ಬೆಳಗಾವಿಯ ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರವಾಸ ಭಾಗ್ಯ: ಹಾಜರಾತಿ ಹೆಚ್ಚಿಸಲು ಶಿಕ್ಷಕನ ವಿನೂತನ ಕೆಲಸ.

ಬೆಳಗಾವಿಯ ಸೋನಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಪ್ರಕಾಶ್ ದೇವಣ್ಣವರ್​ ಅವರು ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ ವಿಮಾನ ಪ್ರವಾಸವನ್ನು ಏರ್ಪಡಿಸಿದ್ದಾರೆ. 17 ವಿದ್ಯಾರ್ಥಿಗಳು ಆಯ್ಕೆ ಆಗಿದ್ದು, ಎರಡೂವರೆ ಲಕ್ಷ ರೂಪಾಯಿ ವೆಚ್ಚದ ಈ ಪ್ರವಾಸದಿಂದ ಶಾಲಾ ಹಾಜರಾತಿಯಲ್ಲಿ ಗಮನಾರ್ಹ ಏರಿಕೆಯಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.

ಬೆಳಗಾವಿ, ನವೆಂಬರ್​ 08: ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳು ಬರುತ್ತಿಲ್ಲ ಎಂಬ ಮಾತಿದೆ. ಹೀಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡುತ್ತಿದೆ. ಶಿಕ್ಷಕರು ಕೂಡ ಮನೆ ಮನೆಗೆ ತೆರಳಿ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವಂತೆ ಮನವಿ ಮಾಡಿದ್ದು ಇದೆ. ಆದರೆ ಇಲ್ಲೊಬ್ಬರು ಶಿಕ್ಷಕರು ಮಕ್ಕಳ ಹಾಜರಾತಿ ಹೆಚ್ಚಿಸುವ ಸಲುವಾಗಿ ವಿನೂತನ ಪ್ರಯತ್ನ ಮಾಡಿದ್ದಾರೆ. ಅದೇನೆಂದರೆ ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ (Flight) ಪ್ರವಾಸ ಭಾಗ್ಯ ಕಲ್ಪಿಸಿದ್ದಾರೆ.

17 ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ ಭಾಗ್ಯ 

ಹೌದು. ಬೆಳಗಾವಿ ತಾಲೂಕಿನ ಸೋನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಕ್ಕಳಿಗೆ ವಿಮಾನ ಪ್ರವಾಸ ಭಾಗ್ಯ ಸಿಕ್ಕಿದೆ. ನಿಯಮಿತವಾಗಿ ಶಾಲೆ ಬರುತ್ತಿದ್ದ ಒಟ್ಟು 17 ವಿದ್ಯಾರ್ಥಿಗಳು ಆಯ್ಕೆ ಮಾಡಲಾಗಿದ್ದು, ಎರಡೂವರೆ ಲಕ್ಷ ರೂ. ಖರ್ಚು ಮಾಡಿ ಶಿಕ್ಷಕ ಪ್ರಕಾಶ್ ದೇವಣ್ಣವರ್​ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ.

ಶಿಕ್ಷಕ ಪ್ರಕಾಶ್ ದೇವಣ್ಣವರ್​​ ವಿದ್ಯಾರ್ಥಿಗಳಿಂದ ತಲಾ ಮೂರು ಸಾವಿರ ರೂ. ಹಣ ಪಡೆದುಕೊಂಡಿದ್ದು, ಇನ್ನೂಳಿದ ಎರಡು ಲಕ್ಷ ರೂ. ಸ್ವಂತ ಹಣ ಖರ್ಚು ಮಾಡಿ ಎರಡು ದಿನದ ಪ್ರವಾಸ ಕರೆದುಕೊಂಡು ಹೋಗಿದ್ದಾರೆ.

ನಿನ್ನೆ ಸಂಜೆ ಬೆಳಗಾವಿಯಿಂದ ಹೈದ್ರಾಬಾದ್ ಹೋಗಿರುವ ಮಕ್ಕಳು. ಹೈದ್ರಾಬಾದ್​​ನಲ್ಲಿ ರಾಮೋಜಿ ಫಿಲ್ಮ್ ಸಿಟಿ, ಚಾರ್ ಮಿನಾರ್, ಗೋಲ್ಕೊಂಡ ಕೋಟೆ ಸೇರಿ ಹಲವು ಕಡೆ ಪ್ರವಾಸ ಮಾಡಲಿದ್ದಾರೆ. ಬಳಿಕ ನಾಳೆ ಬೆಳಗಾವಿಗೆ ವಾಪಾಸ್ ಆಗಲಿದ್ದಾರೆ.

ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಾಗಿ ಆಸಕ್ತಿ ತೋರುತ್ತಿಲ್ಲ. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಕೂಡ ಕಡಿಮೆ ಇದೆ. ಹೀಗಾಗಿ ಹಾಜರಾತಿ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ವಿಮಾನ ಪ್ರವಾಸ ಭಾಗ್ಯವನ್ನು ನೀಡಲಾಯಿತು. ಇದರಿಂದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದು ಶಿಕ್ಷಕ ಪ್ರಕಾಶ್ ದೇವಣ್ಣವರ್​ ಹೇಳಿದ್ದಾರೆ.

Source : https://tv9kannada.com/karnataka/belagavi-innovative-teacher-takes-students-on-flight-to-boost-govt-school-attendance-karnataka-news-in-kannada-ggs-931368.html

Leave a Reply

Your email address will not be published. Required fields are marked *