
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ,ಜ.28 : ನಗರದಲ್ಲಿನ ರಸ್ತೆಗಳ ಅಗಲೀಕರಣ ಕಾರ್ಯವನ್ನು ಕೈ ಬಿಟ್ಟು, ನಗರವನ್ನು ವಿಸ್ತರಿಸುವ ಕುರಿತು ಯೋಜನೆ ರೂಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಹಾಗೂ ಜಿಲ್ಲಾಡಳಿತವನ್ನು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದ ರಸ್ತೆಗಳ
ಅಗಲೀಕರಣಕ್ಕೆ ಕನಿಷ್ಟ 300 ರಿಂದ 400 ಕೋಟಿ ರೂ. ವೆಚ್ಚ ಆಗಲಿದೆ. ಆದರೆ ಇದರಿಂದ ಜನರಿಗೆ ಸಂಕಷ್ಟ ತಪ್ಪುವುದಿಲ್ಲ. ಅದರ
ಬದಲಾಗಿ ನಗರವನ್ನು ವಿಸ್ತರಣೆ ಮಾಡಬೇಕು ಇದರಿಂದ ಸಾಕಷ್ಟು ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ನಗರದ ಹೊರ
ಭಾಗದಲ್ಲಿ ಹೊಸ ಡಿಸಿ ಕಚೇರಿ ನಿರ್ಮಾಣ ಆಗುತ್ತಿರುವ ಕಡೆ ಸರ್ಕಾರಿ ಜಾಗವಿದ್ದು, ಆ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಿದರೆ
ನಗರದಲ್ಲಿನ ಸಂಚಾರ ದಟ್ಟಣೆ ಕಡಿಮೆ ಆಗಲಿದೆ ಎಂದು ಹೇಳಿದರು.
ನಗರದ ರಸ್ತೆಗಳನ್ನು ಎಷ್ಟೇ ವಿಶಾಲ ಮಾಡಿದರೂ ನಗರದಲ್ಲಿ ಒತ್ತಡ ಕಡಿಮೆ ಆಗುವುದಿಲ್ಲ. ಶಿವಮೊಗ್ಗ ನಗರದ ಮಾದರಿಯಲ್ಲಿ
ಖಾಸಗಿ ಬಸ್ ನಿಲ್ದಾಣವನ್ನು ಹೊರಗೆ ಹಾಕಿ, ಈಗ ಇರುವ ಜಾಗದಲ್ಲಿ ಮಾರುಕಟ್ಟೆ ಮಾಡಿದರೆ ಅನುಕೂಲ ಆಗುತ್ತದೆ. ಸರ್ಕಾರಿ
ಕಚೇರಿಗಳು ಹೊರಗೆ ಹೋಗುವುದರಿಂದ ಉದ್ಯೋಗ ಸೃಷ್ಟಿ ಆಗುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿಗಳ, ಜನ ಪ್ರತಿನಿಧಿಗಳು ಈ
ನಿಟ್ಟಿನಲ್ಲಿ ಚಿಂತನೆ ಮಾಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಆವೈಜ್ಞಾನಿಕ ಡಿವೈಡರ್ ನಿರ್ಮಾಣ ಮಾಡಿ ಕಾಂಪ್ಲೆಕ್ಸ್
ಮಾಲೀಕರಿಗೆ ತೊಂದರೆ ಕೊಡುವಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ.ನಗರದಲ್ಲಿ ರೋಡ್ ಅಗಲೀಕರಣ ಮಾಡುತ್ತಾ ಹೋದರೆ
ನಗರ ಅಭಿವೃದ್ಧಿ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.
ಮೈಕ್ರೋ ಫೈನಾನ್ಸ್ ಅಂತಹ ಸಂಸ್ಥೆಗಳು ಕೂಲಿ ಕಾರ್ಮಿಕರಿಗೆ ಅಮಿಷ ತೋರಿಸಿ ಹಣ ನೀಡಿ ಅವರನ್ನು ದಿಕ್ಕು ತಪ್ಪಿಸುವ ಕಾರ್ಯ
ಮಾಡುತ್ತಿದ್ದಾರೆ. ಇದರ ಬಗ್ಗೆ ಆರ್ ಬಿ ಐ ಕೂಡಲೇ ಕ್ರಮ ಕೈಗೊಳ್ಳಬೇಕು. ಇತ್ತೀಚಿಗೆ ನಡೆದ ಮೈಕ್ರೋ ಫೈನಾನ್ಸ್ ಹಾವಳಿಯಿಂದ
ಸುಮಾರು 6 ಜನ ಆತ್ಮಹತ್ಯೆಗಿಡಾಗಿದ್ದಾರೆ ಆದ್ದರಿಂದ ಮೈಕ್ರೋ ಫೈನಾನ್ಸ್ ಅಂತಹ ಸಂಸ್ಥೆಗಳ ಬಗ್ಗೆ ಸರ್ಕಾರ ಕೂಡಲೇ ಕ್ರಮ
ಕೈಗೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳಿಗೆ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಜನ ಸಾಮಾನ್ಯರು ಕೂಡ ಮೈಕ್ರೋ ಫೈನಾನ್ಸ್ ಮೂಲಕ ಸಾಲ ಪಡೆದು ತೊಂದರೆಗೆ ಸಿಲುಕಬಾರದು ಬದಲಾಗಿ, ರಾಷ್ಟ್ರೀಕೃತ
ಬ್ಯಾಂಕುಗಳಲ್ಲಿ ಸಾಲ ಪಡೆದರೆ ತೊಂದರೆ ಆಗುವುದಿಲ್ಲ. ಅವರು ಮಾನವೀಯತೆಯಿಂದ ವರ್ತಿಸುತ್ತಾರೆ ಎಂದು ಸಲಹೆ ನೀಡಿ
ಮೈಕ್ರೋ ಫೈನಾನ್ಸ್ಗಳು ಆರ್.ಬಿ.ಐ ಅಡಿಯಲ್ಲಿ ಬರುವುದರಿಂದ ಮೈಕ್ರೋ ಫೈನಾನ್ಸ್ ಗಳ ಬಗ್ಗೆ ಆರ್.ಬಿ.ಐ ಸೂಕ್ತ ಕ್ರಮ
ಕೈಗೊಳ್ಳಬೇಕು.ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡಿಕೆಯ ನಿಯಮಗಳನ್ನು ಸಡಿಲಗೊಳಿಸಿ ಮಾಧ್ಯಮ ವರ್ಗ, ಕೆಳ ವರ್ಗದ
ಜನರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ರಾಮಣ್ಣ, ತಾಲೂಕು ಅಧ್ಯಕ್ಷ ಚಂದ್ರಯಾನ ಹಾಜರಿದ್ದರು.