‘ಭಾರತ ನಮಗೆ ಶೇ 100ಕ್ಕಿಂತ ಹೆಚ್ಚು ಆಟೋ ಸುಂಕ ವಿಧಿಸುತ್ತಿದೆ’: ಏ.2ರಿಂದ ಪ್ರತಿ ಸುಂಕ ಜಾರಿ- ಟ್ರಂಪ್‌ ಘೋಷಣೆ.

TRUMP TARIFFS : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತ, ಚೀನಾ ಮತ್ತಿತರ ದೇಶಗಳ ವಿರುದ್ಧ ಪ್ರತಿ ಸುಂಕ ವಿಧಿಸುವ ಘೋಷಣೆ ಮಾಡಿದ್ದಾರೆ.

ನ್ಯೂಯಾರ್ಕ್‌(ಯುಎಸ್‌ಎ): “ಭಾರತ, ಚೀನಾ ಸೇರಿದಂತೆ ಇತರೆ ದೇಶಗಳು ನಮ್ಮ ಉತ್ಪನ್ನಗಳಿಗೆ ಹೆಚ್ಚು ಸುಂಕ ವಿಧಿಸುತ್ತಿವುದು ನ್ಯಾಯವಲ್ಲ” ಎಂದು ಟೀಕಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಇದಕ್ಕೆ ಪ್ರತಿ ಸುಂಕ ವಿಧಿಸುವ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ. ಈ ಸುಂಕಗಳು ಏಪ್ರಿಲ್‌ 2ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಅವರು ಮಾತನಾಡಿದರು.

“ನಮ್ಮಿಂದ ಆಮದು ಮಾಡಿಕೊಳ್ಳುತ್ತಿರುವ ಸರಕುಗಳಿಗೆ ವಿದೇಶಗಳು ಹಾಕುತ್ತಿರುವ ಸುಂಕಗಳಿಗೆ ಅನುಗುಣವಾಗಿ ನಾವು ಅವರಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಪ್ರತಿ ಸುಂಕು ವಿಧಿಸುತ್ತೇವೆ” ಎಂದು ಅವರು ಹೇಳಿದ್ದಾರೆ. “ಇತರೆ ದೇಶಗಳು ನಮ್ಮ ಮೇಲೆ ದಶಕಗಳಿಂದ ಸುಂಕ ಹಾಕುತ್ತಿವೆ. ಈಗ ನಾವು ಅವರ ಮೇಲೆ ಸುಂಕು ಹಾಕುವ ಸರದಿ ಬಂದಿದೆ. ಯುರೋಪಿಯನ್ ಯೂನಿಯನ್, ಚೀನಾ, ಬ್ರೆಜಿಲ್, ಭಾರತ, ಮಕ್ಸಿಕೋ ಮತ್ತು ಕೆನಡಾ ಸೇರಿದಂತೆ ಹಲವು ದೇಶಗಳು ನಾವು ಅವರಿಗೆ ವಿಧಿಸುವ ತೆರಿಗೆಗಿಂತಲೂ ಅದೆಷ್ಟೋ ಹೆಚ್ಚಿನ ಪ್ರಮಾಣದಲ್ಲಿ ಸುಂಕ ಹಾಕುತ್ತಿದ್ದಾರೆ. ಇದು ನ್ಯಾಯವಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಭಾರತ ನಮ್ಮ ವಾಹನಗಳಿಗೆ ಶೇ.100ಕ್ಕೂ ಹೆಚ್ಚು ಸುಂಕ ವಿಧಿಸುತ್ತದೆ” ಎಂದು ಅವರು ಇದೇ ವೇಳೆ ತಿಳಿಸಿದರು. ಕಳೆದ ಫೆಬ್ರವರಿಯಲ್ಲಿ, ಅಧ್ಯಕ್ಷ ಟ್ರಂಪ್ ಮಾತನಾಡುತ್ತಾ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಭಾರತ ಮತ್ತು ಚೀನಾ ವಿರುದ್ಧ ಪ್ರತಿ ಸುಂಕ ಹೇರಲಿದೆ ಎಂದಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡ ವೇಳೆಯಲ್ಲೂ ಟ್ರಂಪ್‌ ಈ ವಿಚಾರವನ್ನು ಸ್ಪಷ್ಟಪಡಿಸಿದ್ದರು. ವಾಷ್ಟಿಂಗ್ಟನ್‌ನ ಪ್ರತಿತೆರಿಗೆಯಿಂದ ಭಾರತವೂ ಹೊರತಾಗಿರಲಿಲ್ಲ. ಸುಂಕದ ವಿಚಾರವಾಗಿ ನನ್ನೊಂದಿಗೆ ಯಾರೂ ವಾದ ಮಾಡಲು ಸಾಧ್ಯವಿಲ್ಲ” ಎಂದಿದ್ದರು.

“ನಮ್ಮ ಉತ್ಪನ್ನಗಳ ಮೇಲೆ ಚೀನಾ ದುಪ್ಪಟ್ಟು ಸಂಕು ಹಾಕುತ್ತಿದೆ. ದಕ್ಷಿಣ ಕೊರಿಯಾ ಸರಾಸರಿ ನಾಲ್ಕು ಪಟ್ಟು ಸುಂಕ ಹಾಕುತ್ತಿದೆ. ನಾವು ದಕ್ಷಿಣ ಕೊರಿಯಾಗೆ ಮಿಲಿಟರಿ ಮತ್ತು ಇತರೆ ಹಲವು ರೀತಿಯಲ್ಲಿ ಸಹಕಾರ ನೀಡುತ್ತಿದ್ದೇವೆ. ಆದರೆ ಆಗುತ್ತಿರುವುದೇನು? ಈ ವ್ಯವಸ್ಥೆ ಅಮೆರಿಕಕ್ಕೆ ನ್ಯಾಯಯುವತವಾಗಿಲ್ಲ” ಎಂದು ಹೇಳಿದ್ದಾರೆ.

“ಹೀಗಾಗಿ ಏಪ್ರಿಲ್ 2ರಿಂದ ಪ್ರತಿ ಸುಂಕ ಜಾರಿಗೆ ಬರಲಿದೆ. ಅವರು ನಮ್ಮ ಮೇಲೆ ಹೇಗೆ ಸುಂಕ ಹಾಕುತ್ತಾರೋ ಅದರಂತೆ ನಾವೂ ಹಾಕಲಿದ್ದೇವೆ. ಅವರ ತೆರಿಗೆಗೆ ಪ್ರತಿಯಾಗಿ ನಮ್ಮ ತೆರಿಗೆ ಇರುತ್ತದೆ. ಒಂದು ವೇಳೆ ಅವರು ನಮ್ಮನ್ನು ಅವರ ಮಾರುಕಟ್ಟೆಯಿಂದ ಹೊರಗಿಡಲು ಹಣಕಾಸೇತರ ಸುಂಕ ಪದ್ಧತಿ ಬಳಸಿದರೆ, ನಾವೂ ನಮ್ಮ ಮಾರುಕಟ್ಟೆಯಿಂದ ಅವರನ್ನು ಹೊರಡಗಿಡಲು ಅದೇ ವಿಧಾನವನ್ನು ಬಳಸುತ್ತೇವೆ” ಎಂದು ಟ್ರಂಪ್ ಎಚ್ಚರಿಸಿದ್ದಾರೆ.

Source : https://www.etvbharat.com/kn/!international/donald-trump-announces-reciprocal-tariffs-against-india-and-china-kas25030501505

Leave a Reply

Your email address will not be published. Required fields are marked *