Women’s Asia Cup 2024: ಗೆಲ್ಲುವ ಪಂದ್ಯ ಕೈಚೆಲ್ಲಿದ ಪಾಕ್; ಭಾರತ- ಶ್ರೀಲಂಕಾ ನಡುವೆ ಏಷ್ಯಾಕಪ್ ಫೈನಲ್ ಫೈಟ್.

ಶ್ರೀಲಂಕಾದ ದಂಬುಲಾದ ರಂಗಿರಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಆತಿಥೇಯ ಶ್ರೀಲಂಕಾ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಚಾಮರಿ ಅಥಾಪತ್ತು ನಾಯಕತ್ವದ ಶ್ರೀಲಂಕಾ ಮಹಿಳಾ ತಂಡ, ಪಾಕಿಸ್ತಾನ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 140 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಕೊನೆಯ ಓವರ್​ನ 5ನೇ ಎಸೆತದಲ್ಲಿ ಗೆಲುವಿನ ದಡ ಮುಟ್ಟಿತು. ಲಂಕಾ ಪರ ನಾಯಕಿಯ ಇನ್ನಿಂಗ್ಸ್ ಆಡಿದ ಚಾಮರಿ ಅಥಾಪತ್ತು 63 ರನ್ ಬಾರಿಸಿ ತಂಡದ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡರು. ಸೆಮಿಫೈನಲ್ ಗೆದ್ದಿರುವ ಶ್ರೀಲಂಕಾ ತಂಡ ಇದೀಗ ಭಾನುವಾರ ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದೆ.

140 ರನ್​ಗಳ ಸ್ಪರ್ಧಾತ್ಮಕ ಟಾರ್ಗೆಟ್

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಲಭಿಸಿತು. ಆರಂಭಿಕರಾದ ಗುಲ್ ಫಿರೋಜಾ ಮತ್ತು ಮುನೀಬ ಅಲಿ ಮೊದಲ ವಿಕೆಟ್​ಗೆ 61 ರನ್​ಗಳ ಜೊತೆಯಾಟ ನೀಡಿದರು. ಆದರೆ ಈ ಜೊತೆಯಾಟ ಮುರಿಯುವುದರ ಜೊತೆಗೆ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಇತ್ತ ಶ್ರೀಲಂಕಾ ಕೂಡ ಹೆಚ್ಚು ರನ್ ಬಿಟ್ಟುಕೊಡದೆ ಪಾಕಿಸ್ತಾನ ತಂಡವನ್ನು ಬೃಹತ್ ಮೊತ್ತ ದಾಖಲಿಸದಂತೆ ತಡೆಯಿತು. ಪಾಕ್ ಪರ ಗುಲ್ ಫಿರೋಜಾ 25 ರನ್ ಬಾರಿಸಿದರೆ, ಮುನೀಬ ಅಲಿ 37 ರನ್​ಗಳ ಇನ್ನಿಂಗ್ಸ್ ಆಡಿದರು. ಸಿದ್ರಾ ಅಮೀನ್ 10 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ನಾಯಕಿ ನಿದಾ ದರ್ 23 ರನ್ ಬಾರಿಸಿದರು. ಕೊನೆಯಲ್ಲಿ ಅಲಿಯಾ ರಿಯಾಜ್ ಅಜೇಯ 16 ರನ್, ಫಾತಿಮಾ ಸನಾ 23 ರನ್ ಬಾರಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕೆ ಕೊಂಡೊಯ್ದರು.

ಎಡವಿದ ಪಾಕಿಸ್ತಾನ

ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್​ನ ಮೂರನೇ ಎಸೆತದಲ್ಲೇ ವಿಶ್ಮಿ ಗುಣರತ್ನೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಹರ್ಷಿತಾ ಸಮರವಿಕ್ರಮ ಅವರ ಇನ್ನಿಂಗ್ಸ್ ಕೂಡ 12 ರನ್​ಗಳಿಗೆ ಅಂತ್ಯಗೊಂಡಿತು. ಕವಿಶಾ ದಿಲ್ಹಾರಿ ಕೂಡ 17 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಇನ್ನೊಂದು ತುದಿಯಲ್ಲಿ ದಿಟ್ಟ ಹೋರಾಟ ನೀಡಿದ ಲಂಕಾ ನಾಯಕಿ ಚಾಮರಿ ಅಥಾಪತ್ತು 63 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಚಾಮರಿ ಅಥಾಪತ್ತು ಔಟಾದ ಬಳಿಕ ಪಾಕಿಸ್ತಾನ ಮತ್ತೆ ಪಂದ್ಯವನ್ನು ಹಿಡಿತಕ್ಕೆ ತೆಗೆದುಕೊಂಡಿತು. ಆದರೆ 19ನೇ ಓವರ್​ನಲ್ಲಿ ನೀಡಿದ 13 ರನ್​ಗಳು ತುಂಬಾ ದುಬಾರಿಯಾದವು. ಇದು ಮಾತ್ರವಲ್ಲದೆ ಇಡೀ ಪಂದ್ಯದಲ್ಲಿ ಪಾಕ್ ತಂಡ ಮಾಡಿದ ಕಳಪೆ ಫೀಲ್ಡಿಂಗ್, ನೋ ಬಾಲ್​ಗಳು ಸೋಲಿಗೆ ಪ್ರಮುಖ ಕಾರಣವಾದವು.

Source : https://tv9kannada.com/sports/cricket-news/womens-asia-cup-2024-srilanka-women-beat-pakistan-women-by-3-wickets-kannada-news-psr-872875.html

 

Leave a Reply

Your email address will not be published. Required fields are marked *