ಚಿತ್ರದುರ್ಗ| ಪತ್ನಿ ಮೇಲಿನ ಸಿಟ್ಟಿಗೆ ಅತ್ತೆ-ಮಾವನ ಬರ್ಬರ ಹತ್ಯೆ: 38 ದಿನದ ನಂತರ ಸಿಕ್ಕಿಬದ್ದ ಪತಿ!

ಚಿತ್ರದುರ್ಗದ ಬೊಮ್ಮಕ್ಕನಹಳ್ಳಿ ಜಮೀನಿನಲ್ಲಿ ದಂಪತಿ ಹತ್ಯೆ ಪ್ರಕರಣದಲ್ಲಿ ಕಳೆದ 38 ದಿನಗಳಿಂದ ನಾಪತ್ತೆಯಾಗಿದ್ದ ಅಳಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೊಮ್ಮಕ್ಕನಹಳ್ಳಿಯಲ್ಲಿ ಸೆಪ್ಟೆಂಬರ್ 19ರ ಸಂಜೆ ಜಮೀನಿಗೆ ಹೋಗಿದ್ದ ಹನುಮಂತಪ್ಪ-ತಿಪ್ಪಮ್ಮ ದಂಪತಿಯನ್ನು ಸಂಜೆಗತ್ತಲಲ್ಲಿ ರಣಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಯಾವುದೋ ಕಾಡು ಪ್ರಾಣಿಯ ದಾಳಿ ಎಂದು ಅಂದಾಜಿಸಲಾಗಿತ್ತು.

ಕೊಲೆಯಾದ ಹನಮಂತಪ್ಪ -ತಿಪ್ಪಮ್ಮ ದಂಪತಿಯ ಪುತ್ರಿ ಹರ್ಷಿತಾಳ ಪತಿ ಮಂಜುನಾಥ್ ನಾಪತ್ತೆ ಆಗಿದ್ದರಿಂದ ಆತನ ಮೇಲೆ ಅನುಮಾನಗೊಂಡು ತನಿಖೆ ನಡೆಸಿ ಮಂಜುನಾಥ್ ನ ಸಹೋದರ ರಘು, ತಂದೆ ಚಂದ್ರಪ್ಪ, ಸಂಬಂಧಿ ಮಲ್ಲಿಕಾರ್ಜುನ ಎಂಬಾತನನ್ನು ಬಂಧಿಸಿದ್ದರು.

ಬಂಧಿತರ ವಿಚಾರಣೆ ವೇಳೆ ಹರ್ಷಿತಾ ತನ್ನ ಪತಿಯ ಜತೆ ಗಲಾಟೆ ಮಾಡಿಕೊಂಡು ಬಂದು ತವರು ಸೇರಿದ್ದಳು. ಇದರಿಂದ ಮಂಜುನಾಥ್ ಮತ್ತು ಇತರರು ಸೇರಿ ಹತ್ಯೆ ಜಮೀನಿಗೆ ತೆರಳಿದ್ದ ದಂಪತಿಯನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿದ್ದರು. ದಂಪತಿಯ ಕೊಲೆಯಾಗಿ 38 ದಿನ ಕಳೆದಿದ್ದರೂ ಮಂಜುನಾಥ್ ತಲೆಮರೆಸಿಕೊಂಡು ಓಡಾಡುತ್ತಿದ್ದ. ಏರ್ ಟೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಮೊಬೈಲ್ ಟ್ರ್ಯಾಕ್ ಬಗ್ಗೆ ತಿಳಿದುಕೊಂಡಿದ್ದರಿಂದ ಮೊಬೈಲ್ ಎಸೆದು ತೆಲಂಗಾಣಕ್ಕೆ ಎಸ್ಕೇಪ್ ಆಗಿದ್ದ.

ಮೊಬೈಲ್ ಟ್ರ್ಯಾಕ್ ಮಾಡಲು ಆಗದ ಕಾರಣ ಪೊಲೀಸರಿಗೆ ಆರೋಪಿಯ ಪತ್ತೆ ಹಚ್ಚುವುದು ಸಾವಾಲಾಗಿ ಪರಿಣಮಿಸಿತ್ತು. ಎಸ್ಪಿ ರಂಜಿತ್ ಬಂಡಾರು 3 ತಂಡಗಳನ್ನು ರಚಿಸಿ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಅಪರಿಚಿತ ವಾಟ್ಸಪ್​ ಕರೆ ಮೂಲಕ ಸ್ನೇಹಿತರನ್ನು ಸಂಪರ್ಕಿಸಿದ್ದ ಮಂಜುನಾಥ್​ ತೆಲಂಗಾಣದ ವಿಜಯವಾಡ ಜಿಲ್ಲೆಯ ಭದ್ರಾದ್ರಿ ಕೊತ್ತಗೊಡೆಂನಲ್ಲಿರುವ ಸುಳಿವು ಸಿಕ್ಕಿತ್ತು. ಪೊಲೀಸರು ಚಾಲಾಕಿ ಆರೋಪಿ ಮಂಜುನಾಥನನ್ನು ತೆಲಂಗಾಣದಿಂದ ಬಂಧಿಸಿ ತಂದಿದ್ದಾರೆ.

ಮೃತರ ಕುಟುಂಬಸ್ಥರು ಕಳೆದ 39 ದಿನಗಳಲ್ಲಿ ಅನೇಕ ಸಲ ಎಸ್ಪಿ ಕಚೇರಿಗೆ ಆಗಮಿಸಿ ಪ್ರಮುಖ ಆರೋಪಿ ಮಂಜುನಾಥ್​ ಬಂಧನಕ್ಕೆ ಮನವಿ ಮಾಡಿದ್ದರು. ಮಂಜುನಾಥ್-ಹರ್ಷಿತಾರ ಇಬ್ಬರು ಮಕ್ಕಳು ಮತ್ತು ಹನುಮಂತಪ್ಪ-ತಿಪ್ಪಮ್ಮ ಕುಟುಂಬ ಅನಾಥರಾಗಿದ್ದಾರೆ. ಮೊಬೈಲ್ ಬಳಸದೇ ಉಳಿದರೆ ತಪ್ಪಿಸಿಕೊಳ್ಳಬಹುದೆಂದು ಭಾವಿಸಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ತುರುವನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source : https://m.dailyhunt.in/news/india/kannada/kannadavahini-epaper-vahikan/patni+melina+sittige+atte+maavana+barbara+hatye+38+dinadha+nantara+sikkibaddha+pati+-newsid-n637065209?listname=topicsList&index=26&topicIndex=0&mode=pwa&action=click

Leave a Reply

Your email address will not be published. Required fields are marked *