ಬ್ಯಾಂಕ್ ಗಳಲ್ಲಿ ಕನ್ನಡ ಭಾಷೆ ಬರುವ ಸಿಬ್ಬಂದಿಗಳನ್ನುನೇಮಕ ಮಾಡುವಂತೆ ಕರುನಾಡ ವಿಜಯಸೇನೆ ಒತ್ತಾಯ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ: ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮತ್ತು ಅಂಚೆ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಗ್ರಾಹಕರ ಹತ್ತಿರ ಹಿಂದಿ-ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವುದರಿಂದ ಗ್ರಾಹಕರಿಗೆ ವ್ಯವಹಾರ ಮಾಡಲು ತೊಂದರೆಯಾಗಿದ್ದು, ಕೂಡಲೇ ಕಡ್ಡಾಯವಾಗಿ ಕನ್ನಡ ಬರೆಯಲು ಮತ್ತು ಮಾತನಾಡಲು ಬರುವ ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಎಂದು ಕರುನಾಡ ವಿಜಯಸೇನೆ ಕಾರ್ಯಕರ್ತರು ಒತ್ತಾಯಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಕರ್ನಾಟಕದಾದ್ಯಂತ ಈಗಾಗಲೇ ಹಲವಾರು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಕನ್ನಡ ಭಾಷೆ ಬರದೇ ಇರುವ ಸಿಬ್ಬಂದಿಗಳನ್ನು ಅಂದರೆ ಹೊರ ರಾಜ್ಯದವರನ್ನು ನೇಮಕ ಮಾಡಿಕೊಂಡಿರುವುದು ಮತ್ತು ಕರ್ನಾಟಕದಲ್ಲಿರುವ ಬ್ಯಾಂಕುಗಳಲ್ಲಿ ಕೆಲಸ ಮಾಡುತ್ತಿರುವುದು ಕನ್ನಡಿಗರಿಗೆ ಮತ್ತು ಕನ್ನಡಭಾಷೆಗೆ ಅವಮಾನಿಸಿದಂತಾಗಿದೆ.

ಈಗಾಗಲೇ ಹಲವಾರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮತ್ತು ಅಂಚೆ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕನ್ನಡ ಭಾಷೆ ಮಾತನಾಡಲು, ಬರೆಯಲು ಬರುವುದಿಲ್ಲ. ಗ್ರಾಹಕರಿಗೆ ಸಿಬ್ಬಂದಿಗಳು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವುದರಿಂದ ಬಹಳಷ್ಟು ಗ್ರಾಹಕರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವ್ಯವಹಾರ ಮಾಡಲು ತೊಂದರೆಯಾಗಿರುತ್ತದೆ.  ಕೆಲವು ಗ್ರಾಹಕರು ಎಷ್ಟೋ ಮಂದಿ ಬ್ಯಾಂಕಿಗೆ ಬರದೇ ಖಾಸಗಿ ಬ್ಯಾಂಕುಗಳಲ್ಲಿ ವ್ಯವಹಾರ ಮಾಡುತ್ತಿರುತ್ತಾರೆ. ರಾಜ್ಯ, ಕೇಂದ್ರ ಸರ್ಕಾರಗಳು ಹಾಗೂ ಜಿಲ್ಲಾಡಳಿತ ಕನ್ನಡಗರಿಗೆ ಮತ್ತು ಕರ್ನಾಟಕದಿಂದ ನೇಮಕ ಗೊಂಡಿರುವ ಕನ್ನಡ ಭಾಷೆ ಬರುವ ಸಿಬ್ಬಂದಿಗಳನ್ನು ನಮ್ಮ ಕರ್ನಾಟಕದಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಮತ್ತು ಅಂಚೆ ಕಛೇರಿಗಳಲ್ಲಿ ನೇಮಕ ಮಾಡಬೇಕು.

ಈಗ ಹಾಲಿ ಇರುವ ಬೇರೆ ಬೇರೆ ರಾಜ್ಯಗಳ ಸಿಬ್ಬಂದಿಗಳು ಹಾಲಿ ಕರ್ನಾಟಕದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಎರಡು ಬಾರಿ ಕನ್ನಡ ಪುಸ್ತಕಗಳನ್ನು ಸಂಘಟನೆಯಿಂದ ನೀಡಿ ಕನ್ನಡದಲ್ಲಿಯೇ ಮಾತನಾಡುವಂತೆ ಮತ್ತು ಕನ್ನಡವನ್ನು ಕಲಿಯುವಂತೆ ಸಿಹಿ ತಿನಿಸಿ ಮನವಿ ಮಾಡಿಕೊಳ್ಳಲಾಗಿದೆ. ಬ್ಯಾಂಕ್ ಚಲನಗಳನ್ನು ಸಹ ಹಿಂದಿ ಇಂಗ್ಲೀಷ್‌ನಲ್ಲಿರುವುದನ್ನು ಕನ್ನಡದಲ್ಲಿ ಮುದ್ರಣ ಮಾಡಿಸುವಂತೆ ಕೇಳಿಕೊಂಡಿರುತ್ತೇವೆ. ಆದರೆ ಸಿಬ್ಬಂದಿಗಳು ಇದುವರೆಗೂ ಕನ್ನಡದಲ್ಲಿ ಗ್ರಾಹಕರಿಗೆ ಉತ್ತರಿಸದೇ, ವ್ಯವಹರಿಸದೇ
ಇರುವುದರಿಂದ ಗ್ರಾಹಕರಿಗೆ ತೊಂದರೆಯಾಗಿರುತ್ತದೆ.

ರಾಷ್ಟ್ರೀಕೃತ ಬ್ಯಾಂಕುಗಳು ನಾಮಫಲಕಗಳಾಗಲೀ, ಸಿಬ್ಬಂದಿಗಳು ಕನ್ನಡದಲ್ಲಿ ಮಾತನಾಡುವುದು, ವ್ಯವಹರಿಸುವುದು ಮಾಡುತ್ತಿಲ್ಲ. ರಾಜ್ಯ ಸರ್ಕಾರ ಕಳೆದ ವರ್ಷ ಎಲ್ಲಾ ಅಂಗಡಿ ಮುಂಗಟ್ಟುಗಳು, ಕಛೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕಗಳು 60% ರಷ್ಟು ಕನ್ನಡದಲ್ಲಿರಬೇಕೆಂದು ಆದೇಶಿಸಿರುತ್ತದೆ. ಆದರೂ ಸಹ ಇದುವರೆಗೂ ಕನ್ನಡವನ್ನು ಬಳಸದೇ ಇರುವುದು ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ಮಾಡಿದ ದ್ರೋಹವಾಗಿರುತ್ತದೆ ಎಂದು ಪ್ರತಿಭಟನೆಯಲ್ಲಿ ತಿಳಿಸಿದರು.

ಕೂಡಲೇ ರಾಜ್ಯದ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಭಾಷೆಯನ್ನು ಮಾತನಾಡಲು, ಬರೆಯಲು ಬರುವ ಸಿಬ್ಬಂದಿಗಳನ್ನು ಮಾತ್ರ ನೇಮಕ ಮಾಡುವಂತೆ ಮತ್ತು ಈಗ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಕನ್ನಡವನ್ನು ಕೂಡಲೇ ಕಲಿಯುವಂತೆ ಅಥವಾ ಕನ್ನಡ ಬರದೇ ಇರುವ ಸಿಬ್ಬಂದಿಗಳನ್ನು ನಮ್ಮ ರಾಜ್ಯ ಬಿಟ್ಟು ಬೇರೆ ಕಡೆ ವರ್ಗಾವಣೆ  ಮಾಡಬೇಕು ಎಂದು ಒತ್ತಾಯಿಸಿದರು. ಈ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ರಾಷ್ಟ್ರೀಕೃತ ಬ್ಯಾಂಕುಗಳ ಮುಂದೆ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ. ಶಿವುಕುಮಾರ್, ಪ್ರದಾನ ಕಾರ್ಯದರ್ಶಿ ಗೋಪಿನಾಥ್, ತಾಲೂಕು ಅಧ್ಯಕ್ಷ ಸಂತೋಷ್, ಜಿಲ್ಲಾ ಸಂಚಾಲಕ ನಾಗೇಶ್, ನಗರ ಅಧ್ಯಕ್ಷ ಅವಿನಾಶ್ ಸೇರಿದಂತೆ ಕರುನಾಡ ವಿಜಯಸೇನೆ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *