ಮೆಲ್ಬರ್ನ್: ಹದಿನಾರು ವರ್ಷದೊಳಗಿನ ಮಕ್ಕಳು ಫೇಸ್ಬುಕ್, ಇನ್ಸ್ಟಾಗ್ರಾಮ್, ಟಿಕ್ಟಾಕ್ ನಂಥ ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸುವ ಕುರಿತು ಕಾನೂನು ಜಾರಿಗೊಳಿಸಲು ಆಸ್ಟ್ರೇಲಿಯಾ ಮುಂದಾಗಿದೆ ಎಂದು ಪ್ರಧಾನಿ ಅಂಥೋನಿ ಆಲ್ಟನೀಸ್ ಹೇಳಿದ್ದಾರೆ. ಅಲ್ಲದೇ ”ಈ ಕಾನೂನು ಜಗತ್ತಿಗೆ ದಾರಿ ದೀಪವಾಗಬಲ್ಲದು,” ಎಂದಿದ್ದಾರೆ.
“ಒಂದೊಮ್ಮೆ 16 ವರ್ಷದೊಳಗಿನ ಮಕ್ಕಳು ಜಾಲತಾಣಗಳಲ್ಲಿ ಖಾತೆ ತೆರೆದರೆ ಅದಕ್ಕೆ ಆಯಾ ಜಾಲತಾಣ ವೇದಿಕೆಗಳೇ ಹೊಣೆ ಎನ್ನುವ ಅಂಶವೂ ಕಾನೂನಿನಲ್ಲಿ ಇರಲಿದೆ. ಜಾಲತಾಣಗಳೇ ವಯಸ್ಸಿನ ನಿರ್ಬಂಧ ಹೇರಬೇಕು ಎಂಬುದು ನಮ್ಮ ಒತ್ತಾಸೆಯಾಗಿದೆ,” ಎಂದು ಪ್ರಧಾನಿ ಆಲ್ಟನೀಸ್ ಹೇಳಿದ್ದಾರೆ.
”ಸಾಮಾಜಿಕ ಮಾಧ್ಯಮವು ನಮ್ಮ ಮಕ್ಕಳಿಗೆ ಕೆಡುಕು ಉಂಟು ಮಾಡುತ್ತಿದೆ. ಇದನ್ನು ಇಲ್ಲಿಗೇ ಅಂತ್ಯಗೊಳಿಸಬೇಕು ಎಂದು ನಿರ್ಧರಿಸಿದ್ದೇನೆ. ನವೆಂಬರ್ 18ರಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ವಿಧೇಯಕ ಮಂಡಿಸಲಾಗುವುದು,” ಎಂದು ಅವರು ಹೇಳಿದ್ದಾರೆ.