ಚಿತ್ರದುರ್ಗ :ಆಯುಷ್ ಇಲಾಖೆ ಯೋಗ ತರಬೇತುದಾರರು ಸಾಧ್ಯವಾದಷ್ಟು ಗ್ರಾಮದ ಮನೆಗಳ ಸರ್ವೇಕ್ಷಣೆ ನಡೆಸಿ ಕುಟುಂಬದ ಪ್ರತಿಯೊಬ್ಬರ ಆರೋಗ್ಯ ಸ್ಥಿತಿಯನ್ನು ಅರಿತು ರೋಗಕ್ಕೆ ಅನುಗುಣವಾಗಿ ಯೋಗಾಸನ-ಪ್ರಾಣಾಯಾಮಗಳನ್ನು ಕಲಿಸಿ ಔಷಧ ಮುಕ್ತ ಮತ್ತು ರೋಗ ಮುಕ್ತ ಗ್ರಾಮಗಳನ್ನಾಗಿ ಮಾಡುವ ಜವಾಬ್ದಾರಿ ವಹಿಸಬೇಕಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಚಂದ್ರಕಾಂತ ಎಸ್ ನಾಗಸಮುದ್ರ ತಿಳಿಸಿದ್ದಾರೆ.

ಶುಕ್ರವಾರ ನಗರದ ಜಿಲ್ಲಾ ಆಯುಷ್ ಕಚೇರಿಯಲ್ಲಿ ಯೋಗ ತರಬೇತುದಾರರಿಗಾಗಿ ಏರ್ಪಡಿಸಿದ್ದ ಆರೋಗ್ಯ ಸರ್ವೇಕ್ಷಣೆ ತರಬೇತಿ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡುತ್ತಾ ‘ದೀರ್ಘಕಾಲದ ಕಾಯಿಲೆಗಳಾದ ಮಧುಮೇಹ, ಸಂಧಿವಾತ ಮತ್ತು ರಕ್ತದೊತ್ತಡ ನಿರ್ವಹಣೆಯಲ್ಲಿ ಆಯುಷ್ ಪದ್ಧತಿಯ ಚಿಕಿತ್ಸೆ ಹಾಗೂ ಯೋಗಸನ ಪ್ರಾಣಾಯಾಮಗಳು ಪರಿಣಾಮಕಾರಿ ಎಂದು ಸಾಬೀತಾಗಿದೆ ಅವುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಆಯುಷ್ ಇಲಾಖೆಯ ಪ್ರತಿಯೊಬ್ಬರ ಜವಾಬ್ಧಾರಿಯಾಗಿದ್ದು ಈ ನಿಟ್ಟಿನಲ್ಲಿ ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮ ಸೇವೆಯ ಪರಿಣಾಮವಾಗಿ ಚಿತ್ರದುರ್ಗ ತಾಲ್ಲೂಕಿನ ಜೆ ಎನ್ ಕೋಟೆ ಆಯುಷ್ ಆರೋಗ್ಯ ಮಂದಿರವನ್ನು ಸರ್ಕಾರ ಆಯುಷ್ ಗ್ರಾಮವನ್ನಾಗಿ ಘೋಷಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ರೋಗಮುಕ್ತ ಗ್ರಾಮಕ್ಕಾಗಿ ಆಯುಷ್ ಗ್ರಾಮ ಯೋಜನೆ:

ಇದೇ ಸಂಧರ್ಭದಲ್ಲಿ ಆರೋಗ್ಯ ಸರ್ವೇಕ್ಷಣಾ ತರಬೇತಿಯನ್ನು ನೀಡಿ ಮಾತನಾಡಿದ ಜಿಲ್ಲಾ ಆಯುಷ್ ಇಲಾಖೆಯ ನೋಡಲ್ ಅಧಿಕಾರಿ ಡಾಕ್ಟರ್ ಶಿವಕುಮಾರ್ ಟಿ ಮಾತನಾಡಿ
ಆಯುಷ್ ಗ್ರಾಮ ಎಂಬುದು ಭಾರತ ಸರ್ಕಾರದ ಸಚಿವಾಲಯವಾದ ಆಯುಷ್ ಸಚಿವಾಲಯದ ಒಂದು ಕಾರ್ಯಕ್ರಮವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ, ಸೋವಾ-ರಿಗ್ಪಾ, ಮತ್ತು ಹೋಮಿಯೋಪತಿ ಮುಂತಾದ ಸಾಂಪ್ರದಾಯಿಕ ಆರೋಗ್ಯ ಪದ್ಧತಿಗಳನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಇದನ್ನು ಸ್ಥಾಪಿಸಲಾಗಿದೆ.
ಈ ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ ಗ್ರಾಮೀಣ ಭಾಗದ ಜನರು ಆಯುಷ್-ಆಧಾರಿತ ಜೀವನಶೈಲಿಯನ್ನು ಅಳವಡಿಸಿಕೊಂಡು, ಆರೋಗ್ಯ ರಕ್ಷಣೆಯಲ್ಲಿ ಈ ಸಾಂಪ್ರದಾಯಿಕ ವಿಧಾನಗಳನ್ನು ಬಳಸುವುದಕ್ಕೆ ಒತ್ತು ನೀಡುವುದಕ್ಕಾಗಿ ಮೊದಲು ಜನರ ಆರೋಗ್ಯ ಸ್ಥಿತಿಯನ್ನು ಅರಿತುಕೊಳ್ಳುವುದು ಅವಶ್ಯಕವಾಗಿದೆ ಅದಕ್ಕಾಗಿ ಆಯುಷ್ ಆರೋಗ್ಯ ಮಂದಿರಗಳ ವ್ಯಾಪ್ತಿಯ ಪ್ರತಿಯೊಂದು ಮನೆಗಳನ್ನು ಸರ್ವೇಕ್ಷಣೆ ಮಾಡುವ ಉದ್ದೇಶದಿಂದ ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಉದ್ದೇಶ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಆಯುಷ್ ಆಡಳಿತಾಧಿಕಾರಿ ವಿಶ್ವನಾಥ್ ಹಿರೇಮಠ್ , ಜಿಲ್ಲೆಯ ಎಲ್ಲಾ ಆಯುಷ್ ಆರೋಗ್ಯ ಮಂದಿರಗಳ ಯೋಗ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತಿ ಇದ್ದರು.
Views: 114