Health Tips: ಅಲಾರಂ ಆಗದ ಹೊರತು ಎಚ್ಚರ ಆಗೋದಿಲ್ವಾ? ಈ ಅಪಾಯ ತಪ್ಪಿದ್ದಲ್ಲ.

ಬೆಳಿಗ್ಗೆ ಅಲಾರಂ ಆಗದ ಹೊರತು ಎಚ್ಚರಿಕೆಯೇ ಆಗುವುದಿಲ್ಲ ಎಂಬ ಮಾತನ್ನು ನೀವು ಆಗಾಗ ಕೇಳಿರಬಹುದು. ನಮಗೆ ಎಚ್ಚರ ಆಗಬೇಕಾದರೆ ಅಲಾರಂ ಸದ್ದು ನಮ್ಮ ಕಿವಿಗೆ ಬೀಳಬೇಕು ಆಗ ಮಾತ್ರ ನಾವು ಎದ್ದೇಳುತ್ತೇವೆ ಎನ್ನುವವರು ನಮ್ಮ ಮಧ್ಯೆಯೇ ಇದ್ದಾರೆ. ಇದರಿಂದ ನಮಗೆ ನೈಸರ್ಗಿಕವಾಗಿ ಏಳುವ ಕ್ರಮವೇ ತಪ್ಪಿಹೋಗಿದೆ. ನಿಮಗೆ ಅನಿಸಬಹುದು ಹೇಗೆ ಬೆಳಗಾದರೆ ಏನು? ಏಳುವುದು ಮುಖ್ಯ ಎಂದು ಹೇಳಬಹುದು. ಆದರೆ ಅದು ತಪ್ಪು. ನಾವು ಬೆಳಗ್ಗೆ ಏಳುವುದಕ್ಕಾಗಿ ರೂಢಿಸಿಕೊಂಡಿರುವ ಕ್ರಮ ಸರಿಯಾಗಿಲ್ಲ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಯಾಕೆ ಅಲಾರಂ ಇಟ್ಟು ಏಳಬಾರದು? ಇದು ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಎಂಬುದರ ಬಗ್ಗೆ ತಜ್ಞರು ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೈದರಾಬಾದ್ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ. ಸುಧೀರ್ ಕುಮಾರ್ ಅವರು ಈ ವಿಷಯವಾಗಿ ಕೆಲವು ಮಾಹಿತಿಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಹೇಳುವ ಪ್ರಕಾರ “ಅಲಾರಂ ಇಟ್ಟು ಎದ್ದೇಳುವವರು, ನೈಸರ್ಗಿಕವಾಗಿ ಏಳುವವರಿಗಿಂತ (ಅಲಾರಂ ಇಲ್ಲದೆ) ಹೆಚ್ಚಾಗಿ ಬಿಪಿ ಸಮಸ್ಯೆಯಿಂದ ಬಳಲುತ್ತಾರೆ. ಹಾಗಾಗಿಯೇ ಅಲಾರಂ ಇಟ್ಟು ಏಳುವವರಲ್ಲಿ ಇತರರಿಗೆ ಹೋಲಿಸಿದರೆ 74% ಹೆಚ್ಚು ರಕ್ತದೊತ್ತಡ ಸಮಸ್ಯೆಯು ಗಮನಾರ್ಹವಾಗಿ ಏರಿಕೆಯಾಗಿರುವುದು ಕಂಡು ಬಂದಿದೆ. ಅಲ್ಲದೆ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವವರಲ್ಲಿಯೂ (ಬೇಗ ಎಚ್ಚರಗೊಳ್ಳುವವರಲ್ಲಿಯೂ) ಬಿಪಿ ಹೆಚ್ಚಳವು ಹೆಚ್ಚು” ಎಂದು ಅವರು ಹೇಳುತ್ತಾರೆ.

“ಈ ರೀತಿ ಬಿಪಿಯ ಉಲ್ಬಣವು ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ. ಅದರಲ್ಲಿಯೂ ಮೊದಲೇ ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದರೆ ಅಂತವರಲ್ಲಿ ಈ ಅಪಾಯ ಹೆಚ್ಚು. ಗಾಢ ನಿದ್ರೆಯಲ್ಲಿದ್ದಾಗ ಅಲಾರಂ ಶಬ್ದ ನಿಮ್ಮನ್ನು ಇದ್ದಕ್ಕಿದ್ದಂತೆ ಎಚ್ಚರಗೊಳಿಸಬಹುದು ಇದರಿಂದ ನಿಮ್ಮ ದೇಹ ಗಲಿಬಿಲಿಗೊಳ್ಳಬಹುದು. ಜೊತೆಗೆ ಇದು ನಿಮ್ಮ ಒತ್ತಡವನ್ನೂ ಹೆಚ್ಚಿಸಬಹುದು” ಎಂದು ಡಾ. ಸುಧೀರ್ ಹೇಳುತ್ತಾರೆ.

ಹಾಗಾದರೆ ಇದಕ್ಕೆ ಉತ್ತಮ ಪರ್ಯಾಯಗಳು ಯಾವುವು?

  •  ನಿಯಮಿತವಾಗಿ ಅಲಾರಂ ಬಳಸುವುದನ್ನು ತಪ್ಪಿಸಿ.
  • ಸಾಕಷ್ಟು ನಿದ್ರೆ ಮಾಡಿ (7- 8 ಗಂಟೆಗಳು), ಇದು ನೈಸರ್ಗಿಕವಾಗಿ ಅಂದರೆ ಯಾವುದೇ ರೀತಿಯ ಅಲರಾಂ ಇಲ್ಲದೆ ನೀವಾಗಿಯೇ ಎಚ್ಚರಗೊಳ್ಳಲು ಅನುವು ಮಾಡಿಕೊಡುತ್ತದೆ.
  • ಪ್ರತಿದಿನ ನೈಸರ್ಗಿಕವಾದ ಬೆಳಕು ನಿಮ್ಮ ಕೋಣೆಗೆ ಬರಲು ಬಿಡಿ, ಇದರಿಂದ ಮೆದುಳಿನಲ್ಲಿ ಮೆಲಟೋನಿನ್ (ನಿದ್ರೆಯ ಹಾರ್ಮೋನ್) ಉತ್ಪಾದನೆ ಕಡಿಮೆಯಾಗುತ್ತದೆ (ಬೆಳಕಿಗೆ ಒಡ್ಡಿಕೊಳ್ಳುವುದರಿಂದ), ನೀವು ನೈಸರ್ಗಿಕವಾಗಿಯೇ ಎಚ್ಚರಗೊಳ್ಳಲು ಇದು ಅನುವು ಮಾಡಿಕೊಡುತ್ತದೆ.
  • ಪ್ರತಿನಿತ್ಯ ಒಂದು ಸ್ಥಿರವಾದ ನಿದ್ರೆಯ ವೇಳಾಪಟ್ಟಿಯನ್ನು ಕಾಪಾಡಿಕೊಳ್ಳಿ (ಪ್ರತಿ ರಾತ್ರಿ ಒಂದೇ ಸಮಯಕ್ಕೆ ಮಲುಗುವುದು), ಇದು ನಿಮ್ಮ ಸಿರ್ಕಾಡಿಯನ್ ಲಯಕ್ಕೆ ಅನುಗುಣವಾಗಿರುತ್ತದೆ.
  • ನೀವು ಅಲಾರಂ ಬಳಸಲೇ ಬೇಕಾದ ಸಂದರ್ಭದಲ್ಲಿ ಸುಮಧುರ ಅಥವಾ ಹಿತವಾದ ನಿಮಗಿಷ್ಟವಾದ ಸಂಗೀತವನ್ನು ಅಲರಾಂ ಆಗಿ ಇಟ್ಟುಕೊಳ್ಳಿ, ಇದು ಕೇಳಲು ತುಂಬಾ ಆಹ್ಲಾದಕರವಾಗಿರುತ್ತದೆ.

Source : https://tv9kannada.com/health/waking-up-to-an-alarm-in-mornings-can-cause-a-significant-surge-in-blood-pressure-kannada-news-pgt-898523.html

Leave a Reply

Your email address will not be published. Required fields are marked *