ಏಷ್ಯಾ ಕಪ್ ಹಾಕಿ: ಫೈನಲ್‌ ಸ್ಥಾನಕ್ಕಾಗಿ ಭಾರತ-ಚೀನಾ ನಿರ್ಣಾಯಕ ಪಂದ್ಯ ಇಂದು.

ರಾಜಗೀರ್‘: ಆತಿಥೇಯ ಭಾರತ ತಂಡವು ಏಷ್ಯಾ ಕಪ್ ಪುರುಷರ ಹಾಕಿ ಟೂರ್ನಿಯ ಫೈನಲ್‌ಗೆ ಒಂದೇ ಹೆಜ್ಜೆ ದೂರದಲ್ಲಿದೆ. ಉತ್ಸಾಹದಲ್ಲಿರುವ ಹರ್ಮನ್‌ಪ್ರೀತ್ ಸಿಂಗ್ ಪಡೆಯು ಶನಿವಾರ ನಡೆಯುವ ಸೂಪರ್ ಫೋರ್ ಹಂತದ ಕೊನೆಯ ಪಂದ್ಯದಲ್ಲಿ ಚೀನಾ ತಂಡವನ್ನು ಎದುರಿಸಲಿದೆ.


ಸೂಪರ್ ಫೋರ್ ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಸೋಲಿನಿಂದ ಬಚಾವಾಗಿದ್ದ ಭಾರತ ತಂಡ, ಮಲೇಷ್ಯಾ ವಿರುದ್ಧ ತೋರಿದ ಆಟದಿಂದ ಉಲ್ಲಸಿತವಾಗಿದೆ.

ಹೀಗಾಗಿ ಅಪಾಯಕಾರಿ ಚೀನಾ ವಿರುದ್ಧದ ಪಂದ್ಯಕ್ಕೆ ವಿಶ್ವಾಸದೊಡನೆ ಕಣಕ್ಕಿಳಿಯಲಿದೆ.

ಭಾರತ 2 ಪಂದ್ಯಗಳಿಂದ 4 ಅಂಕ ಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಚೀನಾ ಮತ್ತು ಮಲೇಷ್ಯಾ ತಲಾ ಮೂರು ಅಂಕ ಗಳಿಸಿವೆ. ಕೊರಿಯಾ (1 ಅಂಕ) ಕೊನೆಯ ಸ್ಥಾನದಲ್ಲಿದೆ. ಮೊದಲ ಎರಡು ಸ್ಥಾನ ಗಳಿಸುವ ತಂಡಗಳು ಫೈನಲ್‌ ಪ್ರವೇಶಿಸಲಿವೆ. ಈ ಪರಿಸ್ಥಿತಿಯಲ್ಲಿ ಡ್ರಾ ಮಾಡಿಕೊಂಡರೂ ಭಾರತ ಮುನ್ನಡೆಯಲಿದೆ.

ಮಲೇಷ್ಯಾ ಎದುರಿನ ಗೆಲುವಿನ ನಂತರ ಮಾತನಾಡಿದ ಕೋಚ್‌ ಕ್ರೇಗ್ ಫುಲ್ಟನ್ ಅವರು ‘ತಂಡ ಇನ್ನೂ ಪೂರ್ಣ ಪ್ರಮಾಣದಲ್ಲಿ ಪ್ರದರ್ಶನ ಮಟ್ಟಕ್ಕೆ ತಲುಪಿಲ್ಲ’ ಎಂದಿದ್ದರು.

ಮಿಡ್‌ಫೀಲ್ಡ್ ವಿಭಾಗ ಉತ್ತಮ ಪ್ರದರ್ಶನ ನೀಡಿದೆ. ಫಾರ್ವರ್ಡ್‌ ಆಟಗಾರರ ಜೊತೆ ಅವರ ಸಂಯೋಜನೆ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಗಮನಸೆಳೆದಿತ್ತು. ಹಾರ್ದಿಕ್ ಅವರಂತೂ ಉತ್ಸಾಹದ ಚಿಲುಮೆಯಾಗಿದ್ದರು. ಮನ್‌ಪ್ರೀತ್ ಅವರ ಅನುಭವವೂ ತಂಡಕ್ಕೆ ನೆರವಾಯಿತು.

ಆದರೆ ತಂಡ ಹಿನ್ನಡೆ ಕಂಡಿದ್ದು- ಪಾಲಿಗೆ ಬಂದ ಅವಕಾಶಗಳನ್ನು ಪರಿವರ್ತಿಸುವಲ್ಲಿ. ಹೀಗಾಗಿ ದಾಳಿಯ ವೇಳೆ ಏಕಾಗ್ರತೆ ಮತ್ತು ಸಂಯಮ ವಹಿಸುವ ಅಗತ್ಯವಿದೆ. ಪೆನಾಲ್ಟಿ ಕಾರ್ನರ್‌ ಪರಿವರ್ತನೆ ವಿಷಯದಲ್ಲೂ ಸುಧಾರಣೆ ಆಗಬೇಕಾಗಿದೆ. ಆರಂಭದಲ್ಲಿ ಹರ್ಮನ್‌ಪ್ರೀತ್ ಯಶಸ್ಸು ಕಂಡರೂ ನಂತರ ಅದೇ ಲಯದಲ್ಲಿ ಮುಂದುವರಿದಿಲ್ಲ. ಜುಗರಾಜ್, ಸಂಜಯ್, ಅಮಿತ್ ರೋಹಿದಾಸ್‌ ಸಹ ಸುಧಾರಿತ ಆಟವಾಡಬೇಕಿದೆ.

ಗುಂಪು ಹಂತದಲ್ಲಿ ಭಾರತದೆದುರಿನ 4-3 ಸೋಲಿನ ನಂತರ ಚೀನಾ ಸುಧಾರಿತ ಆಟವಾಡಿದೆ. ವಿಶ್ವ ಕ್ರಮಾಂಕದಲ್ಲಿ 22ನೇ ಸ್ಥಾನದಲ್ಲಿರುವ ಚೀನಿ ಪಡೆ ಹೋರಾಟದ ಪಂದ್ಯಗಳಲ್ಲಿ ಗಟ್ಟಿ ಮನೋಬಲ ಪ್ರದರ್ಶಿಸಿದೆ.

ಹೀಗಾಗಿ ಸಣ್ಣ ತಪ್ಪು ಸಹ ಭಾರತ ಪಾಲಿಗೆ ದುಬಾರಿಯಾಗಬಹುದು. ಈ ಟೂರ್ನಿಯ ವಿಜೇತರು ಮುಂದಿನ ವರ್ಷದ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವ ಕಾರಣ ಈ ಪಂದ್ಯವನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ.

ಮಲೇಷ್ಯಾ, ಶನಿವಾರ ಸೂಪರ್‌ಫೋರ್‌ನ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ.

ಪಂದ್ಯ ಆರಂಭ: 7.30

Views: 2

Leave a Reply

Your email address will not be published. Required fields are marked *