್ಲಿದರು. ಜೀವದಾನದ ಲಾಭ ಪಡೆದ ತಜ್ಮಿನ್ ಬ್ರಿಟ್ಸ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು. 33 ರನ್​​ಗಳಿಗೆ ನಾಯಕಿ ಲಾರಾ ವಿಕೆಟ್ ಒಪ್ಪಿಸಿದರೆ, ನಂತರ ಬಂದ ಮರಿಜಾನ್ನೆ ಕಪ್ ಕೂಡ 57 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. 10ನೇ ಓವರ್​ನಲ್ಲಿ ಸ್ಮೃತಿ ಕೈಚೆಲ್ಲಿದ ಕ್ಯಾಚ್ ಕೂಡ ಮರಿಜಾನ್ನೆ ಕಪ್ ಅರ್ಧಶತಕ ಬಾರಿಸಲು ಸಹಾಯಕವಾಯಿತು.

81 ರನ್​ ಚಚ್ಚಿದ ತಜ್ಮಿನ್ ಬ್ರಿಟ್ಸ್

ಇದು ಸಾಲದೆಂಬಂತೆ 16 ನೇ ಓವರ್​ನಲ್ಲಿ ತಜ್ಮಿನ್ ಬ್ರಿಟ್ಸ್ ಎರಡನೇ ಬಾರಿಗೆ ನೀಡಿದ ಸುಲಭ ಕ್ಯಾಚ್​ ಅನ್ನು ವಿಕೆಟ್ ಕೀಪರ್ ರಿಚಾ ಘೋಷ್ ಕೈಚೆಲ್ಲಿದರು. ಇದು ತಂಡಕ್ಕೆ ತುಂಬಾ ದುಬಾರಿಯಾಯಿತು. ಕೊನೆಯಲ್ಲಿ ಉಗ್ರರೂಪ ತಾಳಿದ ತಜ್ಮಿನ್ ಬ್ರಿಟ್ಸ್ 56 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 81 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಹೀಗಾಗಿ ದಕ್ಷಿಣ ಆಫ್ರಿಕಾ ತಂಡ 20 ಓವರ್​ಗಳಲ್ಲಿ ಬರೋಬ್ಬರಿ 189 ರನ್ ಕಲೆಹಾಕಿತು.

ಭಾರತಕ್ಕೂ ಉತ್ತಮ ಆರಂಭ

ಈ ಗುರಿ ಬೆನ್ನಟ್ಟಿದ ಭಾರತಕ್ಕೂ ಉತ್ತಮ ಆರಂಭ ಸಿಕ್ಕಿತು.ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ವೇಗದ ಆರಂಭ ನೀಡಿದರು. ಆದರೆ ಈ ಜೊತೆಯಾಟ ಶಫಾಲಿ ವಿಕೆಟ್ ಪತನದೊಂದಿಗೆ ಅಂತ್ಯಗೊಂಡಿತು. ಆದರೂ ಈ ಇಬ್ಬರು ಮೊದಲ ವಿಕೆಟ್​ಗೆ 56 ರನ್​ಗಳ ಜೊತೆಯಾಟ ನೀಡಿದರು. ಮೂರನೇ ಕ್ರಮಾಂಕದಲ್ಲಿ ಬಂದ ಹೇಮಲತಾ 14 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದಲ್ಲದೆ, ಹೆಚ್ಚು ಡಾಟ್ ಬಾಲ್​ಗಳನ್ನು ಆಡುವ ಮೂಲಕ ಸ್ಮೃತಿಗೆ ಒತ್ತಡ ಹೆಚ್ಚಿಸಿದರು. ಹೀಗಾಗಿ ಹೊಡೆಯಲೇಬೇಕಾದ ಅನಿವಾರ್ಯತೆಯಿಂದ ಸಿಕ್ಸರ್ ಬಾರಿಸುವ ಯತ್ನದಲ್ಲಿ ಸ್ಮೃತಿ ಸ್ಟಂಪ್ ಔಟ್ ಆದರು. ಈ ವೇಳೆಗೆ ಸ್ಮೃತಿ 30 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ 47 ರನ್​ಗಳ ಕಾಣಿಕೆ ನೀಡಿದರು.

ಗೆಲುವಿಗಾಗಿ ಹೋರಾಟ

ಸ್ಮೃತಿ ವಿಕೆಟ್ ಪತನದ ನಂತರ ಜತೆಯಾದ ನಾಯಕಿ ಹರ್ಮನ್​ಪ್ರೀತ್ ಕೌರ್ ಹಾಗೂ ಜಮೀಮಾ ಕೊನೆಯವರೆಗೂ ಗೆಲುವಿಗಾಗಿ ಹೋರಾಡಿದರು. ಆದರೆ ಆಫ್ರಿಕಾ ನೀಡಿದ ಬೃಹತ್ ಮೊತ್ತವನ್ನು ಈ ಇಬ್ಬರಿಗೆ ಸಾಧಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ಹೋರಾಟದ ಇನ್ನಿಂಗ್ಸ್ ಆಡಿದ ಈ ಇಬ್ಬರು 90 ರನ್​​ಗಳ ಜೊತೆಯಾಟವನ್ನಾಡಿದರು. ಈ ವೇಳೆ ಜಮೀಮಾ 30 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 53 ರನ್ ಬಾರಿಸಿದರೆ, ಹರ್ಮನ್​ಪ್ರೀತ್ 29 ಎಸೆತಗಳಲ್ಲಿ 35 ರನ್ ಬಾರಿಸಿ ಅಜೇಯರಾಗಿ ಉಳಿದರು.

Source : https://tv9kannada.com/sports/cricket-news/south-africa-women-beat-indian-women-team-by-12-runs-in-1st-t20i-kannada-news-psr-861472.html

Leave a Reply

Your email address will not be published. Required fields are marked *