ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ; ಸ್ಮೃತಿ ಮಂಧಾನಗೆ ತಂಡದ ನಾಯಕತ್ವ.

ಒಂದೆಡೆ ಸತತ ಸೋಲುಗಳಿಂದ ಕಂಗೆಟ್ಟಿರುವ ಭಾರತ ಪುರುಷರ ಕ್ರಿಕೆಟ್ ತಂಡದಲ್ಲಿ ನಾಯಕತ್ವ ಬದಲಾಗಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿರುವಾಗಲೇ, ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ನಾಯಕಿಯ ಬದಲಾವಣೆ ನಡೆದಿದೆ. ಹೌದು, ಭಾರತ ಮಹಿಳಾ ತಂಡ ಇದೇ ಜನವರಿ 10 ರಿಂದ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿದೆ. ಈ ಸರಣಿಗೆ ಇದೀಗ ಭಾರತ ಮಹಿಳಾ ತಂಡವನ್ನು ಪ್ರಕಟಿಸಿದ್ದು, ತಂಡದ ನಾಯಕತ್ವವನ್ನು ಹರ್ಮನ್‌ಪ್ರೀತ್ ಕೌರ್ ಬದಲಿಗೆ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಗೆ ವಹಿಸಲಾಗಿದೆ.

ವಾಸ್ತವವಾಗಿ ತಂಡದ ನಿಯಮಿತ ನಾಯಕಿ ಹರ್ಮನ್​ಪ್ರೀತ್ ಕೌರ್​ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ತಂಡ ಉಪನಾಯಕಿಯಾಗಿರುವ ಸ್ಮೃತಿ ಮಂಧಾನ ಅವರಿಗೆ ನಾಯಕತ್ವ ನೀಡಲಾಗಿದೆ. ಉಪನಾಯಕತ್ವದ ಜವಬ್ದಾರಿವನ್ನು ಆಲ್​ರೌಂಡರ್ ದೀಪ್ತಿ ಶರ್ಮಾ ಅವರಿಗೆ ವಹಿಸಲಾಗಿದೆ. ಈ ಸರಣಿಯಿಂದ ಹರ್ಮನ್​ಪ್ರೀತ್​ ಮಾತ್ರವಲ್ಲದೆ ಅನುಭವಿ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ ಅವರಿಗೂ ವಿಶ್ರಾಂತಿ ನೀಡಲಾಗಿದೆ.

ಮಂಧಾನ ಭವಿಷ್ಯದ ನಾಯಕಿ?

ವಾಸ್ತವವಾಗಿ ಈ ಸರಣಿಗೂ ಮುನ್ನ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲೂ ಮಂಧಾನ ತಂಡವನ್ನು ಮುನ್ನಡೆಸಿದ್ದರು. ಆ ಸರಣಿಯಲ್ಲೂ ಹರ್ಮನ್‌ಪ್ರೀತ್ ಕೌರ್‌ಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಮತ್ತೊಮ್ಮೆ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಹರ್ಮನ್‌ಪ್ರೀತ್ ಕೌರ್‌ಗೆ ವಿಶ್ರಾಂತಿ ನೀಡಲಾಗಿದೆ. ಇದೀಗ ಸ್ಮೃತಿ ಮಂಧಾನ ಅವರನ್ನು ಪೂರ್ಣಾವಧಿ ನಾಯಕಿಯನ್ನಾಗಿ ಮಾಡುವ ಚಿಂತನೆಯಲ್ಲಿದ್ದಾರೆ ಎಂಬುದನ್ನು ಆಯ್ಕೆಗಾರರ ​​ಈ ತಂತ್ರ ಸ್ಪಷ್ಟವಾಗಿ ಸೂಚಿಸುತ್ತಿದೆ.

ನಾಯಕಿ ಸ್ಥಾನ ಪಡೆದ ನಂತರ ಒತ್ತಡಕ್ಕೊಳಗಾಗದೆ ಇರುವುದು ಮಂಧಾನ ಅವರನ್ನು ನಾಯಕಿ ಸ್ಥಾನಕ್ಕೆ ಆಯ್ಕೆ ಮಂಡಳಿ ನೋಡುತ್ತಿರುವುದಕ್ಕೆ ಕಾರಣವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಎಲ್ಲಾ ಮೂರು ಟಿ20 ಪಂದ್ಯಗಳಲ್ಲಿ ಮಂಧಾನ ಅರ್ಧಶತಕ ಗಳಿಸಿದ್ದರು. ಮೊದಲ ಟಿ20ಯಲ್ಲಿ 54 ರನ್, ಎರಡನೇ ಟಿ20ಯಲ್ಲಿ 62 ರನ್ ಮತ್ತು ಮೂರನೇ ಟಿ20ಯಲ್ಲಿ 77 ರನ್ ಗಳಿಸುವ ಮೂಲಕ ಹ್ಯಾಟ್ರಿಕ್ ಅರ್ಧಶತಕ ದಾಖಲಿಸಿದ್ದರು.

ಮಂಧಾನ ಟಿ20 ಸರಣಿಯಲ್ಲಿ ಮಾತ್ರವಲ್ಲದೆ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲೂ ಅರ್ಧಶತಕ ಬಾರಿಸಿದ್ದರು. ಆದರೆ ಮೂರನೇ ಏಕದಿನ ಪಂದ್ಯದಲ್ಲಿ 4 ರನ್ ಗಳಿಸಿ ಔಟಾದರು. ಮಂಧಾನ ನಾಯಕತ್ವದಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಏಕದಿನ ಸರಣಿಯನ್ನೂ ತಂಡ 3-0 ಅಂತರದಲ್ಲಿ ಗೆದ್ದುಕೊಂಡಿತ್ತು. ಇದೀಗ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಇದೇ ರೀತಿಯ ಪ್ರದರ್ಶನವನ್ನು ಭಾರತೀಯ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಭಾರತ-ಐರ್ಲೆಂಡ್ ಏಕದಿನ ಸರಣಿ ವೇಳಾಪಟ್ಟಿ

ಮೊದಲ ಏಕದಿನ- ಜನವರಿ 10, ರಾಜ್‌ಕೋಟ್

ಎರಡನೇ ಏಕದಿನ- 12 ಜನವರಿ, ರಾಜ್‌ಕೋಟ್

ಮೂರನೇ ಏಕದಿನ- 15 ಜನವರಿ, ರಾಜ್‌ಕೋಟ್

ಏಕದಿನ ಸರಣಿಗೆ ಭಾರತ ತಂಡ: ಸ್ಮೃತಿ ಮಂಧಾನ (ನಾಯಕಿ), ದೀಪ್ತಿ ಶರ್ಮಾ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ಉಮಾ ಚೆಟ್ರಿ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ತೇಜಲ್ ಹಸಬ್ನಿಸ್, ರಾಘ್ವಿ ಬಿಸ್ಟ್, ಮಿನ್ನು ಮಣಿ, ಪ್ರಿಯಾ ಮಿಶ್ರಾ, ತನುಜಾ ಕನ್ವರ್, ಟೈಟಾಸ್ ಸಾಧು, ಸೈಮಾ ಠಾಕೋರ್, ಸಯಾಲಿ ಸತ್ಘರೆ.

Source : https://tv9kannada.com/sports/cricket-news/smriti-mandhana-to-lead-as-india-womens-squad-for-ireland-odi-series-psr-959906.html

Leave a Reply

Your email address will not be published. Required fields are marked *