ವರದಿ ಮತ್ತು ಪೋಟೋ ವೇದಮೂರ್ತಿ ಭೀಮ ಸಮುದ್ರ.
ಚಿತ್ರದುರ್ಗ, ಜುಲೈ 8 –ಭೀಮಸಮುದ್ರ ಸಮೀಪದ ಹಿರೇಗುಂಟನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಈ ಶೈಕ್ಷಣಿಕ ವರ್ಷದಿಂದ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದೊಂದಿಗಿನ ಒಂದನೇ ತರಗತಿ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮವೊಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ರದುರ್ಗದ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಎಸ್. ಮಂಜುನಾಥ್ ವಹಿಸಿದ್ದರು. ಅವರು ಭಾಷಣ ಮಾಡುತ್ತಾ, “ಡಾ. ಸರ್ ಎಂ. ವಿಶ್ವೇಶ್ವರಯ್ಯನವರು ಕನ್ನಡ ಮಾಧ್ಯಮದಲ್ಲಿ ಓದಿ ಇಂಜಿನಿಯರ್ ಆಗಿ ದೇಶಕ್ಕೆ ಸೇವೆ ಸಲ್ಲಿಸಿದರು. ನಾವು ನಮ್ಮ ಮಾತೃಭಾಷೆಯಾದ ಕನ್ನಡವನ್ನು ಗೌರವಿಸಬೇಕು” ಎಂದು ಕರೆ ನೀಡಿದರು.
ಅವರು ತಮ್ಮ ಬದುಕಿನ ಅನುವುಗಳನ್ನು ಹಂಚಿಕೊಂಡು, “ನಮ್ಮ ತಂದೆ ಶಾಸಕರಾಗಿದ್ದರೂ ನಮ್ಮನ್ನು ಸರ್ಕಾರಿ ಶಾಲೆಯಲ್ಲಿ ಸೇರಿಸಿ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡಿಸಿದ್ರು. ನಾವು ಎಲ್ಲರೂ ಕನ್ನಡದ ಮೊಲೆಮೇಲೆ ಬೆಳೆದವರು. ಇಂದಿನ ಕಾಲದಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಆದರೆ ಹಿಂದಿನ ಕಾಲದ ಮಕ್ಕಳು ಕನ್ನಡದಲ್ಲಿ ಓದಿ ಉನ್ನತ ಹುದ್ದೆಗಳವರೆಗೆ ತಲುಪಿದ್ದಾರೆ” ಎಂದರು.
ಇನ್ನೂ ಮುಂದುವರಿದು, “ಸರ್ಕಾರದ ಆದೇಶದಂತೆ ಇಂಗ್ಲಿಷ್ ಮಾಧ್ಯಮ ಆರಂಭವಾಗಿರುವುದು ಸಂತಸದ ವಿಷಯ. ಕನ್ನಡದಲ್ಲಿ 53 ಅಕ್ಷರಗಳಿದ್ದರೆ ಇಂಗ್ಲಿಷ್‌ನಲ್ಲಿ ಕೇವಲ 26 ಮಾತ್ರ. ಆದರೂ ಇಂಗ್ಲಿಷ್ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿರುವುದು ಈಗಿನ ಕಾಲದ ವೈಶಿಷ್ಟ್ಯ. ಆದರೆ ಮಾತೃಭಾಷೆಗೂ ಸಮಾನ ಗೌರವ ಇರಬೇಕು. ಮಕ್ಕಳು ಈ ಹೊಸ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು, ಮುಂದೆ ವಿದ್ಯಾವಂತರಾಗಿ ಶಾಲೆ ಮತ್ತು ಪಾಲಕರಿಗೆ ಹೆಮ್ಮೆ ತರಬೇಕು” ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮುಖರು:
ಎಸ್.ಡಿ.ಎಂ.ಸಿ ಅಧ್ಯಕ್ಷ ತಿಪ್ಪೇಸ್ವಾಮಿ
ಉಪಾಧ್ಯಕ್ಷೆ ಶ್ರೀಮತಿ ನವೀನ್
ಗ್ರಾಮ ಪಂಚಾಯಿತಿ ಸದಸ್ಯರು ವಸಂತ್, ಜಾಕಿರ್, ಕುಮಾರಸ್ವಾಮಿ, ಮಲ್ಲಿಕಾರ್ಜುನ್, ಮಂಜುನಾಥ್, ಬಾಬು, ಪ್ರಸಾದ್
ಶಾಲಾ ಮುಖ್ಯಶಿಕ್ಷಕ ಎಚ್. ಆನಂದಪ್ಪ,
ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕಿಯರು ಮತ್ತು ಶಾಲೆಯ ಎಲ್ಲಾ ಮಕ್ಕಳು.