Health Tips: ಹಿಮೋಗ್ಲೋಬಿನ್‌ ಹೆಚ್ಚಿಸುವ ಆಹಾರಗಳು ಗೊತ್ತೇ?

Hemoglobin Rich Foods: ಹಿಮೋಗ್ಲೋಬಿನ್‌ ಕಡಿಮೆಯಾದರೆ ಅದನ್ನು ರಕ್ತಹೀನತೆ ಅಥವಾ ಅನೀಮಿಯ ಎಂದು ಕರೆಯಲಾಗುತ್ತದೆ. ಮೊದಲಿಗೆ ಕೆಲವು ಪೂರಕಗಳನ್ನು ವೈದ್ಯರು ನೀಡಬಹುದು. ಆದರೆ ಇದನ್ನು ಜೀವನವಿಡೀ ಆಹಾರದ ಮೂಲಕವೇ ಸಮತೋಲನದಲ್ಲಿ ಇರಿಸಿ ಕೊಳ್ಳಬೇಕು. ಯಾವ ಆಹಾರದ ಮೂಲಕ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ಗೊತ್ತೇ?

Health Tips: ಹಿಮೋಗ್ಲೋಬಿನ್‌ (Hemoglobin) ಬಗ್ಗೆ ಎಲ್ಲರೂ ಕೇಳಿರುತ್ತೇವೆ. ಅದರ ಮಟ್ಟ ಕಡಿಮೆಯಾಗಿದೆಯೆಂದು ಮಾತ್ರೆ ನುಂಗುವವರನ್ನೂ ಕಂಡಿರುತ್ತೇವೆ. ಆದರೆ ಅದು ಕಡಿಮೆಯಾದರೆ ಸಮಸ್ಯೆಯೇನು ಎಂಬುದು ಗೊತ್ತಿರುವುದಿಲ್ಲ. ಹಿಮೋಗ್ಲೋಬಿನ್‌ ಎಂದರೆ ಕೆಂಪುರಕ್ತ ಕಣಗಳಲ್ಲಿರುವ ಒಂದು ಬಗೆಯ ಪ್ರೊಟೀನ್‌. ಇದರ ಕೆಲಸದ ಬಗ್ಗೆ ಚುಟುಕಾಗಿ ಹೇಳಬೇಕೆಂದರೆ, ದೇಹದಲ್ಲಿ ಆಮ್ಲಜನಕದ ಮೇಲುಸ್ತುವಾರಿ ನೋಡಿಕೊಳ್ಳುವ ವಿಭಾಗ ಇದರದ್ದು. ಈ ವಿಭಾಗದಲ್ಲಿ ಎಡವಟ್ಟಾದರೆ ಉಳಿದೆಲ್ಲ ವಿಭಾಗದಲ್ಲೂ ಏರುಪೇರು ಉಂಟಾಗುತ್ತದೆ. ಹಾಗಾಗಿ ಇದರ ಮಟ್ಟದಲ್ಲಿ ತೀರಾ ಏರುಪೇರು ಆಗುವಂತಿಲ್ಲ. ಹಿಮೋಗ್ಲೋಬಿನ್‌ ಕಡಿಮೆಯಾದರೆ ಅದನ್ನು ರಕ್ತಹೀನತೆ ಅಥವಾ ಅನೀಮಿಯ ಎಂದು ಕರೆಯಲಾಗುತ್ತದೆ. ಮೊದಲಿಗೆ ಕೆಲವು ಪೂರಕಗಳನ್ನು ವೈದ್ಯರು ನೀಡಬಹುದು. ಆದರೆ ಇದನ್ನು ಜೀವನವಿಡೀ ಆಹಾರದ (Health Tips) ಮೂಲಕವೇ ಸಮತೋಲನದಲ್ಲಿ ಇರಿಸಿಕೊಳ್ಳಬೇಕು. ಯಾವ ಆಹಾರದ ಮೂಲಕ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ಗೊತ್ತೇ?

ಕಬ್ಬಿಣಯುಕ್ತ ಆಹಾರಗಳು: ಆಹಾರದಲ್ಲಿ ಕಬ್ಬಿಣದಂಶ ಹೆಚ್ಚಿದ್ದರೆ, ರಕ್ತಹೀನತೆಯನ್ನು ನಿವಾರಿಸಲು ನೆರವಾಗುತ್ತದೆ. ಮೀನು, ಕೆಂಪು ಮಾಂಸ, ಚಿಕನ್‌, ಕಾಳುಗಳು, ಬೇಳೇಗಳು, ತೋಫು, ಹಸಿರು ಸೊಪ್ಪು ಮತ್ತು ತರಕಾರಿಗಳು, ಬ್ರೊಕೊಲಿ, ಒಣದ್ರಾಕ್ಷಿ, ಎಪ್ರಿಕಾಟ್‌ನಂಥವು ಆಹಾರದಲ್ಲಿರಲಿ.

ವಿಟಮಿನ್‌ ಸಿ: ಕಬ್ಬಿಣಯುಕ್ತ ಆಹಾರವನ್ನೇನೋ ತಿನ್ನುತ್ತೀರಿ. ಇದು ಸರಿಯಾಗಿ ಹೀರಲ್ಪಡುವುದಕ್ಕೆ ವಿಟಮಿನ್‌ ಸಿ ಅಂಶ ಅಗತ್ಯ. ಹಾಗಾಗಿ ಸಿಟ್ರಸ್‌ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ, ನಿಂಬೆಯಂಥವು, ಎಲ್ಲಾ ರೀತಿಯ ಬೆರ್ರಿಗಳು, ಕಿವಿ ಹಣ್ಣು, ಕ್ಯಾಪ್ಸಿಕಂ, ಟೊಮೇಟೊ ಇತ್ಯಾದಿಗಳು ದೈನಂದಿನ ಆಹಾರದಲ್ಲಿ ಬೇಕು.

ಫೋಲೇಟ್‌: ಹಿಮೋಗ್ಲೋಬಿನ್‌ ಉತ್ಪಾದನೆಯಲ್ಲಿ ವಿಟಮಿನ್‌ ಬಿ9 ಅಥವಾ ಫೋಲೇಟ್‌ ಪ್ರಧಾನ ಕೆಲಸ ಮಾಡುತ್ತದೆ. ಪಾಲಕ್‌ ಸೊಪ್ಪು, ಬ್ರೊಕೊಲಿ, ಅವಕಾಡೊ ಅಥವಾ ಬೆಣ್ಣೆ ಹಣ್ಣು, ಕಿತ್ತಳೆ ಹಣ್ಣಿನಂಥವು ಅಗತ್ಯವಾಗಿ ಬೇಕು. ಇಂಥ ಸತ್ವಗಳಿಗೆ ಒಂದಕ್ಕಿಂತ ಹೆಚ್ಚಿನ ಕೆಲಸ ಮಾಡುವ ಸಾಮರ್ಥ್ಯವಿದೆ. ಹಾಗಾಗಿ ಇವುಗಳನ್ನು ತಪ್ಪದೆ ತಿನ್ನಿ.

ಬೀಟ್‌ರೂಟ್‌: ಇದೊಂದು ತರಕಾರಿಯಿಂದ ಹಲವು ರೀತಿಯ ಅನುಕೂಲಗಳು ದೊರೆಯುತ್ತವೆ. ಇದರಲ್ಲಿ ಕಬ್ಬಿಣದಂಶ, ಫಾಲಿಕ್‌ ಆಮ್ಲ ಮತ್ತು ಪೊಟಾಶಿಯಂ ಒಟ್ಟಿಗೇ ದೊರೆಯುತ್ತದೆ. ಇವೆಲ್ಲವೂ ಹಿಮೋಗ್ಲೋಬಿನ್ ಉತ್ಪಾದನೆಗೆ ಸಹಾಯ ಮಾಡುತ್ತವೆ. ಇದನ್ನು ಹಸಿಯಾಗಿ, ಬೇಯಿಸಿ. ಜ್ಯೂಸ್‌ ಮಾಡಿ… ಹೇಗಾದರೂ ತಿನ್ನಿ, ಅಂತೂ ಸಾಕಷ್ಟು ಹೊಟ್ಟೆ ಸೇರಲಿ.

ದಾಳಿಂಬೆ: ಈ ಹಣ್ಣಿನಲ್ಲಿ ಕಬ್ಬಿಣ ಮತ್ತು ವಿಟಮಿನ್‌ ಸಿ ಗಳೆರಡೂ ಇವೆ. ಈ ಮೂಲಕ ಹಿಮೋಗ್ಲೋಬಿನ್ ಹೆಚ್ಚು ಉತ್ಪಾದನೆ ಆಗುವುದಕ್ಕೆ ನೆರವಾಗುತ್ತದೆ. ದಾಳಿಂಬೆಯ ಬೀಜಗಳನ್ನು ಮೆಲ್ಲುವುದು ಆಗದಿದ್ದರೆ, ಇದರ ತಾಜಾ ರಸವನ್ನೂ ಕುಡಿ ಯಬಹುದು.

ನೀರು, ನಿದ್ದೆ: ದಿನಕ್ಕೆ ಎಂಟು ತಾಸು ನಿದ್ದೆ ಮತ್ತು ಎಂಟು ಗ್ಲಾಸ್‌ ನೀರು- ಇದನ್ನು ದಿನದ ಮಂತ್ರವಾಗಿಸಿಕೊಳ್ಳಿ. ದೇಹಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯದಿದ್ದರೆ ಕೆಂಪುರಕ್ತಕಣಗಳ ಉತ್ಪಾದನೆಯಲ್ಲಿ ತೊಡಕಾಗುತ್ತದೆ. ಇದು ಹಿಮೋಗ್ಲೋಬಿನ್‌ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ನೀರಿನ ಕೊರತೆಯಾದರೆ ರಕ್ತದ ಸಾಂದ್ರತೆ ಮತ್ತು ಪ್ರಮಾಣದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಈ ಬಗ್ಗೆ ಗಮನ ಬೇಕು.

ಇವು ಬೇಡ: ಕೆಲವು ಆಹಾರಗಳು ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತವೆ. ಉದಾ, ಕಾಫಿ, ಚಹಾದಂಥ ಕೆಫೇನ್‌ಯುಕ್ತ ಪೇಯಗಳು, ಕ್ಯಾಲ್ಶಿಯಂ ಸಾಂದ್ರವಾಗಿರುವ ಆಹಾರಗಳು, ನಾರುಭರಿತ ತಿನಿಸುಗಳನ್ನು ಊಟದ ಸಮಯ ದಲ್ಲಿ ದೂರ ಮಾಡಿ. ಇದರಿಂದ ಕಬ್ಬಿಣದಂಶ ಚೆನ್ನಾಗಿ ಹೀರಲ್ಪಡುತ್ತದೆ.

ದೂರ ಮಾಡಿ: ಆಲ್ಕೋಹಾಲ್‌ ಮತ್ತು ಜಡ ಜೀವನಗಳೆರಡೂ ಹಿಮೋಗ್ಲೋಬಿನ್ನ ಶತ್ರುಗಳು. ಆಲ್ಕೋಹಾಲ್‌ ಸೇವನೆಯಿಂದ ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳುವುದಕ್ಕೆ ಅಡಚಣೆ ಉಂಟಾಗುತ್ತದೆ. ಜಡ ಜೀವನವು ರಕ್ತ ಪರಿಚಲನೆಯ ಶತ್ರು. ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ ಕೆಂಪು ರಕ್ತಕಣಗಳ ಉತ್ಪಾದನೆ ಚೆನ್ನಾಗಿ ಆಗಿ, ರಕ್ತದ ಪರಿಚಲನೆಯೂ ಸರಾಗ ಇರುತ್ತದೆ.

Vishwavani

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *