ಕ್ಯಾಮೆರಾವನ್ನು ಕಂಡಿದ್ದೀರಲ್ಲವೆ? ಬಹುತೇಕ ಕಣ್ಣಿನ ಹೋಲಿಕೆಗೆ ಇದು ಸರಳ ವಸ್ತು. ಪುಟ್ಟ ಮಗುವಾಗಿ ನಾವು ಕಣ್ಣು ತೆರೆದಾಗ ನಮ್ಮ ಕ್ಯಾಮೆರಾ ಚಾಲೂ. ಕೊನೆಗೆ ನಾವು ಕಣ್ಮುಚ್ಚುವಾಗ ಈ ವ್ಯಾಪಾರ ಬಂದ್. ವಸ್ತು ಸ್ಥಿರ, ಚಲನಾಶೀಲ, ಪ್ರಖರ, ರಂಗು ರಂಗಿನದ್ದಿರಲಿ. ಇದು ನಿರಂತರ ಕೆಲಸ ಮಾಡುತ್ತಲೇ ಇರುತ್ತದೆ.
ಕಂಡ ಪ್ರತಿ ಚಿತ್ರದ ಸಂಗ್ರಹಕ್ಕಿದೆ ಮಿದುಳೆಂಬ ಆಲ್ಬಂ. ನಾವು ಕಂಡ ವಸ್ತು ಇತರರು ಅನುಭವಿಸಲಾಗದು. ಅಬ್ಬ! ಅದೆಂತಹ ದೈವಕೃತ ಕ್ಯಾಮೆರಾ, ಈ ಕಣ್ಣುಗಳು ಅಲ್ಲವೆ? ಕಣ್ಣಿನ ಆರೋಗ್ಯರಕ್ಷಣೆಯ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿಯೋಣ:
* ಪೌಷ್ಟಿಕ ಆಹಾರದ ಕೊರತೆಯಿಂದ ಕಣ್ಣಿಗೆ ತೊಂದರೆ ಖಂಡಿತ. ಗರ್ಭಿಣಿಯಂತೂ ಹೇರಳ ಅನ್ನಾಂಗ ಭರಿತ ಸತ್ವಯುತ ಆಹಾರ ಸೇವಿಸುವುದು ಅನಿವಾರ್ಯ. ಅಪ್ಪ-ಅಮ್ಮನ ಕುಡಿತದ ಚಟದಿಂದ ಜೀವನಪೂರ್ತಿ ಮಕ್ಕಳು ತೊಂದರೆ ಅನುಭವಿಸಬೇಕಾಗುತ್ತದೆ. ಇದನ್ನು ‘ಮಾತಾಪಿತೃ ಅಪಚಾರಜನ್ಯ ವ್ಯಾಧಿ’ ಎನ್ನುತ್ತದೆ, ಆಯುರ್ವೇದ. ತಂದೆ-ತಾಯಿಯ ತಂಬಾಕು ಚಟ, ಮೂಗಿಗೆ ಸೇದುವ ತಂಬಾಕು ಪುಡಿ ನಸ್ಯ ಕೂಡ ಕಣ್ಣಿನ ತೊಂದರೆಗಳಿಗೆ ಮೂಲಕಾರಣವಾಗಬಲ್ಲವು.
* ಸಿರಿತನದ ಹಲವು ಕಾಯಿಲೆಗಳಿವೆ. ಇವನ್ನು ಆಯುರ್ವೇದದ ಪರಿಭಾಷೆಯಲ್ಲಿ ‘ಸಂತರ್ಪಣಜನ್ಯ ವಿಕಾರ’ ಎನ್ನುವರು. ಮಿತಿ ಮೀರಿದ ಬೊಜ್ಜುತನ, ಮಧುಮೇಹ, ರಕ್ತದ ಏರೊತ್ತಡದಂತಹ ಕಾಯಿಲೆಗಳಿಗೂ ನೇತ್ರರೋಗಗಳಿಗೂ ಗಾಢ ಸಂಬಂಧವಿದೆ. ನೇತ್ರಗೋಲದ ಹಿರಿ ಕಿರಿ ರಕ್ತನಾಳಗಳಲ್ಲಿ ರಕ್ತದ ಹರಿವಿಗೆ ಅಡ್ಡಿ ಆತಂಕಗಳಿಂದಾಗಿ ಹೊಸ ಪೀಳಿಗೆ ಸವಾಲುಗಳನ್ನು ಎದುರಿಸಬೇಕಿದೆ.
* ಪ್ರತಿಕೂಲ ಹವಾಮಾನ ಮತ್ತು ಕಣ್ಣಿನ ಆರೋಗ್ಯಕ್ಕೆ ಸಂಬಂಧ ಇದೆ. ದೂಳು, ಹೊಗೆ, ತುಂಬಾ ಉಷ್ಣತೆಗೆ ಒಡ್ಡಿಕೊಳ್ಳುವುದು ಸಹ ದೃಷ್ಟಿಯ ಅರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ರೇಡಿಯೇಶನ್ ಅಥವಾ ಪ್ರಖರ ಬಿಸಿಲ ಝಳದಿಂದ ಕಣ್ಣುಗಳನ್ನು ಸಂರಕ್ಷಿಸಿಕೊಳ್ಳುವುದು ಅತ್ಯಗತ್ಯ. ಗ್ರಹಣದ ಸಂದರ್ಭದಲ್ಲಿ ಇದು ಹೆಚ್ಚು ಸ್ಪಷ್ಟ; ಬರಿಗಣ್ಣಿನಿಂದ ಗ್ರಹಣವನ್ನು ವೀಕ್ಷಿಸುವುದರಿಂದ ಅಪಾಯವಿದೆ.
* ಕೆಂಗಣ್ಣು ಎಂಬ ಸಾಂಕ್ರಾಮಿಕ ನೇತ್ರರೋಗವೂ ಕೆಲಸದ ಪರಿಸರ ಮತ್ತು ಸಾಂಕ್ರಾಮಿಕ ಬೇನೆಯ ರೂಪದಲ್ಲಿ ಕಾಡುವ ಭಯವಿದೆ. ಚಿನ್ನ-ಬೆಳ್ಳಿಯ ಕೆಲಸಗಾರರಂಥವರು ಅಮ್ಲವಸ್ತುಗಳಿಗೆ ಒಡ್ಡಿಕೊಳ್ಳುವುದು ಸಹಜ. ಔಷಧ ತಯಾರಿಕೆ ಕಂಪೆನಿ, ಪ್ಲಾಸ್ಟಿಕ್ ಇತ್ಯಾದಿ ಕೃತಕ ವಸ್ತು ತಯಾರಿಕೆ ಕಾರ್ಖಾನೆಯ ಪರಿಸರಕ್ಕೆ ಸತತ ಒಡ್ಡಿಕೊಳ್ಳುವಿಕೆ ಕೂಡ ಕಣ್ಣಿನ ಆರೋಗ್ಯಕ್ಕೆ ಮಾರಕ. ಕಬ್ಬಿಣವನ್ನು ಕತ್ತರಿಸುವ ಮತ್ತು ಬೆಸೆಯುವ ವೆಲ್ಡಿಂಗ್ ಕಾರ್ಮಿಕರ ಕಸುಬಿಗೆ ಪ್ರಖರ ಬೆಳಕು ಅನಿವಾರ್ಯ. ಇವರು ಸಹ ಎಚ್ಚರದಿಂದ ಕೆಲಸವನ್ನು ನಿರ್ವಹಿಸಬೇಕು. ಬಾಲಕಾರ್ಮಿಕರು ಖಂಡಿತ ಇಂತಹ ದುಡಿಮೆಗೆ ಪ್ರವೃತ್ತರಾಗಕೂಡದು.
* ಇಂದಿನ ದಿನಮಾನದ ಹೊಸ ಸಮಸ್ಯೆ ಮೊಬೈಲ್, ಟ್ಯಾಬ್, ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ಕೆಲಸದ ರೇಡಿಯೇಷನ್. ದಿನದಿನವೂ ಕನ್ನಡಕಧಾರಿಗಳ ಸಂಖ್ಯೆ ಏರುಮುಖವಾಗುತ್ತಿದೆ. ಕೊರೋನೋತ್ತರ ದಿನಗಳಲ್ಲಿ ‘ಆನ್‌ಲೈನ್ ತರಗತಿ’ ಎಂಬ ಬೆಳವಣಿಗೆಯಂತೂ ಕಣ್ಣಿನ ಹೊಸ ಹೊಸ ಸಮಸ್ಯೆಗಳಿಗೆ ಕಾರಣೀಭೂತ. ಹಗಲಿರುಳು ದುಡಿಮೆಯ ಪಾಳಿಯ ಸಾಫ್ಟ್‍ವೇರ್ ಉದ್ಯೋಗಿಗಳಿಗೆ ದೇಹದ ಆರೋಗ್ಯವೇ ದೊಡ್ಡ ಸವಾಲಾಗುತ್ತಿದೆ.
ಎಚ್ಚರಿಕೆಗಳು:
* ಪುಸ್ತಕವನ್ನು ಓದುವಿರಾ. ಮುಂದಿನ ಅಕ್ಷರ ತನಕ ಗಮನವಿಟ್ಟು ಹಿಂಬದಿ ಬೆಳಕಿಗೆ ಆಸ್ಪದವಿರಲಿ.
* ಸದಾ ಕಾಲ ಸಾರ್ವದೈಹಿಕ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿರಿ. ಕಣ್ಣಿನ ಪೊರೆಗೆ ಕಡಿವಾಣ ಖಂಡಿತ.
* ಕೇವಲ ನೋಡುವ ಕೆಲಸ ಕಣ್ಣಿನದು. ಅನುಭವ ಪ್ರಕಾರ ಕಂಡದ್ದು ಯಾವುದು ಎಂದು ಗುರುತಿಸುವುದು ಮನಸ್ಸು ಎಂಬುದು ನೆನಪಿಡಿ. ಮಾನಸಿಕ ಸ್ವಾಸ್ಥ್ಯ ಚೆನ್ನಾಗಿದ್ದರೆ ದೈಹಿಕ ಆರೋಗ್ಯವೂ ಸೈ.
* ಉದಯಾಸ್ತದ ಕೆಂಪು ಗೋಲದ ಸೂರ್ಯ ದರ್ಶನಕ್ಕೆ ಸುಶ್ರುತನ ಪ್ರಕಾರ ನಿಷೇಧ ಇದೆ.
* ಕಣ್ಣಿನ ವ್ಯಾಯಾಮಕ್ಕೆ ಪಾಣಿತಲಸ್ಪರ್ಶದ ವಿಶೇಷ ವಿಧಾನವಿದೆ. ಕುಳಿತಂತೆ ವಿಶ್ರಾಂತ ಭಂಗಿಯಿರಲಿ. ಅಂಗೈ ಉಜ್ಜುತ್ತಾ ಕಣ್ಣಿನ ಮೇಲಿರಿಸಿ. ಎರಡೂ ಕಣ್ಣುಗಳನ್ನು ಮುಚ್ಚಿ, ಅವುಗಳನ್ನು ಉಜ್ಜಿದ ಕೈಗಳಿಂದ ಮುಟ್ಟುವ ಸಕೋಮಲ ಸ್ಪರ್ಶವೇ ಇದು. ನಿದ್ರಿಸಿದಾಗ ದೊರೆಯುವ ಉಪಕಾರಕ್ಕಿಂತ ಇದು ಮಿಗಿಲು.
* ನುಗ್ಗೆ, ಚಕ್ಕೋತ, ಹರಿವೆ, ಅಣ್ಣೆಸೊಪ್ಪು ಮತ್ತು ಪುನರ್ಕವಿ ಸೊಪ್ಪು ಬಳಸಿದರೆ ನೇತ್ರಾರೋಗ್ಯ ಖಂಡಿತ.