
ಚಿತ್ರದುರ್ಗ ಜೂ. 26 ಹುಬ್ಬಳ್ಳಿ ವಸತಿ ಯೋಜನೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಶಾಸಕ ಬಿ.ಆರ್. ಪಾಟೀಲ ಅವರು ಸತ್ಯವಾದ ಮಾತನ್ನೇ ಹೇಳಿದ್ದಾರೆ. ಕಾಂಗ್ರೆಸ್ನಲ್ಲಿ ಯಾವ ರೀತಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ವಸತಿ ಸಚಿವ ಜಮೀರ್ ಅಹ್ಮದ ಖಾನ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಚಿತ್ರದುರ್ಗ ಭಾರತೀಯ ಜನತಾ ಪಾರ್ಟಿಯ ಮಾದ್ಯಮ ವಕ್ತಾರ ನಾಗರಾಜ್ ಬೇದ್ರೇ ಆಗ್ರಹಿಸಿದರು
ಈ ಬಗ್ಗೆ ಹೇಳಿಕೆಯನ್ನು ನೀಡಿದ ಅವರು, ಹಲವು ಸಚಿವರ ಮೇಲೆ ಕಾಂಗ್ರೆಸ್ನ ನಾಯಕರೇ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರದ ಬಗೆ ತಿಳಿಯುತ್ತಿದೆ.ದೇಶದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಇರುವುದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎನ್ನುವುದು ಈ ಮೂಲಕ ಸಾಬೀತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಸಚಿವ ಜಮೀರ್ಅಹ್ಮದ್ ಖಾನ್ ಅವರ ಮೇಲೆ ಆರೋಪ ಬಂದಿದೆ. ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕು ಎಂದರು.
ಕಳೆದ ಎರಡು ವರ್ಷಗಳಿಂದ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದೇವೆ. ಆದರೆ ಸತ್ಯ ಗೊತ್ತಿದ್ದರೂ ಸಹ ಕಾಂಗ್ರೆಸ್ ನಮ್ಮ ಆರೋಪಗಳನ್ನು ಅಲ್ಲಗಳೆಯುತ್ತ ಬಂದರು. ಕ್ಷೇತ್ರಕ್ಕೆ ಮನೆ ಪಡೆಯಲು ಲಂಚ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಡಳಿತ ಪಕ್ಷದಲ್ಲಿರುವ ಕಾಂಗ್ರೆಸ್ ಶಾಸಕರೇ ನೇರವಾಗಿ ಸಚಿವರ ವಿರುದ್ದ ಆರೋಪ ಮಾಡಿದ್ದಾರೆ. ಇದನ್ನು ವಿರೋಧ ಪಕ್ಷ ಬಿಜೆಪಿ ಆರೋಪಿಸಿಲ್ಲ. ತಮ್ಮ ಪಕ್ಷದ ಹಿರಿಯ ಹಾಗೂ ಅನುಭವಿ ಶಾಸಕ ಬಿಆರ್. ಪಾಟೀಲ ಅವರು ಆಡಿಯೋದಲ್ಲಿ ಮನೆ ಹಂಚಿಕೆ ಸಚಿವರ ವಿರುದ್ಧ ಸಿಡಿದೆದ್ದಾರೆ. ಬಡವರ ಮನೆ ಹಂಚಿಕೆ ಹೆಸರಿನಲ್ಲಿ ಹಣ ಪಡೆದ ಆರೋಪ ಎದುರಿಸುತ್ತಿರುವ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಮತ್ತು ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಹಿರಿಯ ಶಾಸಕರ ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಬೇಕು ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.