ನಕ್ಕಾಗ ಹಲ್ಲುಗಳು ಬೆಳ್ಳಗೆ ಹೊಳೆಯಬೇಕೆಂಬ ಬಯಕೆ ಯಾರಿಗಿರುವುದಿಲ್ಲ? ಅದಕ್ಕಾಗಿ ನಮ್ಮ ಮಿತಿಯಲ್ಲಿ ಒಂದಷ್ಟು ಪ್ರಯತ್ನಗಳನ್ನ ಮಾಡುತ್ತಿರುತ್ತೇವೆ. ವೈಟ್ನಿಂಗ್ ಟೂತ್ ಪೇಸ್ಟ್ಗಳಿಂದ ಹಿಡಿದು ಸೋಡಾ, ಟೀತ್ ವೈಟ್ನರ್ಗಳನ್ನು (Teeth Whitening) ಬಳಸುವವರೆಗೆ ಹಲವು ಪ್ರಯೋಗಗಳನ್ನೂ ಮಾಡಿರುತ್ತೇವೆ.

ಆದರೆ ಇವುಗಳಿಂದ ನಮ್ಮ ಹಲ್ಲುಗಳ ರಕ್ಷಾ ಕವಚವಾದ ಎನಾಮಲ್ ಹಾಳಾಗುವುದೇ? ಹಲ್ಲುಗಳು ದುರ್ಬಲ ವಾಗುತ್ತವೆಯೇ? ಇನ್ನಾವುದಾದರೂ ಅಡ್ಡ ಪರಿಣಾಮಗಳು ಇವೆಯೇ? ಹೀಗೆ ಹಲವು ಪ್ರಶ್ನೆಗಳು ನಮ್ಮ ಮನದಲ್ಲಿ ಇರಬಹುದು. ಇವುಗಳಿಗೆ ಉತ್ತರ ಇಲ್ಲಿದೆ.
ವೈಟ್ನಿಂಗ್ ಟೂತ್ಪೇಸ್ಟ್ನಿಂದ ಹಲ್ಲುಗಳು ಬೆಳ್ಳಗಾಗುತ್ತವ?
ಈ ಪೇಸ್ಟ್ಗಳಲ್ಲಿರುವ ಲಘುವಾದ ಅಬ್ರೇಸಿವ್ ಅಥವಾ ಅಪಘರ್ಷಕಗಳು ದಂತಪಂಕ್ತಿಯ ಮೇಲಿರುವ ಕಲೆಗಳನ್ನು ಕ್ರಮೇಣ ತಿಳಿಯಾಗಿಸಬಲ್ಲವು. ಆದರೆ ಅದಕ್ಕಿಂತ ಹೆಚ್ಚಾಗಿ ಹಲ್ಲುಗಳು ಬೆಳ್ಳಗೆ ಹೊಳೆಯುವಂತೆ ಮಾಡುವುದಕ್ಕೆ ಇವುಗಳಿಂದ ಸಾಧ್ಯವಿಲ್ಲ.
ಬೇಕಿಂಗ್ ಸೋಡಾ, ಲಿಂಬೆ ರಸಗಳಿಂದ ಹಲ್ಲು ಬೆಳ್ಳಗಾಗುತ್ತದೆ?
ನಿಂಬೆ ರಸವನ್ನು ಪದೇ ಪದೆ ಉಪಯೋಗಿಸಿದರೆ, ಅದಲ್ಲಿರುವ ಆಮ್ಲೀಯ ಅಂಶದಿಂದ ಹಲ್ಲುಗಳ ಎನಾಮಲ್ ದುರ್ಬಲ ಆಗುತ್ತದೆ. ಹಾಗಾಗಿ ಇದು ಖಂಡಿತ ಸೂಕ್ತವಲ್ಲ. ಅಡುಗೆ ಸೋಡಾದಲ್ಲೂ ಅಪಘರ್ಷಕ ಗುಣಗಳಿವೆ. ಹಾಗಾಗಿ ಈ ಎರಡೂ ವಸ್ತುಗಳನ್ನು ದೀರ್ಘಕಾಲ ಉಪಯೋಗಿಸಿದರೆ ಹಲ್ಲುಗಳು ಹಾಳಾಗುವುದು ನಿಶ್ಚಿತ.
ವೈಟ್ನಿಂಗ್ ಚಿಕಿತ್ಸೆಗಳೆಲ್ಲ ಒಂದೇ, ವ್ಯತ್ಯಾಸವಿಲ್ಲ
ಯಾವುದೇ ವೈಟ್ನಿಂಗ್ ಚಿಕಿತ್ಸೆಗಳು ಶಾಶ್ವತವಲ್ಲ, ಒಂದಿಷ್ಟು ದಿನಗಳ ನಂತರ ಹಲ್ಲು ತನ್ನ ಮೂಲ ಬಣ್ಣಕ್ಕೆ ಮರಳುತ್ತದೆ. ಆದರೆ ದಂತ ವೈದ್ಯರಲ್ಲೇ ಹೋಗಿ ಚಿಕಿತ್ಸೆ ಮಾಡಿಸಿಕೊಂಡರೆ, ಹಲ್ಲು ಹೆಚ್ಚು ದಿನಗಳ ಕಾಲ ಬಿಳಿಯಾಗಿ ಉಳಿದೀತು. ಔಷಧಿ ಅಂಗಡಿಗಳಲ್ಲಿ ದೊರೆಯುವ ಸ್ಟ್ರಿಪ್ ಮತ್ತು ಜೆಲ್ಗಳಿಂದ ಸಿಗುವ ಆಯಸ್ಸು ಇನ್ನೂ ಕಡಿಮೆ ಇರಬಹುದು.
ಹಲ್ಲುಗಳು ಬೆಳ್ಳಗೇ ಉಳಿಯುವಂತೆ ಮಾಡುವ ಚಿಕಿತ್ಸೆಯಿದೆ
ನಮ್ಮ ಹಲ್ಲುಗಳ ನೈಸರ್ಗಿಕ ಬಣ್ಣವನ್ನು ಶಾಶ್ವತವಾಗಿ ಬದಲಾಯಿಸುವುದು ಸಾಧ್ಯವಿಲ್ಲ. ಹಾಗಾಗಿ ಯಾವುದೇ ಬಿಳಿಯಾಗಿಸುವ ಚಿಕಿತ್ಸೆ ಒಂದಿಷ್ಟು ದಿನಗಳ ಕಾಲವಷ್ಟೆ ಉಳಿಯುತ್ತದೆ. ಆದರೆ ಕಾಫಿ, ಟೀ, ರೆಡ್ ವೈನ್, ತಂಬಾಕು ಮುಂತಾದವುಗಳು ದಂತಪಂಕ್ತಿಗಳು ಬಣ್ಣಗೇಡಾಗುವುದಕ್ಕೆ ಇನ್ನಷ್ಟು ಸಹಾಯ ಮಾಡುತ್ತವೆ. ಹಾಗಾಗಿ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಗಮನ ನೀಡಿ.
ಹಲ್ಲು ಬಿಳಿಯಾಗಿಸಿದರೆ ಎನಾಮಲ್ ಹಾಳಾಗುತ್ತದೆ
ಈ ವಿಷಯದಲ್ಲಿ ಸ್ವಯಂ ವೈದ್ಯ ಮಾಡಿಕೊಂಡರೆ ಹಲ್ಲುಗಳ ರಕ್ಷಾ ಕವಚವನ್ನು ದುರ್ಬಲ ಮಾಡಿಕೊಳ್ಳುವ ಸಾಧ್ಯತೆಯಿದೆ. ಆದರೆ ದಂತ ವೈದ್ಯರಲ್ಲಿಗೆ ಹೋಗಿ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆದುಕೊಂಡರೆ ಸಮಸ್ಯೆ ಆಗಲಿಕ್ಕಿಲ್ಲ. ಹಾಗಾಗಿ ಸಿಕ್ಕಿದೆಲ್ಲ ಹಲ್ಲುಗಳಿಗೆ ಹಾಕಿ ಉಜ್ಜಬೇಡಿ, ಸಮಸ್ಯೆಗೆ ನಾಂದಿ ಆದೀತು.
ಬಿಳಿಯಾಗಿಸುವ ಚಿಕಿತ್ಸೆಯಿಂದ ಸಂವೇದನೆ ಹೆಚ್ಚುತ್ತವೆ
ಹಲ್ಲುಗಳನ್ನು ಬಿಳಿಯಾಗಿಸುವ ಚಿಕಿತ್ಸೆಯಿಂದ ದಂತಪಂಕ್ತಿಗಳಲ್ಲಿ ಸಂವೇದನೆ ಅಥವಾ ಸೆನ್ಸಿಟಿವಿಟಿ ಹೆಚ್ಚುವ ಸಾಧ್ಯತೆಯಿದೆ. ಆದರೆ ತಜ್ಞರ ಪ್ರಕಾರ, ಅದು ತಾತ್ಕಾಲಿಕ ಮತ್ತು ಲಘು ವಾಗಿರುತ್ತದೆ. ಕೆಲವೇ ದಿನಗಳಲ್ಲಿ ಇದು ಶಮನ ಆಗಬೇಕು. ಹಾಗಾಗದಿದ್ದರೆ, ವೈದ್ಯರಲ್ಲಿ ಸಲಹೆ ಕೇಳ ಬೇಕಾಗುತ್ತದೆ.
Source: Vishwavani