
ಅಪರಾಧಿ ಮನೋಭಾವ ತೊರೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಲು ಯೋಗಭ್ಯಾಸ ಸಹಕಾರಿ: ಡಾ. ವಿಜಯಲಕ್ಷ್ಮಿ ಪಿ. ಹಿರಿಯ ವೈದ್ಯಾಧಿಕಾರಿ, ಸರ್ಕಾರಿ ಆಯುಷ್ ಮಂದಿರ ಜೆ ಎನ್ ಕೋಟೆ.

ಚಿತ್ರದುರ್ಗ: ಜೂ.18 ಜೈಲು ವಾತಾವರಣವು ಒತ್ತಡ, ಆತಂಕ, ಖಿನ್ನತೆ ಮತ್ತು ಹಿಂಸಾತ್ಮಕ ಪ್ರವೃತ್ತಿಗಳಿಗೆ ಪ್ರೇರಣದಾಯಕ ಕೆಲವು ವ್ಯಕ್ತಿಗಳ ಸಹವಾಸ ಮನಸ್ಸಿನ ಸ್ಥಿರತೆಯನ್ನು ಘಾಸಿಗೊಳಿಸಬಹುದು ಇಂತಹ ಪರಿಸ್ಥಿತಿಯಲ್ಲಿ, ಯೋಗವು ಬಂಧಿನಿವಾಸಿಗಳಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಸಾತ್ವಿಕ ಚಿಂತನೆಗಳ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಅನೇಕ ಪ್ರಯೋಜನಗಳನ್ನು ನೀಡಬಲ್ಲದು ಎಂದು ಆಯುಷ್ ಇಲಾಖೆಯ ಜೆ ಎನ್ ಕೋಟೆ ಆಯುಷ್ ಆರೋಗ್ಯ ಮಂದಿರದ ಹಿರಿಯ ಆಡಳಿತ ವೈದ್ಯಾಧಿಕಾರಿ ಡಾ. ವಿಜಯಲಕ್ಷ್ಮಿ ಪಿ. ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ಹಾಗೂ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ಇವರು ಸಂಯುಕ್ತವಾಗಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ದಿನಾಂಕ 18/6/2025ರ ಬುಧವಾರದಿಂದ ನಗರದ ಜಿಲ್ಲಾ ಕಾರಾಗೃಹದ ಬಂಧಿನಿವಾಸಿಗಳಿಗಾಗಿ ಏರ್ಪಡಿಸಿರುವ ಮೂರು ದಿನಗಳ ಯೋಗಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ ” ಪ್ರತಿದಿನದ ಯೋಗಾಭ್ಯಾಸವು ಖೈದಿಗಳಿಗೆ ತಮ್ಮ ಭೂತಕಾಲವನ್ನು ಮರೆತು ಭವಿಷ್ಯದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಲು ಸಹಾಯ ಮಾಡುತ್ತದೆ. ಇದು ಆಂತರಿಕ ಶಾಂತಿ ಮತ್ತು ಸಂತೋಷವನ್ನು ನೀಡಬಲ್ಲದು ” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಂಧಿಖಾನೆ ಅಧೀಕ್ಷಕರಾದ ಸಿದ್ಧರಾಮ ಬಿ.ಪಾಟೀಲ್ ಬಂಧಿನಿವಾಸಿಗಳನ್ನುದ್ಧೇಶಿಸಿ ಮಾತನಾಡಿ ಯಾವುದೇ ವ್ಯಕ್ತಿ ಸ್ವಂತಿಚ್ಚೆಯಿಂದ ಅಪರಾಧ ಮಾಡುವುದಿಲ್ಲ ಕಾಲ ಮತ್ತು ಪರಿಸ್ಥಿತಿಯ ಒತ್ತಡ ಅಪರಾಧ ಕೆಲಸಗಳನ್ನು ಮಾಡಿಸುತ್ತದೆ ಅಂತಹ ಪರಿಸ್ಥಿತಿಯಲ್ಲಿ ನಮ್ಮ ಮನಸ್ಸು ನಮ್ಮ ಬುದ್ಧಿ ನಮ್ಮ ಹಿಡಿತದಲ್ಲಿದ್ದರೆ ಯಾವುದೇ ವ್ಯಕ್ತಿ ಅಪರಾಧಿಯಾಗಿ ಜೈಲಿಗೆ ಬರುದಿಲ್ಲ ಯೋಗ ಧ್ಯಾನ ಕಲಿತು ಅಂತಹ ಕೆಟ್ಟ ಪರಿಸ್ಥಿತಿಯನ್ನು ಸಮಚಿತ್ತದಿಂದ ನಿಭಾಯಿಸುವ ಶಕ್ತಿಯನ್ನು ಪಡೆದು ಮುಂದೆ ಎಲ್ಲರೂ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಜೀವನ ನಡೆಸುವಂತಾಗಲಿ 11ನೇ ಅಂತರಾಷ್ಟ್ರೀಯ ಶುಭ ಸಂಧರ್ಭದಲ್ಲಿ ಜಿಲ್ಲಾ ಆಯುಷ್ ಇಲಾಖೆ ಹಾಗೂ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಜನರನ್ನು ಉತ್ತಮ ಆರೋಗ್ಯದೆಡೆಗೆ ಕೊಂಡೊಯ್ಯಲ ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದು ಹೇಳಿದರು.
ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಯೋಗ ಪ್ರಚಾರಕ ರವಿ ಕೆ.ಅಂಬೇಕರ್ ನೇತೃತ್ವದಲ್ಲಿ ಸುಮಾರು 245ಕ್ಕೂ ಹೆಚ್ಚು ಬಂಧಿನಿವಾಸಿಗಳು ಯೋಗಭ್ಯಾಸ ಮಾಡಿದರು. ಯೋಗಭ್ಯಾಸದಲ್ಲಿ ಬಂಧಿಖಾನೆ ಪಾಲರಾದ ರಾಜೇಂದ್ರಕೊಪರ್ಡೆ, ಸಹಾಯಕ ಜೈಲರ್ ರಾಯಣ್ಣಯರ್ಕಲ್ , ಬಂಧಿಖಾನೆ ಶಿಕ್ಷಕರಾದ ಶ್ರೀರಾಮರೆಡ್ಡಿ ಉಪಸ್ಥಿತರಿದ್ದರು.