ಒತ್ತಡ ನಿರ್ವಹಣೆಯಿಂದ ರಕ್ತದೊತ್ತಡ ನಿಯಂತ್ರಣದವರೆಗೆ, ಪ್ರತಿದಿನ ಪ್ರಾಣಾಯಾಮ ಮಾಡುವುದರಿಂದ ದೇಹಾರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನ.

ಭಾರತದಲ್ಲಿ ಅನಾದಿಕಾಲದಿಂದಲೂ ಯೋಗಾಸನ ಮಾಡುವ ಕ್ರಮ ರೂಢಿಯಲ್ಲಿತ್ತು. ಪ್ರತಿದಿನ ಯೋಗಭಂಗಿಗಳನ್ನು ಅಭ್ಯಾಸ ಮಾಡುವುದರಿಂದ ದೇಹಾರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ. ಯೋಗಭಂಗಿಗಳಲ್ಲಿ ಮಹತ್ವದ್ದು ಪ್ರಾಣಾಯಾಮ. ಪ್ರಾಣಾಯಾಮ ಎನ್ನುವುದು ಉಸಿರಾಟಕ್ಕೆ ಸಂಬಂಧಿಸಿದ ಪ್ರಕ್ರಿಯೆಯಾಗಿದ್ದು, ಪ್ರತಿದಿನ ಇದನ್ನು ಮಾಡುವುದರಿಂದ ದೇಹಾರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ.

ಪ್ರಾಣಾಯಾಮವು ಉಸಿರಾಟಕ್ಕೆ ಸಂಬಂಧಿಸಿ ಪಕ್ರಿಯೆಯಾಗಿದ್ದು, ಇದು ಪ್ರಾಣ ಎಂದರೆ ಉಸಿರಾಟದ ನಿಯಂತ್ರಣ ಕಲಿಸುತ್ತದೆ. ಕುಳಿತುಕೊಂಡೇ ಮಾಡಬಹುದಾದ ಈ ಸರಳ ಯೋಗಭಂಗಿಯಿಂದ ಆರೋಗ್ಯಕ್ಕೆ ಹತ್ತಾರು ಪ್ರಯೋಜನಗಳಿವೆ. ‍ಪ್ರಾಣಾಯಾಮವು ದೇಹ ಹಾಗೂ ಮನಸ್ಸು ಎರಡನ್ನೂ ನಿಯಂತ್ರಣದಲ್ಲಿಡುತ್ತದೆ. ಪ್ರತಿನಿತ್ಯ ಪ್ರಾಣಾಯಾಮ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ವಿವರ ಇಲ್ಲಿದೆ.

ಪ್ರಾಣಾಯಾಮವು ಆಳವಾದ ಮತ್ತು ನಿಯಂತ್ರಿತ ಉಸಿರಾಟವನ್ನು ಉತ್ತೇಜಿಸುವ ಮೂಲಕ ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ಶ್ವಾಸಕೋಶದ ಸ್ವಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆಸ್ತಮಾ, ಬ್ರಾಂಕೈಟಿಸ್‌ ಹೊಂದಿರುವ ಜನರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿ.

ಪ್ರಾಣಾಯಾಮದ 10 ಪ್ರಯೋಜನಗಳು

ಒತ್ತಡ, ಆತಂಕ ಕಡಿಮೆ ಮಾಡುತ್ತದೆ: ಪ್ರಾಣಾಯಾಮಕ್ಕಿರುವ ಅತ್ಯಂತ ಮಹತ್ವದ ಶಕ್ತಿ ಎಂದರೆ ಮನಸ್ಸನ್ನು ಶಾಂತಗೊಳಿಸುವ ಸಾಮರ್ಥ್ಯ. ನಾಡಿ ಶೋಧನದಂತಹ ತಂತ್ರಗಳು ಪ್ಯಾರಾಸಿಂಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ, ಆತಂಕ ನಿವಾರಣೆಗೆ ನೆರವಾಗುತ್ತದೆ.

ಮಾನಸಿಕ ಸ್ವಷ್ಟತೆ, ಗಮನಶಕ್ತಿ ಹೆಚ್ಚಳ: ಪ್ರಾಣಾಯಾಮವನ್ನು ಅಭ್ಯಾಸ ಮಾಡುವ ಮೂಲಕ ಏಕಾಗ್ರತೆ ಮತ್ತು ಮಾನಸಿಕ ಸ್ವಷ್ಟತೆಯನ್ನು ಸುಧಾರಿಸಬಹುದು. ನಿಯಂತ್ರಿತ ಉಸಿರಾಟವು ಮೆದುಳಿಗೆ ಆಮ್ಲಜನಕದ ಹರಿವನ್ನು ಹೆಚ್ಚಿಸುತ್ತದೆ. ನೆನಪಿನ ಶಕ್ತಿ ಹಾಗೂ ಗಮನಶಕ್ತಿ ಶಕ್ತಿ ಹೆಚ್ಚಲು ಕೂಡ ಇದು ಸಹಕಾರಿ. ಒಟ್ಟಾರೆ ಅರಿವಿನ ಕಾರ್ಯವನ್ನು ಸುಧಾರಿಸುವ ಕೆಲಸ ಮಾಡುತ್ತದೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ: ಪ್ರಾಣಾಯಾಮದ ಮೂಲಕ ಆಳವಾಗಿ ಉಸಿರಾಡುವ ಪ್ರಕ್ರಿಯೆಯು ವಾಗಸ್ ನರವನ್ನು ಉತ್ತೇಜಿಸುತ್ತದೆ. ಇದು ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಚಯಾಪಚಯವನ್ನು ಸುಧಾರಿಸಿ ಹೊಟ್ಟೆಯುಬ್ಬರ, ಆಸಿಡ್ ರಿಪ್ಲಕ್ಸ್‌ ಹಾಗೂ ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಪ್ರಾಣಾಯಾಮದ ನಿಯಮಿತ ಅಭ್ಯಾಸವು ನರಮಂಡಲವನ್ನು ಶಾಂತಗೊಳಿಸುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ. ಹೃದಯ ಬಡಿತವನ್ನು ಲಯಕ್ಕೆ ತಂದು, ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ.

ದೇಹವನ್ನು ನಿರ್ವಿಷಗೊಳಿಸುತ್ತದೆ: ಪ್ರಾಣಾಯಾಮವು ಆಮ್ಲಜನಕವನ್ನು ದೇಹಕ್ಕೆ ಸೇರಿಸಿ, ಇಂಗಾಲದ ಡೈ ಆಕ್ಸೈಡ್ ಅನ್ನು ಹೊರ ಹಾಕುವ ಮೂಲಕ ದೇಹದಲ್ಲಿನ ವಿಷಾಂಶವನ್ನು ಹೊರಹಾಕುತ್ತದೆ. ಆ ಅಂತರಿಕ ಶುದ್ಧೀಕರಣವು ಒಟ್ಟಾರೆ ಆರೋಗ್ಯ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಪ್ರತಿರಕ್ಷಣಾ ವ್ಯವಸ್ಥೆಯು ವೃದ್ಧಿಯಾಗುತ್ತದೆ.

ಹೃದಯದ ಆರೋಗ್ಯ ಸುಧಾರಣೆ: ಉಸಿರಾಟದ ಮಾದರಿಗಳನ್ನು ನಿಯಂತ್ರಿಸುವ ಮೂಲಕ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಪ್ರಾಣಾಯಾಮವು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಭ್ರಮರಿ ಮತ್ತು ಅನುಲೋಮ್, ವಿಲೋಮ್‌ನಂತಹ ತಂತ್ರಗಳು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಹೃದಯ ಬಡಿತ ಸ್ಥಿರವಾಗಿರುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಶಕ್ತಿಯ ಮಟ್ಟದ ಹೆಚ್ಚಳ: ಪ್ರಾಣಾಯಾಮವು ಜೀವಕೋಶಗಳಿಗೆ ಆಮ್ಲಜನಕರ ಪೂರೈಕೆಯನ್ನು ಹೆಚ್ಚಿಸುತ್ತದೆ. ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸಿ, ಆಯಾಸವನ್ನು ಕಡಿಮೆ ಮಾಡುತ್ತದೆ. ಇದರಿಂದ ನಾವು ದಿನವಿಡೀ ಜಾಗರೂಕತೆಯಿಂದ ಶಕ್ತಿಯತರಾಗಿ ಇರಲು ಸಾಧ್ಯವಾಗುತ್ತದೆ. ಇದು ಒಟ್ಟಾರೆ ನಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

ಹಾರ್ಮೋನ್‌ಗಳ ಸಮತೋಲನ: ಪ್ರಾಣಾಯಾಮವು ಅಂತಃಸ್ರಾವಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದು ದೇಹದಲ್ಲಿ ಹಾರ್ಮೋನ್ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ. ಥೈರಾಯ್ಡ್ ಸಮಸ್ಯೆಗಳು ಮತ್ತು ಪಿಸಿಓಎಸ್‌ನಂತಹ ಹಾರ್ಮೋನ್‌ಗಳ ಅಸಮತೋಲನ ಹೊಂದಿರುವ ಜನರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿ.

ಭಾವನಾತ್ಮಕ ಸ್ಥಿರತೆಯನ್ನು ಹೆಚ್ಚಿಸುತ್ತದೆ: ಪ್ರಾಣಾಯಾಮವು ದೈಹಿಕ ಆರೋಗ್ಯವನ್ನು ಸುಧಾರಿಸುವುದು ಮಾತ್ರವಲ್ಲ ಭಾವನಾತ್ಮಕ ಯೋಗಕ್ಷೇಮವನ್ನು ಸಹ ಪೋಷಿಸುತ್ತದೆ. ಮನಸ್ಸನ್ನು ಶಾಂತಗೊಳಿಸುವ ಮತ್ತು ನಕಾರಾತ್ಮಕ ಭಾವನೆಗಳನ್ನು ಕಡಿಮೆ ಮಾಡುವ ಮೂಲಕ ಆಂತರಿಕ ಶಾಂತಿ ಮತ್ತು ಭಾವನಾತ್ಮಕ ಸ್ಥಿರತೆಯನ್ನು ಉತ್ತೇಜಿಸುತ್ತದೆ. ಇದರಿಂದ ಜೀವನದ ಸವಾಲುಗಳನ್ನು ನೀವು ಸುಲಭವಾಗಿ ನಿಭಾಯಿಸಬಹುದು.

Source : https://kannada.hindustantimes.com/lifestyle/health-tips-pranayama-10-health-benefits-of-doing-pranayama-every-day-blood-pressure-control-stress-management-rst-181727833003531.html

Leave a Reply

Your email address will not be published. Required fields are marked *